ಕೋಲಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ವತಿಯಿಂದ ಮಹಿಳಾ ದಿನಾಚರಣೆ

ಕೋಲಾರ: ಸಮತೋಲಿತ ಮತ್ತು ಪ್ರಾತಿನಿಧಿಕ ಸಮಾಜಕ್ಕೆ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಓಂ ಶಕ್ತಿ ಚಲಪತಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಹಿಳಾ ಮೋರ್ಚ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ, ಸಾಧಕೀಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸುವ ಕಾರ್ಯವನ್ನು ಬಿಜೆಪಿ ಪಕ್ಷವು ಮಾಡುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಿರುವುದೇ ನಿದರ್ಶನವೆಂದರು.

ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು, ಮತ್ತು ಅವರ ರಾಜಕೀಯ ಭಾಗವಹಿಸುವಿಕೆಗೆ ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸುವುದು ಮೋದಿಯವರ ಹಾಗೂ ಬಿಜೆಪಿ ನಾಯಕರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.

ಜಿಲ್ಲೆಯಲ್ಲಿಯೂ ಸಹ ಬಿಜೆಪಿ ಪಕ್ಷವನ್ನು ಕಟ್ಟಲು ಮಹಿಳಾ ಪದಾಧಿಕಾರಿಗಳಿಗೆ ಎಲ್ಲಾ ಶಕ್ತಿ ನೀಡಿ ಬಲಿಷ್ಠವಾಗಿ ಮಾಡಲಾಗುತ್ತಿದೆ. ದೇಶಕ್ಕೆ, ರಾಜ್ಯಕ್ಕೆ ಏಕೈಕ ಹೋರಾಟ ಶಕ್ತಿ ಕೇಂದ್ರ ಕೋಲಾರ ಜಿಲ್ಲೆಯಾಗಿದ್ದು, ಇಲ್ಲಿಯೂ ಮಹಿಳೆಯರ ಪಾತ್ರ ವಿಶೇಷವಾಗಿದೆ ಎಂದ ಅವರು ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿದ್ದು. ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ನಾಲ್ಕು ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದರು.

ಬಿಜೆಪಿ ಮುಖಂಡರಾದ ಹಾರಿದ್ರ ಮಂಜುನಾಥಗೌಡ ಮಾತನಾಡಿ, ಮಹಿಳೆಯರಿಗೆ ಅಗತ್ಯವಿರುವ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಆರೋಗ್ಯ ಹಾಗೂ ಸಾಮಾಜಿಕ ಈ ಆಯಾಮಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಸಮಗ್ರ ಮತ್ತು ಪರಿವರ್ತನಾತ್ಮಕ ಪರಿಣಾಮವನ್ನು ಸೃಷ್ಟಿಸುತ್ತದೆ, ಮಹಿಳೆಯರು ಅಭಿವೃದ್ಧಿ ಹೊಂದಬಹುದಾದ ಮತ್ತು ಜೀವನದ ಎಲ್ಲಾ ಅಂಶಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದಾದ ಸಮಾಜವನ್ನು ಬೆಳೆಸಬೇಕಿದೆ ಎಂದರು.

ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಅರುಣಮ್ಮ ಮಾತನಾಡಿ, ಪ್ರಧಾನ ಮಂತ್ರಿ ಮೋದಿಯವರು ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ಹಾಗೂ ಸ್ವಶಕ್ತಿಯಿಂದ ಬದುಕಲು ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ಅನೇಕ ಮಹಿಳೆಯರು ತಮ್ಮ ಕುಟುಂಬವನ್ನು ನಿರ್ವಹಿಸುವ ಜೊತೆಗೆ ಆತ್ಮವಿಶ್ವಾಸದಿಂದ ಬದುಕನ್ನು ನಡೆಸುತ್ತಿದ್ದಾರೆ ಎಂದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಷಾ ಗಂಗಾಧರ್, ಡಾ.ರಾಧಿಕಾ, ಸರೋಜಾ, ನಾಗವೇಣಿ, ಮಾನಸ, ಕೆ.ಎನ್.ಅನುರಾಧ ಈ ಸಾಧಕಿಯರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ಸಾಮಬಾಬು, ಕುಡಾ ಮಾಜಿ ನಿರ್ದೇಶಕ ಅಪ್ಪಿ ನಾರಾಯಣಸ್ವಾಮಿ, ಮುಖಂಡ ಶಿವಕುಮಾರ್, ಜಿಲ್ಲಾ ಮಹಿಳಾ ಮೋರ್ಚ ಪದಾಧಿಕಾರಿಗಳಾದ ಮಮತಾ, ಸವಿತಾ, ಪುಷ್ಪಲತಾ, ಗೌರಮ್ಮ, ಸೌಮ್ಯ, ಅನಿತಾ ನಾಗರಾಜ್, ಗಜಲಕ್ಷ್ಮಿ, ರತ್ನಕ್ಕ, ಪದ್ಮ, ಭಾಗ್ಯ, ಲಕ್ಷ್ಮಿ, ನಾಗವೇಣಿ, ಮಾನಸ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *