
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ (ಸೆ.27) ‘ನಾದ ಗುರುಕುಲಂ’ ಪ್ರದರ್ಶನ ಕಲೆಗಳ ವಿದ್ಯಾ ಕೇಂದ್ರವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಪಾರಂಪರಿಕ ‘ಊಂಛವೃತ್ತಿ’ ಸಂಪ್ರದಾಯದೊಂದಿಗೆ ‘ಗುರುಕುಲಂ’ ಕಾರ್ಯನಿರ್ವಹಣೆ ಆರಂಭವಾಯಿತು. ಸಂಗೀತವು ಭಕ್ತಿಯ ಭಾವದಲ್ಲಿ ಮಿಳಿತಗೊಂಡು ಕಲಿಕೆಯನ್ನು ಪ್ರೀತಿಯು ನೇವರಿಸುವ ಈ ಪರಂಪರೆಯು ಮುಂದಿನ ಚಟುವಟಿಕೆಗಳಿಗೆ ಭದ್ರ ಅಡಿಪಾಯ ಹಾಕಿಕೊಟ್ಟಂತೆ ಇತ್ತು.
ನಾದ ಗುರುಕುಲಂದಲ್ಲಿ ವಿದ್ಯಾರ್ಥಿಗಳು ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ತಬಲ, ಮೃದಂಗ, ಕೊಳಲು, ರಂಗಭೂಮಿ, ಚಿಂತನ ಉದ್ಯಾನ (ಜೆನ್ ಪರಿಕಲ್ಪನೆಯ ಉದ್ಯಾನ), ನೃತ್ಯ, ಚಿತ್ರಕಲೆ, ಶಿಲ್ಪಕಲೆಯ ಅಭ್ಯಾಸಕ್ಕೆ ಅವಕಾಶವಿರಲಿದೆ. ಅತ್ಯಾಧುನಿಕ ಕಲಾ ಗ್ರಂಥಾಲಯ ಗುರುಕುಲಂ ವೈಶಿಷ್ಟ್ಯ. ನಾದ ಗುರುಕುಲಂನ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕಲಾವಿದರಾದ ಡಾ ಪದ್ಮಾ ಸುಬ್ರಹ್ಮಣ್ಯಂ, ಕುನಾಲ್ ಮತ್ತು ಗಾಯತ್ರಿ ಗಾಂಜಾವಾಲಾ ಪಾಲ್ಗೊಂಡಿದ್ದರು.
ವೇದ-ನಾದ ಭಾರತದ ಉಸಿರು:
ಭಾರತೀಯ ಸಂಸ್ಕೃತಿಯು ವೇದ ಮತ್ತು ನಾದದಿಂದ ಉಸಿರಾಡುತ್ತಿದೆ. ಇವೆರಡೂ ಕಣ್ಮರೆಯಾದರೆ ಭಾರತೀಯ ಸಂಸ್ಕೃತಿ ಉಳಿಯುವುದಿಲ್ಲ. ಈ ಪರಂಪರೆಯನ್ನು ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು. ಮುದ್ದೇನಹಳ್ಳಿಯಲ್ಲಿ ಶನಿವಾರ (ಸೆ.27) ನಾದ ಗುರುಕುಲಂ ಉದ್ಘಾಟನೆ ಮತ್ತು ನವರಾತ್ರಿಯ 6ನೇ ದಿನದ ಅತಿರುದ್ರ ಮಹಾಯಜ್ಞ, ದುರ್ಗಾ ಪೂಜೆ ಹಾಗೂ ನವರಾತ್ರಿ ಹೋಮದ ಬಳಿಕ ಅವರು ಆಶೀರ್ವಚನ ನೀಡಿದರು.
‘ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಚಟುವಟಿಕೆಗಳು ಮುಂದುವರಿಯುತ್ತಿರುವೆ. ಇದರ ಜೊತೆಗೆ ವೇದ ಮತ್ತು ನಾದವನ್ನು ಉಳಿಸಬೇಕು. ಯಾವ ಪ್ರದೇಶದಲ್ಲಿ ಗೀತ, ನಾದ, ಸಂಗೀತ, ಯಜ್ಞ-ಯಾಗ, ಮಂತ್ರಗಳ ಪಠಣಗಳಂತಹ ಪುಣ್ಯ ಕಾರ್ಯಗಳು ನಡೆಯುತ್ತವೆಯೋ ಆ ಪ್ರದೇಶವು ಪಾಪಗಳಿಂದ ಮುಕ್ತವಾಗುತ್ತದೆ. ನಾದ ಗುರುಕುಲಂನ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದ್ದೇವೆ. ಸಂಗೀತ, ನೃತ್ಯ, ವಾದ್ಯಗಳು, ದೃಶ್ಯ ಕಲೆ, ಜಾನಪದ ರಂಗಭೂಮಿ ಹಾಗೂ ಇತರೆ ಲಲಿತ ಕಲೆಗಳನ್ನು ಇಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ದೇವರಿಗೆ ಸಂಗೀತವೆಂದರೆ ತುಂಬಾ ಇಷ್ಟ. ಹೀಗಾಗಿ ನಾದ ಗುರುಕುಲ ಆರಂಭವಾಗಿದೆ ಎಂದರು.
ವೇದ ಮತ್ತು ನಾದಗಳಲ್ಲಿ ನಾವು ಆಸಕ್ತಿ ಕಳೆದುಕೊಂಡರೆ ಭಾರತವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಭಗವಾನ್ ಸತ್ಯ ಸಾಯಿ ಬಾಬಾ ಅವರು ಭಾರತವನ್ನು ಭಾವ, ರಾಗ, ತಾಳ ಎಂದು ಕರೆದಿದ್ದರು. ಇವುಗಳ ಸಮ್ಮಿಳಿನವೇ ಭಾರತ. ಭಾವ, ರಾಗ, ತಾಳ ಇಲ್ಲದಿದ್ದರೆ ಭಾರತ ಇಲ್ಲ ಎಂದು ಎಚ್ಚರಿಸಿದರು.
ಸಂಜೆಯ ಕಾರ್ಯಕ್ರಮದಲ್ಲಿ ನಾದ ಗುರುಕುಲಂ ವೆಬ್ ಲೋಕಾರ್ಪಣೆ ಮಾಡಲಾಯಿತು. ನಾದ ಗುರುಕುಲಂ ಕುರಿತು ಹೆಚ್ಚಿನ ಮಾಹಿತಿಗೆ ನಾದ ಗುರುಕುಲಂನ ಜಾಲತಾಣ nadagurukulam.org ನೋಡಬಹುದು.
ನವರಾತ್ರಿ ಆಚರಣೆಯಲ್ಲಿ ಗಾಯತ್ರಿ ಹೋಮ:
ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆ ಶನಿವಾರವೂ ಮುಂದುವರಿಯಿತು. ಲಕ್ಷ್ಮೀ ನರಸಿಂಹ ಹೋಮ, ಗಾಯತ್ರಿ ಹೋಮ, ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇರಿತು. ಪೂರ್ಣಾಹುತಿ, ಅಷ್ಟಾವಧಾನ ಸೇವೆ, ವೇದ ಪಾರಾಯಣ, ಅಷ್ಟಕ, ಸಂಗೀತ, ಪಂಚವಾದ್ಯಕ ಹಾಗೂ ನಾದಸ್ವರದೊಂದಿಗೆ ರುದ್ರ ಹೋಮದ ವಿಧಿಗಳು ಸಂಪನ್ನವಾದವು.