ಒಕ್ಕಲಿಗರು ರಾಜಕಾರಣಕ್ಕೆ ಸೀಮಿತವಾಗದೆ ಉದ್ಯಮಕ್ಕೆ ಆದ್ಯತೆ ನೀಡಿ – ಶ್ರೀ ಮಂಗಳಾನಂದನಾಥ ಸ್ವಾಮೀಜಿ ಕರೆ

ಕೋಲಾರ: ಜಿಲ್ಲೆಯ ಒಕ್ಕಲಿಗರು ಅರಿವಿನ ಮತ್ತು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದಾಗಿ ಉದ್ಯಮ ಕ್ಷೇತ್ರದಿಂದ ಹಿಂದಿದ್ದಾರೆ ಕೇವಲ ಕೃಷಿಗೆ ಸೀಮಿತವಾಗದೆ ಉದ್ಯಮ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡು ಬೇರೆಯವರಿಗೂ ಉದ್ಯೋಗ ನೀಡುವಂತಾಗಬೇಕು ಎಂದು ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಒಲಿವಿಯಾ ರೆಸಾರ್ಟ್ ನಲ್ಲಿ ಭಾನುವಾರ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಸೊಸೈಟಿಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗಹಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಜನ ಶ್ರಮಜೀವಿಗಳು ಕೇವಲ ರೈತ ಉದ್ಯಮಿಗಳಾದರೆ ಸಾಲದು. ಬದಲಾವಣೆಗೆ ತಕ್ಕಂತೆ ನಾವು ಬದಲಾಗಿ ಸ್ಪರ್ಧೆ ಎದುರಿಸಲು ಸನ್ನದ್ದರಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಮಾಡಿ ಬೇರೆ ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಮುಂದಿನ ಪೀಳಿಗೆಗೆ ಸಹಕಾರಿಯಾಗುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಜಲಸಾರಿಗೆ ಮಂಡಳಿಯ ಸಿಇಒ ಜಯರಾಮ್ ರಾಯಪುರ, ಗಂಗರ ಅರಸರ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯವನ್ನು ಕಟ್ಟಿ ಆಳಿದ್ದಾರೆ. ನಾವುಗಳು ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು. ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ರಾಜಕೀಯದಲ್ಲಿ ಬಲಿಷ್ಠವಾಗಿದ್ದಾರೆ ಆದರೆ ಉದ್ಯಮ ಕ್ಷೇತ್ರದಲ್ಲಿ ಹಿಂದೆ ಇದ್ದಾರೆ ಸಮುದಾಯವು ಕಡಿಮೆ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಕೆ ಮಾಡಿದರೆ ಇಲ್ಲಿ ಕೇವಲ 1% ಅಷ್ಟೇ ಉದ್ಯಮದಲ್ಲಿ ಇದ್ದಾರೆ. ಇದರಲ್ಲಿ ರಾಜಕಾರಣಿಗಳ ಹೊಣೆಗಾರಿಕೆ ಹೆಚ್ಚಾಗಬೇಕು ಸಮುದಾಯದಲ್ಲಿ ಪರಸ್ಪರ ಒಗ್ಗಟ್ಟಿನಿಂದ ಅರಿವು ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕೈಜೋಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯ ಜನ ಕೃಷಿಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ ಆದರೆ ಉದ್ಯಮದಲ್ಲಿ ಅರಿವಿನ ಕೊರತೆಯಿಂದ ಕೈಗಾರಿಕೆಗಳು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಯುವಕರಿಗೆ ಮಾರ್ಗದರ್ಶನ ನೀಡಿದರೆ ಭವಿಷ್ಯದ ಉದ್ಯಮಗಳಾಗಲಿದ್ದು ಬೇರೆಯವರಿಗೂ ಉದ್ಯೋಗ ನೀಡುವಂತಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಜಿಲ್ಲಾ ಗೌರವ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ಮನುಷ್ಯನ ಜೀವನಕ್ಕೆ ಉದ್ಯೋಗ ಮುಖ್ಯವಾಗಿದೆ. ಒಕ್ಕಲಿಗರ ಉಪ ಜಾತಿಗಳಿಂದ ಸಮುದಾಯಕ್ಕೆ ಮಾರಕವಾಗಿದೆ. ನಮ್ಮಲ್ಲಿಯೇ ಒಗ್ಗಟ್ಟಿ ಇಲ್ಲ ಉಪಜಾತಿಗಳ ಮನಸ್ಥಿತಿಯಿಂದ ಹೊರಬಂದು ನಾವು ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಉದ್ಯಮ ಮಾಡಿ ಬೇರೆಯವರನ್ನು ಬೆಳೆಸುವ ಗುಣ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಜಿ.ಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಾಗರಾಜ್, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಉದ್ಯಮಿ ಡೆಕ್ಕನ್ ರಾಮಕೃಷ್ಣಪ್ಪ, ವೈದ್ಯ ಕೃಷ್ಣಪ್ಪ ಮುಂತಾದವರು ಇದ್ದರು

Leave a Reply

Your email address will not be published. Required fields are marked *