ಶಾಸಕ ಕೆ.ವೈ.ನಂಜೇಗೌಡರು ಹಣ ಮಾಡುವ ದಂದೆಯಲ್ಲಿ ತೊಡಗಿದ್ದಾರೆ – ಆರ್.ಪ್ರಭಾಕರ್

ಕೋಲಾರ: ಮಾಲೂರು ಶಾಸಕ ಕೆ.ವೈ.ನಂಜೇಗೌಡರ ದುರಾಡಳಿತ ಮಿತಿ ಮೀರಿದ್ದು, ಕ್ಷೇತ್ರ ಯಾವುದೇ ಅಭಿವೃದ್ಧಿ ಕಾಣದೆ ಮರೀಚಿಕೆಯಾಗಿದ್ದು, ಶಾಸಕರು ಹಾಗೂ ಅಧಿಕಾರಿಗಳು ಹಣ ಮಾಡುವ ದಂದೆಯಲ್ಲಿ ತೊಡಗಿದ್ದಾರೆ ಎಂದು ಸ್ವಾಭಿಮಾನಿ ಜನತಾ ಪಕ್ಷದ ತಾಲ್ಲೂಕು ಅಧ್ಯಕ್ಷ ಆರ್.ಪ್ರಭಾಕರ್ ಟೀಕಾ ಪ್ರಹಾರ ನಡೆಸಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಮುಖಂಡರುಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಲೂರು ಕ್ಷೇತ್ರದ ಅಭಿವೃದ್ಧಿಗೆ 3400 ಕೋಟಿ ತಂದಿರುವುದಾಗಿ ಹೇಳಿಕೊಳ್ಳುವ ಶಾಸಕರು ಕನಿಷ್ಠ ಮಾಲೂರು ಕ್ಷೇತ್ರದ ರಸ್ತೆಗಳ ಗುಂಡಿಗಳನ್ನು ಮುಚ್ಚಿಲ್ಲವೆಂದು ಆರೋಪಿಸಿದರು.

ಕೋಲಾರ ಚಿಕ್ಕಬಳ್ಳಾಪುರ ಡೈರಿಯಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿರುವ ಬಗ್ಗೆ ಆರೋಪ ಇ.ಡಿ.ದಾಳಿ ನಂತರ ಸಾಬೀತಾಗಿದ್ದು, ನಿಮ್ಮ ನಿರ್ದೇಶಕರುಗಳೇ ನೇಮಕಾತಿಯಲ್ಲಿ ಹಣ ಪಡೆದಿರುವ ಬಗ್ಗೆ ತಪ್ಪು ಒಪ್ಪಿಗೆ ನೀಡಿದ್ದಾರೆ.ಇದರ ಬಗ್ಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದ್ದು, ಇದುವರೆವಿಗೆ ಕ್ರಮ ಕೈ ಗೊಂಡಿಲ್ಲವೆಂದು ದೂರಿದರು.

ಡೈರಿ ಅಧ್ಯಕ್ಷರಾಗಿ, ಶಾಸಕರಾಗಿ ಟಿ.ಎ,ಡಿ.ಎ ಹಾಗೂ ಡೀಸೆಲ್‌, ನೂತನ ಟೈಯರ್ ಗಳಿಗೆ ಮತ್ತು ನಿಮ್ಮ ಸ್ವಂತ ಕಾರುಗಳಿಗೂ ಡೀಸೆಲ್ ಬಿಲ್ ಮಾಡಿಸಿಕೊಳ್ಳುತ್ತೀರಿ. ಪ್ರತಿ ದಿನ ಹತ್ತು ಲಕ್ಷ ಲೀಟರ್ ಹಾಲು ಕೋಲಾರ ಡೈರಿಯಲ್ಲಿ  ಸಂಗ್ರಹವಾಗುತ್ತಿದ್ದು, ಅಭಿವೃದ್ಧಿ ಹೆಸರಲ್ಲಿ ಪ್ರತಿದಿನ ಪ್ರತಿ ಲೀಟರ್‌ ಗೆ ಒಂದು ರೂಪಾಯಿಯಂತೆ ಹತ್ತು ಲಕ್ಷ ರೂ ಸಂಗ್ರಹ ಮಾಡುತ್ತಿದ್ದು,ನಮ್ಮ ರೈತರಿಗೆ ಮಾತ್ರ ಒಂದು ಲೀಟರ್ ಹಾಲಿಗೆ 31 ರೂಪಾಯಿ ನೀಡಿ 48 ರಿಂದ 54 ರೂಪಾಯಿಗಳಿಗೆ  ಮಾರಾಟ ಮಾಡುತ್ತಿದ್ದು, ಡಿಫರೆನ್ಸ್ ಹಣ ಏನಾಗುತ್ತಿದೆ ಎಂದು ಪ್ರಶ್ನಿಸಿದರು.

ಡೈರಿಯ ಸೋಲಾರ್ ಪ್ಲಾಂಟ್ ಉದ್ಘಾಟನಾ ಆಗದಿದ್ದರೂ,ಸೋಲಾರ್ ಪ್ಲಾಂಟ್ ಟೆಂಡರ್ ಪಡೆದಿರುವ ಕಂಪನಿಯಿಂದ ಶಾಸಕರ ಮನೆ ಮೇಲೆ ಸೋಲಾರ್ ಪ್ಲಾಂಟ್ ಉದ್ಘಾಟನೆ ಆಗಿದೆ.ರೈತರು ಹಾಕುವ ಹಾಲಿನಲ್ಲಿ ಹಣ ಮಾಡುವ ತಾವು ರೈತರ ಮನೆಗಳಿಗೂ ಸೋಲಾರ್ ಪ್ಲಾಂಟ್ ಮಾಡಿ ಕೊಡಿ ನಿಮಗೆ ಪುಣ್ಯ ಬರುತ್ತದೆ ಎಂದು ಛೇಡಿಸಿದರು.

ನಿಮ್ಮ ತಪ್ಪುಗಳನ್ನು ಮುಚ್ವಿಡಲು ನಿರ್ದೇಶಕರುಗಳಿಗೆ ಚಿನ್ನದ ಉಡುಗೊರೆ ಖರೀದಿ ಮಾಡಿದ್ದೀರಿ,ಡೈರಿ ನೌಕರರ ನೇಮಕಾತಿಗೆ ಪ್ರತಿಯೊಬ್ಬ ಅಭ್ಯರ್ಥಿಯಿಂದ 25-30 ಲಕ್ಷ ಹಣ ಪಡೆದಿರುವಿರಿ ಹಾಗೂ ಅವರನ್ನು ನಿಮ್ಮ ಪಕ್ಷದ ಜೀತದಾಳುಗಳಾಗಿ ಮಾಡಿದ್ದೀರಿ ಇದು ಯಾವ ಸಾಧನೆ ಎಂದು ಟೀಕಾಪ್ರಹಾರ ನಡೆಸಿದರು. ಸಾವಿರಾರು ಮಹಿಳೆಯರ ಅಭಿವೃದ್ಧಿಗೆ ಸಹಕಾರ ಆಗಿದ್ದ ಡಿ.ಸಿ.ಸಿ. ಬ್ಯಾಂಕ್ ಗೆ ಆಡಳಿತ ಮಂಡಳಿ ಇಲ್ಲದೆ ಪರದಾಡುವಂತಹ ಸ್ಥಿತಿ ಏರ್ಪಟ್ಟಿದ್ದು,ಡಿ.ಸಿ.ಸಿ.ಬ್ಯಾಂಕ್ ಚುನಾವಣೆ ನಡೆಸದೆ ಭ್ರಷ್ಟಾಚಾರದ ಕೂಪವಾದ ಡೈರಿ ಚುನಾವಣೆಗೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾವು ದರಖಾಸ್ತು ಸಮಿತಿ ಅಧ್ಯಕ್ಷರಾದ ಮೇಲೆ ಭೂ ಮಂಜೂರಾತಿಯಲ್ಲಿ ಬಹಳಷ್ಟು ಅಕ್ರಮಗಳು ನಡೆದಿದ್ದು, ಕೋಟ್ಯಾಂತರ ಹಣ ಲೂಟಿ ಆಗಿದೆ. ಸತ್ತಿರುವ ವ್ಯಕ್ತಿಗಳ ಹೆಸರಿನಲ್ಲಿ ಜಮೀನು ಮಂಜೂರು ಮಾಡಿ ಭೂಗಳ್ಳರಿಗೆ ಅನುಕೂಲ ಮಾಡಿದ್ದೀರಿ. ಇದಕ್ಕೆ ಅನೇಕ ಸರ್ಕಾರಿ ಅಧಿಕಾರಿಗಳು ಬಲಿಯಾಗಿ ಮನೆ ಸೇರುವಂತಾಗಿದ್ದು ಇತಿಹಾಸ ನಿಮಗೆ ಸೇರಿದ್ದಾಗಿದೆ ಎಂದರು. ದರಕಾಸ್ತು ಸಮಿತಿಯಲ್ಲಿ 7 ಸಾವಿರ ಅರ್ಜಿಗಳು ಬಾಕಿ ಇವೆ. ಪ್ರಮಾಣಿಕ ಸಾಮಾನ್ಯ ರೈತರಿಗೆ ಯಾರೊಬ್ಬರಿಗೂ ಭೂಮಿ ಮಂಜೂರು ಆಗಿಲ್ಲವೆಂದು ಟೀಕಿಸಿದರು.

