ಕೋಲಾರದಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಣೆ

ಕೋಲಾರ: ನಗರದ ರಂಗಮಂದಿರದಲ್ಲಿ ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನುಲಿಯ ಚಂದಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಕಾರ್ಯಕ್ರಮದಲ್ಲಿದ್ದ ಗಣ್ಯರು ಹಾಗೂ ಅಧಿಕಾರಿಗಳು ನುಲಿಯ ಚಂದಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಸಮುದಾಯದ ಮುಖಂಡರು, ಜಿಲ್ಲೆಯಲ್ಲಿ ನಮ್ಮ ಜನಾಂಗದ ಜನಸಂಖ್ಯೆ ಕೇವಲ 20 ಸಾವಿರವಿದ್ದು, ಯಾವುದೇ ತಾಲೂಕಿನ ಶಾಸಕರು ನಮ್ಮ ಜನಾಂಗವನ್ನು ಪರಿಗಣಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ಜನಾಂಗದ ಅಭಿವೃದ್ಧಿಗೆ ಹಲವಾರು ಸಮಸ್ಯೆಗಳ ಪಟ್ಟಿಯಿದೆ. ಆದರೆ ಅದನ್ನು ಕೇಳುವ ನಾಯಕನಿಲ್ಲ. ಪ್ರತಿ ತಾಲೂಕಿನಲ್ಲಿ ಜನಾಂಗದ ಕುಂದು ಕೊರತೆ ಮತ್ತಿತರ ಸಭೆಗಳನ್ನು ಮಾಡಲು ಸಮುದಾಯದ ಭವನ ಅವಶ್ಯಕತೆ ಇದ್ದು, ಸರ್ಕಾರ ಈ ಕೂಡಲೇ ಎಚ್ಚೆತ್ತು ಸಮುದಾಯದ ಭವನಗಳಿಗೆ ಜಾಗ ನೀಡಿ ಭವನದ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಕೊರಚ ಕೊರಮ ಸಂಘದ ಜಿಲ್ಲಾ ಅಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ಎನ್. ವೆಂಕಟರಾಮಪ್ಪ, ಉಪಾಧ್ಯಕ್ಷರಾದ ಮಾಲೂರು ವೆಂಕಟೇಶ್ ಮತ್ತು ಸೀತಾರಾಮ್, ನಾಗಭೂಷಣ್, ನಿರೂಪಕಿ ಮಂಜುಳಾ ಕೊಂಡರಾಜನಹಳ್ಳಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *