ಯಾವುದು ಈ ‘ಧರ್ಮ’!?.
ನಾವು ಸಣ್ಣೋರಿದ್ದಾಗ
ನಮ್ಮ ಮನೆಯಲ್ಲಿ
ನಮ್ಮ ಧರ್ಮ ಅದು
ಮಾಡರ್ಬಾದು ಅನ್ನೋರು
ಅವರು ‘ಧರ್ಮ’ ಅಂತ ಹೇಳ್ತಿದ್ದದ್ದು ‘ಸತ್ಯ’ಕ್ಕೆ
ಸುಳ್ಳು ಹೇಳಿದ್ರೆ ‘ಧರ್ಮ’ ಅಲ್ಲ ಅನ್ನೊರು
ಆ ಧರ್ಮ ಇವತ್ತು ‘ಬೇರೆ’ಯಾಗಿದೆ
ಹಾಗಾಗಿನೆ ಇಂದು ‘ಧರ್ಮ’ನೂ ಇಲ್ಲ
ನ್ಯಾಯನೂ ಇಲ್ಲ
ಮನುಷ್ಯ ತನ್ನ ನಂಬಿಕೆಯನ್ನು ಕಳೆದುಕೊಂಡಿದ್ದಾನೆ
ಸ್ವಾರ್ಥ ಮಾತ್ರ ಇಲ್ಲಿ ರಾರಾಜಿಸುತ್ತಿದೆ
ನಾನು, ನನ್ನವರ ನಡುವೆ
ಕನಿಷ್ಠ ಮಾನವೀಯತೆ ಕೂಡ ಮರೆಯಾಗಿದೆ
ಭಾವನೆಗಳು, ನೋವುಗಳು ಹಾಸ್ಯ ಚಾಟಾಕಿಗಳಾಗಿ
ಮತ್ತಷ್ಟು, ಮಗದಷ್ಟು ಘಾಸಿಯಾಗಿಸಿವೆ..
ಬರೀ ಮುಸುಕು, ಮುಸುಕಾಗಿ ಕಾಣುವ ಈ ಜಗತ್ತು
ಮೋಸದ ಅಮಲಲ್ಲಿ ತೇಲುತ್ತಿದೆ
ಸುಳ್ಳನ್ನು ಸತ್ಯವಾಗಿಸುವವರು
ಸತ್ಯವನ್ನು ಮರೆಮಾಚಿ
ಹೊಸ ನರೇಷನ್ ಗಳ ಸೃಷ್ಟಿಸಲು ಹೊರಟ್ಟಿದ್ದಾರೆ
ಸ್ವಾರ್ಥಕ್ಕಾಗಿ ಬುದ್ಧ, ಬಸವ,
ಅಂಬೇಡ್ಕರ್, ಸಾವಿತ್ರಿಫುಲೆ, ಫಾತೀಮ,
ಗಾಂಧಿ ಎಲ್ಲರ ಅಚ್ಚುಮೆಚ್ಚಿನ ಅಚ್ಚುಗಳು
ಟ್ಯಾಟೂಗಳಾಗಿ ಮಿಂಚುತ್ತಿವೆ
ಚಿಟ್ಟೆಗಳ ಹಾಗೆ ಹಾರಬೇಕಿದ್ದ ಮನಸ್ಸುಗಳು
ಬಣ್ಣಗಳ ಹಾಗೆ ಹೊಳೆಯಬೇಕಿದ್ದ ನಂಬಿಕೆ
ಗೌರವಿಸಬೇಕಿದ್ದ ಹೂವುಗಳು
ಎಲ್ಲವೂ ನಶ್ವರ
ದ್ವೇಷ, ಅಸೂಯೆಯ ‘ಧರ್ಮ’ ಚಾಲ್ತಿಯಲ್ಲಿದೆ
ಸತ್ಯದ ಧರ್ಮ ಮುಖವಾಡವಾಗಿದೆ
‘ಸುಂದರ’ವಾದ ನೆಲದ ಮಣ್ಣಿನ ವಾಸನೆಯಲ್ಲಿ
ಪಕ್ವವಾಗಬೇಕಿದ್ದ ಮಣ್ಣು ಕೂಡ ಜಡಗಟ್ಟಿದೆ!
ಮನಸ್ಸಿನ ಭೂಮಿ ಬರಡಾಗಿದೆ
ಒಣಗಿದ, ಗಿಡಮರಗಳು ಎಲ್ಲೆಲ್ಲೂ ಕಣ್ಕುಕ್ಕುತ್ತಿವೆ
ಕೊಳೆತು ಗೊಬ್ಬರವಾಗಿ ಬೀಜಕ್ಕೆ
ಆಸರೆಯಾಗಬೇಕಿದ್ದ
ಮಣ್ಣೂ…ತನ್ನ ಸತ್ವ ಕಳೆದುಕೊಂಡಿದೆ
ಚಿಗುರೊಡೆದು ಹಬ್ಬಬೇಕಿದ್ದ ಪ್ರೀತಿಯ ಬಳ್ಳಿ
ಕುತ್ತಿಗೆ ಹಿಸುಕುತ್ತಿದೆ
ನಂಬಿಕೆಯ ಹೆಸರಲ್ಲಿ ದ್ವೇಷ,
ಅಸೂಯೆ, ಮುಖವಾಡವಾಗಿ
ಗಾಳಿಯಲ್ಲಿ ಕಣ ಕಣಗಳಾಗಿ
ಶ್ವಾಸಕೋಶವನ್ನು ಸೇರಿದೆ!
ಎಲ್ಲವೂ ಶೂನ್ಯ
ದಿನ ದಿನವೂ ಶೂನ್ಯ ಬೆಳೆದು ಹೆಮ್ಮರವಾಗಿದೆ
ಅದಕ್ಕೆ ಸಿಕ್ಕಿ ಬದುಕುಳಿದ
ಬಡಪಾಯಿ ಜೀವಗಳು ನಲುಗುತ್ತಿವೆ
ಮತ್ತೂ ಕೆಲವು ಜೀವಂತ ಶವವಾಗಿವೆ
ಭರವಸೆಗಳೇ ಕಳೆಬರವಾಗಿ
ಜಗದಗಲ ಓಡಾಡುತ್ತಿವೆ….