ಮಾಲೂರಿನ ದೊಡ್ಡ ಕೆರೆ ಅಭಿವೃದ್ಧಿಗೆ 34 ಕೋಟಿ ರೂ ಹಣ ಖರ್ಚು ಮಾಡಲಾಗಿದೆ ಹಾಗೂ ರಸ್ತೆಗಳ ಅಭಿವೃದ್ಧಿ ಮಾಡಿದ್ದೇನೆ ಎಂದು ಕೊಚ್ಚಿಕೊಳ್ಳುವ ನೀವು, ಆಂಧ್ರ ಮೂಲದ ವ್ಯಕ್ತಿಗೆ ಟೆಂಡರ್ ನೆಪ ಮಾತ್ರಕ್ಕೆ ಮಾಡಿಸಿ ನಿಮ್ಮ ಮಗನ ಮೂಲಕ ಕೆಲಸ ಎಲ್ಲಾ ಕೆಲಸಗಳನ್ನು  ಮಾಡಿಸಿ ಹಣ ಲೂಟಿ ಮಾಡುತ್ತಿರುವುದು ಸುಳ್ಳೇ ಎಂದು ಪ್ರಶ್ನಿಸಿದ ಅವರು ಹಳೆ ಕಲ್ಲುಗಳನ್ನೇ ಕಿತ್ತು, ಅದೇ ಕಲ್ಲುಗಳನ್ನು ಬಳಸುತ್ತಿರುವುದು,ಕೆರೆ ಮಣ್ಣನ್ನು ಕೆರೆಗೆ ಹಾಕುವ ಮೂಲಕ ಕೆರೆ ಅಭಿವೃದ್ಧಿ ಮಾಡುತ್ತಿರುವುದು ಜನ ಗಮನಕ್ಕೆ ಬಾರದೆ ಇಲ್ಲವೆಂದರು.

ನಿಮ್ಮ ವಿರುದ್ಧ ಮಾತಾಡುವವರ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸ್ ಸ್ಟೇಷನ್ ನಲ್ಲಿ ಕೂರಿಸುವುದು,ಲಕ್ಷ ಗಟ್ಟಲೆ ಹಣ ಪಡೆದು ಭ್ರಷ್ಟ ಅಧಿಕಾರಿಗಳನ್ನು ನೇಮಕ ಮಾಡುವುದೇ  ನಿಮ್ಮ ಅಭಿವೃದ್ಧಿಯ ಮಂತ್ರವಾಗಿದ್ದು,ಇನ್ನಾದರೂ ಅಧಿಕಾರ ಇರುವ ತನಕ ಮಾಲೂರಿನ ಜನತೆಗೆ ಒಳ್ಳೆಯ ಆಡಳಿತ ಕೊಡಿ ಎಂದು ಕಿವಿ ಮಾತು ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದು, ಮರು ಎಣಿಕೆಯಲ್ಲಿ ನಿಮ್ಮ ಸೋಲು ಖಚಿತವಾಗಿ ತಮ್ಮ ಶಾಸಕ ಸ್ಥಾನ ಕಳೆದು ಕೊಂಡು ನಂಜೇಗೌಡರು ಮನೆಗೆ ಹೋಗುವುದು ಶತಸಿದ್ಧ ಎಂದು ಭವಿಷ್ಯ ನುಡಿದ ಅವರು ಭ್ರಷ್ಟಾಚಾರ ನಡೆಸಿಲ್ಲ,ಯಾವುದೇ ಹಣ ಪಡರದಿಲ್ಲ ಎಂದು ಮಾರಮ್ಮನ ಮೇಲೆ ಪ್ರಮಾಣ ಮಾಡಿ ತಮ್ಮ ಸಾಚಾತನವನ್ನು ಸಾಬೀತು ಪಡಿಸಿಕೊಳ್ಳಲಿ ಎಂದು ಸವಾಲು ಎಸೆದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಜನತಾ ಪಕ್ಷದ ಪದಾಧಿಕಾರಿಗಳಾದ ಬಿ.ಆರ್.ವೆಂಕಟೇಶ್, ಅಂಬರೀಶ್ ರೆಡ್ಡಿ, ವೆಂಕಟೇಶ್ ಗೌಡ,ತಿಪ್ಪಯ್ಯ,ಮಿಂಡಹಳ್ಳಿ ಮುನಿರಾಜು,ಪುರಸಭೆ ಸದಸ್ಯ ಬಾನುತೇಜ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *