ನಾಳೆ ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಮೊದಲ ಹಂತದ ಉದ್ಘಾಟನೆ – ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ಈ ಬಾರಿಯ ಗೌರಿ ಹಬ್ಬದ ದಿನದಂದು ಗಂಗೆ ಮಾತೆಗೆ ಪೂಜೆ ಸಲ್ಲಿಸಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಉದ್ಘಾಟನೆ ಮಾಡುತ್ತಿರುವುದು ಬಹಳ ವಿಶೇಷವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. 

ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿ, ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ನಾಳೆ ಉದ್ಘಾಟನೆಯಾಗುತ್ತಿದೆ. ಇಲ್ಲಿಂದ 24 ಟಿಎಂಸಿ ನೀರನ್ನು ಎತ್ತಿ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ಉದ್ದೇಶಕ್ಕೆ ಪೂರೈಸಲಾಗುತ್ತಿದೆ. ಡಿಪಿಆರ್ ಮಾಡಿದ ಎಂಜಿನಿಯರ್ ಗಳಿಂದ ತಂತ್ರಜ್ಞರು, ಯೋಜನೆಗಾಗಿ ಜಮೀನು ನೀಡಿದ ರೈತರು ಎಲ್ಲರ ಪಾತ್ರ ಪ್ರಮುಖವಾಗಿದೆ” ಎಂದು ತಿಳಿಸಿದರು.

“ಈ ಯೋಜನೆಗೆ ಬಳಸಲಾಗಿರುವ ಯಂತ್ರ, ನೀರೆತ್ತುವ ತಂತ್ರಜ್ಞಾನ ನೋಡಿದರೆ ಒಂದು ವಿಸ್ಮಯ. ಹೆಚ್ಚಿನ ಹಣ ಖರ್ಚು ಮಾಡಿ ಯೋಜನೆ ಮಾಡಲಾಗಿದ್ದು, ಅಂತರ್ಜಲ ಹೆಚ್ಚಳಕ್ಕೆ ಈ ಯೋಜನೆ ಸಹಕಾರಿಯಾಗಿದೆ” ಎಂದರು. ಈ ಯೋಜನೆಯಿಂದ ನೀರು ತರಲು ಸಾಧ್ಯವೇ ಇಲ್ಲ. ನೀರು ಬಂದರೆ ಮೀಸೆ ಬೊಳಿಸಿಕೊಳ್ಳುತ್ತೇನೆ ಎಂದೆಲ್ಲಾ ಕೆಲವರು ಟೀಕೆ ಮಾಡಿದ್ದರು. ಹೀಗಾಗಿ ನಾನು ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿ ಮೊದಲ ಹಂತದ ಕಾಮಗಾರಿ ಮುಗಿಸಿ ನೀರನ್ನು ಎತ್ತಿದ್ದೇವೆ ಎಂದು ತಿಳಿಸಿದರು.

ಈ ಯೋಜನೆ ಮಾರ್ಗದಲ್ಲಿ ಕೆಲವು ಅರಣ್ಯ ಪ್ರದೇಶಗಳಲ್ಲಿ ಸಮಸ್ಯೆ ಇರುವ ಕಾರಣ ನೀರನ್ನು ವಾಣಿ ವಿಲಾಸ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಈ ಸಮಸ್ಯೆ ಬಗೆಹರಿದು ಕಾಮಗಾರಿ ಮುಗಿದರೆ ಈ ವರ್ಷದೊಳಗೆ ತುಮಕೂರಿನವರೆಗೆ ನೀರನ್ನು ತರಲಾಗುವುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಯೋಜನೆ ಉದ್ಘಾಟನೆ ಒಂದು ಹಬ್ಬವಾಗಿದೆ. ಗೌರಿ ಹಬ್ಬ ಪ್ರತಿ ವರ್ಷ ಬರುತ್ತದೆ. ಆದರೆ ನಾಳೆ ಗೌರಿ ಹಬ್ಬದ ದಿನ ಗಂಗೆ ಪೂಜೆ ಮಾಡುವುದು ಬಹಳ ವಿಶೇಷ. ಎಲ್ಲಾ ಪಕ್ಷದ ನಾಯಕರಿಗೆ, ಶಾಸಕರು, ರೈತ ಮುಖಂಡರು ಕಾರ್ಯಕ್ರಮಕ್ಕೆ ಬಂದು ಈ ಗಳಿಗೆಗೆ ಸಾಕ್ಷೀಯಾಗಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಬಿಜೆಪಿಯವರು ಏನು ಮಾಡಿದ್ದರು?:
ಬೆಂಗಳೂರು ಗಾರ್ಬೇಜ್ ಸಿಟಿಯಾಗುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿ ಇರುವುದೇ ಟೀಕೆ ಮಾಡಲು, ರಾಜಕಾರಣ ಮಾಡಲು. ಈ ಸಮಸ್ಯೆಗೆ ಪರಿಹಾರ ನೀಡಲು ನಾನು ಪ್ರಯತ್ನವಾದರೂ ಮಾಡುತ್ತಿದ್ದೇನೆ. ಈ ಬಗ್ಗೆ ಅಧ್ಯಯನ ಮಾಡಲು, ಚೆನ್ನೈ, ಹೈದರಬಾದ್, ಮುಂಬೈಗೆ ಭೇಟಿ ನೀಡಿದ್ದೆ. ನಗರದ ಹೊರಗೆ ಕಸ ವಿಲೇವಾರಿಗೆ ನಾಲ್ಕು ಕಡೆಗಳಲ್ಲಿ ಜಾಗ ಹುಡುಕಲಾಗಿದೆ. ಹೀಗೆ ನನ್ನದೇ ಆದ ಪ್ರಯತ್ನ ಮಾಡುತ್ತಿದ್ದೇನೆ. ಅವರು ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.

ಡಿಸಿಎಂ ಕೇವಲ ಪ್ರಚಾರಕ್ಕೆ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಿದ್ದು, ಕೆಲಸ ಆಗುತ್ತಿಲ್ಲ ಎಂಬ ಟೀಕೆ ಬಗ್ಗೆ ಕೇಳಿದಾಗ, “ನಾನು ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ನಮ್ಮ ಕೆಲಸಗಳೇ ನಿಮ್ಮ ಕಣ್ಣಿಗೆ ಕಾಣಲಿದೆ” ಎಂದು ತಿಳಿಸಿದರು. ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದಾಗ, “ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಕನ್ನಡ ಚಿತ್ರರಂಗದಲ್ಲಿ ಮೀ ಟೂ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚನೆಗೆ ಆಗ್ರಹದ ಬಗ್ಗೆ ಕೇಳಿದಾಗ, “ನನಗೆ ಮೀ ಟೂ ವಿಚಾರವಾಗಿ ಹೆಚ್ಚಿನ ಮಾಹಿತಿಯಿಲ್ಲ. ಈ ವಿಚಾರವಾಗಿ ತಿಳಿದು ಮಾತನಾಡುತ್ತೇನೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *