ಕೋಲಾರದಲ್ಲಿ ರೈತ ಸಂಘದಿಂದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ

ಕೋಲಾರ: ಮಣ್ಣಿಗೆ ಪೂಜೆ ಮಾಡಿ ರಾಸಾಯನಿಕ ಕೃಷಿ ಬಿಡಿ ಸಾವಯುವ ಕೃಷಿ ಕಡೆ ಮುಖ ಮಾಡಿ ಎಂಬ ಸಂದೇಶದೊಂದಿಗೆ ಪ್ರಗತಿ ಪರ ರೈತರಿಗೆ ಸನ್ಮಾನ ಮಾಡುವ ಮುಖಾಂತರ ನಗರದ ಕಾಲೇಜು ವೃತ್ತದಲ್ಲಿ ರೈತ ಸಂಘದಿದ ವಿಶ್ವ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಂಗಳಾ, ಮನುಷ್ಯ, ಜೀವ ಸಂಕುಲ ಸತ್ತರೆ ಮಣ್ಣಿಗೆ ಸೇರುತ್ತೇವೆ, ಮಣ್ಣೇ ಸತ್ತರೆ ಎಲ್ಲಿಗೆ ಎಂದು ಪ್ರಶ್ನೆ ಮಾಡಿ, ಮಣ್ಣಿನ ಉಳಿವಿಗಾಗಿ ರೈತರು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಉಪಯೋಗಿಸದಂತೆ ಪ್ರತಿಜ್ಞೆ ಮಾಡುವ ಜೊತೆಗೆ ಸಾವಯವ ಕೃಷಿಗೆ ಪ್ರಾಮುಖ್ಯತೆ ನೀಡಿ ಗುಣಮಟ್ಟದ ತರಕಾರಿಗಳನ್ನು ಬೆಳೆದು ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಣ್ಣಿನ ಪೂಜೆ ನಂತರ ಗೋಪೂಜೆ, ರಾಗಿ ಭತ್ತ ತರಕಾರಿಗಳಿಗೆ ಪೂಜೆ ಮಾಡಿ ಹಂಚುವ ಮುಖಾಂತರ ರೈತರು ಬೆವರ ಹನಿ ಸುರಿಸಿ ಕಷ್ಟಪಡುವುದು ದೇಶಕ್ಕೆ ಅನ್ನ ಹಾಕುವುದಕ್ಕೆ ಎಂದು ರೈತರ ಕಷ್ಟದ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಸವಿಸ್ತಾರವಾಗಿ ಹಿತನುಡಿಗಳನ್ನಾಡಿದರು.

ಸಮಾಜ ಸೇವಕ ಕೆ.ಎನ್.ಎನ್ ಪ್ರಕಾಶ್ ಮಾತನಾಡಿ, ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹರಿದ ನಂತರ ಟೊಮೇಟೊ ಮತ್ತಿತರರ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಆದರೂ ಕೆಸಿ ವ್ಯಾಲಿ 3ನೇ ಹಂತದ ಶುದ್ಧೀಕರಣ ಮಾಡಿ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡುವ ಜೊತೆಗೆ ಕೋಲಾರ ಜಿಲ್ಲೆಯ ಟೊಮೇಟೊ ಸಂಪೂರ್ಣವಾಗಿ ಕುಸಿದಿದೆ. ಹೊರ ಜಿಲ್ಲೆಗಳಿಂದ ಬರುವ ಟೊಮೇಟೊ ಅವಕದಿಂದ ಕೋಲಾರ ಮಾರುಕಟ್ಟೆ ನಡೆಯುವ ಪರಿಸ್ಥಿಯಿದೆ ಎಂದು ವಿಷಾದಿಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಇತ್ತೀಚೆಗೆ ತೋಟಗಾರಿಕಾ ವಿಜ್ಞಾನಿಗಳು ನೀಡಿರುವ ವರದಿ ಇಡೀ ರೈತಕುಲವನ್ನೇ ಕಂಗಾಲಾಗಿಸಿದೆ. ಜಿಲ್ಲೆಯ ರೈತರು ಬೆಳೆಯುವ ತರಕಾರಿಗಳಲ್ಲಿ ವಿಷಕಾರಿ ಅಂಶ ಹೆಚ್ಚಾಗಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೀಡಿರುವ ವರದಿ ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಗೊಳಿಸಿ ಕಲುಶಿತಗೊಂಡಿರುವ ಕೃಷಿ ಕ್ಷೇತ್ರ ಸುಧಾರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತ ಜಾಗೃತಿ ಮೂಡಿಸಬೇಕು ಜೊತೆಗೆ ನಾವೆಲ್ಲರೂ ಸಾವಯುವ ಕೃಷಿ , ಮಿಶ್ರ ಬೆಳೆ ಬೆಳೆಯುವ ಮೂಲಕ ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶದ ರಸ್ತೆ, ಕುಡಿಯುವ ನೀರು ಮೂಲಭೂತ ಸೌಕರ್ಯಗಳ ಜೊತೆಗೆ ಹದಗೆಟ್ಟಿರುವ ಶಿಥಿಲಗೊಂಡಿರು ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ ಅಭಿವೃದ್ಧಿಪಡಿಸಿ ಬಡ, ರೈತ, ಕೂಲಿಕಾರ್ಮಿಕರ ಮಕ್ಕಳ ಶಿಕ್ಷಣವನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ, ಹದಗೆಟ್ಟಿರುವ ಮಣ್ಣಿನ ಫಲವತ್ತತೆ ಹೆಚ್ಚಳ ಮಾಡಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಆದ್ಯತೆ ನೀಡದೇ ಇದ್ದರೆ ಕೋಲಾರ ಜಿಲ್ಲೆಯ ರೈತರ ಕೃಷಿ ಭೂಮಿ ಫಲವತ್ತತೆ ಕಳೆದುಕೊಂಡು ಕೃಷಿಯನ್ನೇ ಮರೆಯಬೇಕಾಗುತ್ತೆ ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸರ್ಕಾರಗಳು ರೈತಪರ ನಿಲ್ಲಬೇಕು. ರಸ್ತೆ, ಕೈಗಾರಿಕೆ, ಹೆಸರಿನಲ್ಲಿ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಟ್ಟು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಬೆಳನಷ್ಟ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಿದೆ. ಅಂಕಿ ಅಂಶಗಳ ಪ್ರಕಾರ ಒಂದು ಎಕರೆ ಬೆಳೆ ಬೆಳೆಯಲು ಆಗುವ ಖರ್ಚುವೆಚ್ಚಗಳ ಆಧಾರದ ಮೇಲೆ ಪ್ರತಿ ಎಕರೆಗೆ ಕನಿಷ್ಟ 1 ಲಕ್ಷ ಪರಿಹಾರ ನೀಡುವ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಸರ್ಕಾರ ಕೂಡಲೇ 3 ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದು ಯಾವುದೇ ದಾಖಲೆಗಳಿಲ್ಲದೆ ರೈತರಿಗೆ 1 ಲಕ್ಷದಿಂದ 10 ಲಕ್ಷದವರೆಗೆ ಕೃಷಿ ಸಾಲ ನೀಡಬೇಕು. ರೈತ ಮಕ್ಕಳಿಗೆ ಶಿಕ್ಷಣದಲ್ಲಿ ಶೇ.90ರಷ್ಟು ರಿಯಾಯಿತಿ ನೀಡುವ ಜೊತೆಗೆ ಕೃಷಿ ಪಂಪ್ ಸೆಟ್ ಗಳ ಸಲಕರಣೆಗಳ ಖರ್ಚುವೆಚ್ಚಗಳನ್ನು ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿದರು.

ತೋಟಗಾರಿಕೆ, ಕೃಷಿ, ರೇಷ್ಮೇ ಅಧಿಕಾರಿಗಳು ಮಾತನಾಡಿ, ರೈತರು ಒಂದೇ ಬೆಳೆ ಬೆಳಯುವುದನ್ನು ಬಿಟ್ಟು ಪರ್ಯಾಯ ಬೆಳೆಗಳ ಕಡೆ ಮುಖ ಮಾಡಿ ಪ್ರತಿ 6 ತಿಂಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿ ಭೂಮಿಯ ಪಲವತ್ತತೆಯನ್ನು ತಿನ್ನುವ ರಾಸಾಯನಿಕ ಗೊಬ್ಬರಗಳಿಂದ ದೂರವಿದ್ದು, ಸಾವಯುವ ಕೃಷಿಗೆ ಆದ್ಯತೆ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಏಡುಕೊಂಡಲು, ತೂಕ ಮತ್ತು ಅಳತೆ ಅಧಿಕಾರಿ ಪ್ರಭು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್‌ಕುಮಾರ್, ಗ್ರೇಡ್ 2 ತಹಶೀಲ್ದಾರ್ ಹನ್ಸಾ ಮರಿಯಾ, ಚಂದ್ರಪ್ಪ, ಎಪಿಎಂಸಿ ಮಾರುಕಟ್ಟೆಯ ಪುಟ್ಟರಾಜು, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶಿವಾರೆಡ್ಡಿ, ಸುಪ್ರೀಂ ಚಲ, ಕೆ.ಶ್ರೀನಿವಾಸಗೌಡ, ಯಲ್ಲಣ್ಣ, ತರ‍್ನಹಳ್ಳಿ ಆಂಜಿನಪ್ಪ, ಹರೀಶ್, ಪಾರುಕ್‌ಪಾಷ, ಸುನಿಲ್, ಬಂಗಾರಿ ಮಂಜು, ಶ್ರೀನಿವಾಸ್, ಹೆಬ್ಬಣಿ ಆನಂದರೆಡ್ಡಿ, ಶೈಲಜ, ರತ್ನಮ್ಮ, ಮುನಿರತ್ನ ಶಶಿಕಲಾ ಭಾಗ್ಯಮ್ಮ, ಅನುಷ, ಸುಷ್ಮಾ, ಗಿರೀಶ್, ಚಂದ್ರಪ್ಪ, ನೂರಾರು ರೈತ ಮಹಿಳೆಯರು ಮತ್ತು ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *