ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಕೋಲಾರ ಪೊಲೀಸರು

ಕೋಲಾರ: ರಸ್ತೆ ಅಫಘಾತದಲ್ಲಿ ಮೃತಪಟ್ಟ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಅಂತಿಮ ವಿಧಿ ವಿಧಾನಗಳನ್ನು ಪೊಲೀಸರೇ ಮುಂದೆ ನಿಂತು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ.

ಕೋಲಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಗೇಟ್ ಬಳಿ ಕಳೆದ ಅ.30ರಂದು ತಡರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶ ಮೂಲದ ಅಮರನಾಥ್ ಗೆ ತೀವ್ರ ತರವಾಗಿ ಗಾಯಗಳಾಗಿದ್ದು ಸ್ಥಳೀಯರು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲು ಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ. ಪೈಟರ್ ಕೆಲಸಕ್ಕೆಂದು ಕೋಲಾರಕ್ಕೆ ಆಗಮಿಸಿದ್ದ ಅಮರನಾಥ್ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲು ಪೊಲೀಸರು ಮುಂದಾಗಿದ್ದರು. ಆದರೆ ಕುಟುಂಬಸ್ಥರು ಮೃತದೇಹವನ್ನು ಉತ್ತರ ಪ್ರದೇಶದ ಊರಿಗೆ ಸಾಗಿಸುವಷ್ಟು ಸ್ಥಿತಿವಂತರಾಗಿರಲಿಲ್ಲ. ಜೊತೆಗೆ ಮೃತನ ಸಂಬಂಧಿಕರು ಆರ್ಥಿಕವಾಗಿ ದುರ್ಬಲರಾಗಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಅರಿತು ನಮಗೆ ಯಾಕೆ ಈ ಗೊಡವೆ ಎನ್ನದೆ ಕುಟುಂಬಸ್ಥರ ಅನುಮತಿ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕಾಂತರಾಜು ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಕುಮಾರ್, ಶಿವರಾಜಾಚಾರಿ ತಮ್ಮ ಸ್ವಂತ ಖರ್ಚಿನಿಂದ ಅಂತಿಮ ವಿಧಿ ವಿಧಾನಗಳನ್ನು ನಗರದ ಗಲ್ ಪೇಟೆ ಬಳಿ ಇರುವ ಚಿತಾಗಾರದಲ್ಲಿ ನೆರವೇರಿಸಿದ್ದಾರೆ.

ಆ ಮೂಲಕ ಕೋಲಾರ ಗ್ರಾಮಾಂತರ ಪೊಲೀಸರು ಮಾನವೀಯತೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *