ಕೋಲಾರ: ಗೌರಿ ಗಣೇಶ ಹಬ್ಬಕ್ಕೆ ಜನ ಸಿದ್ದತೆ ನಡೆಸಿದ್ದು, ಹೂ-ಹಣ್ಣಿನ ಬೆಲೆ ಗಗನಕ್ಕೇರಿದರೂ ಜನರಲ್ಲಿ ಸಂಭ್ರಮವಂತೂ ಕಡಿಮೆಯಾಗಿಲ್ಲ, ಪ್ರತಿ ಬಡಾವಣೆ,ರಸ್ತೆ ರಸ್ತೆಗೂ ಗಣಪನ ಪ್ರತಿಷ್ಠಾಪನೆಗೆ ಸಿದ್ದತೆ ನಡೆದಿದ್ದು, ಯುವಕರಲ್ಲಿ ಹಬ್ಬದ ಖುಷಿ ಮನೆ ಮಾಡುವಂತಾಗಿದೆ.
ಸಾಮೂಹಿಕ ಗಣಪಗಳು ಗಲ್ಲಿಗೊಂದರಂತೆ ತಲೆಯೆತ್ತುತ್ತಿದ್ದು, ಎಲ್ಲಿ ನೋಡಿದರೂ ಗಣಪನ ಪ್ರತಿಷ್ಟಾಪನೆಗೆ ಸಿದ್ದತೆಗಳು ಜೋರಾಗಿಯೇ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡುಬಂತು. ಹಣ್ಣು, ಹೂ, ಬಾಳೆದಿಂಡು, ತೆಂಗಿನಕಾಯಿ ಅಂಗಡಿಗಳು ಹಳೆ ಬಸ್ ನಿಲ್ದಾಣ, ರಂಗಮಂದಿರದ ಮುಂಭಾಗಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಹಬ್ಬಗಳ ಮುನ್ನಾ ದಿನ ಗಿಜಿಗಿಡುತ್ತಿದ್ದ ದೊಡ್ಡಪೇಟೆಯಲ್ಲಿ ದಿನಸಿ, ಬಟ್ಟೆ, ತರಕಾರಿ ಖರೀದಿಗೆ ಮಾತ್ರ ಒತ್ತಡ ಕಂಡು ಬರುತ್ತಿದೆ. ಎಲ್ಲಿ ನೋಡಿದರೂ ಸಾಲುದ್ದ ಹಣ್ಣಿನ ಅಂಗಡಿಗಳು, ರಸ್ತೆ ಬದಿಯ ಪುಟ್ಪಾತ್ಗಳಲ್ಲಿ ಲೆಕ್ಕವಿಲ್ಲದಷ್ಟು ಹೂವಿನ ಅಂಗಡಿಗಳು ಹಬ್ಬದ ವಹಿವಾಟಿನ ಭರಾಟೆಗೆ ಇಂಬು ನೀಡಿವೆ.
ಇದನ್ನೂ ಓದಿ: Ganesha Chaturthi 2024: ಮನೆಯಲ್ಲಿ ಪೂಜೆ ಮಾಡಲು ಗಣೇಶನ ಸೊಂಡಿಲು ಯಾವ ಕಡೆ ಇದ್ರೆ ಒಳ್ಳೆಯದು?
ತರಾವರಿ ಹೂಗಳು ಬೆಲೆ ಗಗನಮುಖಿ:
ಹಳೆ ಬಸ್ನಿಲ್ದಾಣದಲ್ಲಿ ವಿವಿಧ ತರಾವರಿ ಹೂಗಳನ್ನು ರಾಶಿ ಹಾಕಿ ಮಾರುತ್ತಿದ್ದರೆ, ರಂಗಮಂದಿರದ ಮುಂಭಾಗದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಣ್ಣಿನ ಅಂಗಡಿಗಳು, ಬಾಳೆಗಿಡ, ವಿವಿಧ ತರಾವರಿ ಪ್ಲಾಸ್ಟಿಕ್ ಹೂಗಳ ಅಂಗಡಿಗಳು ತಲೆಯೆತ್ತಿವೆ. ಇಡೀ ರಸ್ತೆಯಲ್ಲಿ ವಾಹನ ಸಂಚಾರವೂ ಕಷ್ಟವಾಗಿದ್ದು, ಎಲ್ಲಿ ನೋಡಿದರೂ ಜನಜಂಗುಳಿ, ವ್ಯಾಪಾರದ ಭರಾಟೆ ಸಾಗಿರುವುದರಿಂದ ಬಸ್ಸುಗಳ ಸಂಚಾರವನ್ನು ಈ ರಸ್ತೆಯಲ್ಲಿ ನಿಷೇಧಿಸಲಾಗಿದೆ.
ಗಣೇಶ 200 ರೂ.ನಿಂದ 30 ಸಾವಿರದವರೆಗೂ ಮಾರಾಟ:
ಗಣೇಶ ಮೂರ್ತಿಗಳ ಅಂಗಡಿಗಳನ್ನು ಇದೇ ಮೊದಲ ಬಾರಿಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಟ್ಟಿದ್ದು, ಜತೆಗೆ ವಿವಿಧ ಬಡಾವಣೆಗಳ ಮುಖ್ಯರಸ್ತೆಗಳು, ನಗರದ ಬಸ್ ನಿಲ್ದಾಣದ ಪಕ್ಕದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗ, ಟೇಕಲ್ ರಸ್ತೆಗಳಲ್ಲಿ ಗಣಪನ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ. ಪರಿಸರ ರಕ್ಷಣೆಗೆ ಜನತೆಯೂ ಸ್ವಯಂಪ್ರೇರಿತರಾಗಿ ಒತ್ತು ನೀಡಿರುವುದರಿಂದ ಈ ಬಾರಿ ನಾಗರೀಕರು ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಜನರ ಆಶಯಕ್ಕೆ ತಕ್ಕಂತೆ ಬರಿ ಜೇಡಿ ಮಣ್ಣಿನಿಂದ ಮಾಡಿದ ಮತ್ತು ಬಣ್ಣ ಲೇಪಿಸದ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದ್ದು, ಕಲಾವಿದರೂ ಸಹಾ ಇಂತಹ ಮೂರ್ತಿಗಳನ್ನೇ ಹೆಚ್ಚು ತಯಾರಿಸಿ ವ್ಯಾಪಾರಕ್ಕಿಟ್ಟಿದ್ದಾರೆ.
ಹೂ, ಹಣ್ಣಿನ ಬೆಲೆ ಗಗನಕ್ಕೆ:
ಹೂ, ಹಣ್ಣಿನ ಬೆಲೆಯೂ ಏರಿಕೆಯಾಗಿದ್ದು, ಹಬ್ಬದ ಕಾರಣದಿಂದಲೇ ವ್ಯಾಪಾರಿಗಳು ಬೆಲೆ ಏರಿಸಿದ್ದಾರೆ. ಬಾಳೆ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಪ್ರತಿ ಕೆಜಿಗೆ 130 ರೂ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಸೇಬು-200 ರಿಂದ 250 ರೂ.ಗಳವರೆಗೂ, ಮೂಸಂಬಿ-100ರಿಂದ 120, ದಾಳಿಂಬೆ-180 ರಿಂದ 200, ಪಚ್ಚಬಾಳೆ ಕೆಜಿಗೆ 40 ರೂ.ಗೆ ಮಾರಾಟವಾಗುತ್ತಿದೆ. ಹಬ್ಬ ಆಚರಣೆಗಾಗಿ ಕನಿಷ್ಟ ಐದು ರೀತಿಯ ಹಣ್ಣುಗಳನ್ನು ನೈವೇದ್ಯಕ್ಕಿಡಬೇಕಂಬ ಸಂಪ್ರದಾಯ ಪಾಲನೆಯಿಂದಾಗಿ ಪ್ರತಿಯೊಬ್ಬರು ಹಣ್ಣಿನ ಖರೀದಿ ಮಾಡುತ್ತಿರುವುದರಿಂದ ವ್ಯಾಪಾರಿಗಳು ಗಾಳಿ ಬಂದಾಗ ತೂರಿಕೋ’ ಎಂಬ ನಾಣ್ಣುಡಿಯಂತೆ ಬೆಲೆ ಏರಿಸಿ ವಸೂಲಿ ಮಾಡುವ ಪ್ರಯತ್ನ ನಡೆಸುತ್ತಿದ್ದರೂ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳು ತಲೆಯೆತ್ತಿದ್ದು, ವ್ಯಾಪಾರದ ಪೈಪೋಟಿಯಿಂದಾಗಿ ದರ ಕಡಿಮೆ ಮಾಡಲೇಬೇಕಾದ ಸ್ಥಿತಿಯೂ ಇದೆ.
ಹೂವಿನ ಹಾರಗಳು 10 ಸಾವಿರ ರೂವರೆಗೆ ಮಾರಾಟ:
ಹೊರ ರಾಜ್ಯಗಳಿಂದ ಹೂ ಮಾರುಕಟ್ಟೆಗೆ ಬಂದಿದ್ದರೂ ಹೂವಿನ ಬೆಲೆ ಕಡಿಮೆಯಾಗಿಲ್ಲ, ಬಟನ್ ರೋಸ್ ಈಗ 200 ರಿಂದ 250ರೂ, ಸೇವಂತಿ ಕೆಜಿಗೆ 200 ರೂಗಳಿಂದ 240, ಮಲ್ಲಿಗೆ 800ರೂ.ನಿಂದ ಒಂದು ಸಾವಿರ, ಕನಕಾಂಬರ ಅದರ ಹೆಸರೇ ಹೇಳುವಂತೆ ಕನಕದಂತೆ ಬೆಲೆ ಏರಿಸಿಕೊಂಡು ಕೆಜಿಗೆ 2ಸಾವಿರ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳು ಹಬ್ಬಕ್ಕೆ ಮೊದಲೇ ಬೆಲೆ ಏರಿಸಿಕೊಂಡು ಬೀಗುತ್ತಿರುವುದರಿಂದ ಹಬ್ಬದಿಂದಾಗಿ ದರ ಏರಿಕೆಯಾಯಿತು ಎಂಬ ಆರೋಪಗಳಂತೂ ಇಲ್ಲ. ಒಟ್ಟಾರೆ ಹಬ್ಬದ ಹೆಸರಲ್ಲಿ ನಾಗರೀಕರ ಜೇಬಿಗೆ ಕತ್ತರಿ ಬೀಳುವುದಂತೂ ದಿಟ.
ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗೆ ಬೆಲೆ ಏರಿಕೆಯ ತಾಪ ಕಣ್ಣೀರು ತರಿಸಿದ್ದರೂ, ಸಂಪ್ರದಾಯಬದ್ದವಾಗಿ ಹಬ್ಬ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಜನತೆ ಹಬ್ಬದ ಸಂಭ್ರಮಾಚರಣೆಯನ್ನು ಮಾತ್ರ ಮರೆತಿಲ್ಲ.