ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ರಾಜ್ಯ ಸರ್ಕಾರವೇ ನೇರ ಹೊಣೆ – ನಿಖಿಲ್ ಕುಮಾರಸ್ವಾಮಿ 

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಒಂದು ಸಮುದಾಯದ ಪುಂಡರು ನಡೆಸಿದ ದಾಳಿಯನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಖಂಡಿಸುತ್ತೇನೆ .ಈ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು.ಈ ಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಕಿಡಿಕಾರಿದ್ದಾರೆ.

ಕೆರಗೋಡು ಹನುಮ ಧ್ವಜ ತೆರವು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಂತರ ಈ ಸರ್ಕಾರವು ಹೇಗೆ ದೇಶ ವಿರೋಧಿ ಶಕ್ತಿಗಳಿಗೆ ರಾಜ್ಯವನ್ನು ಒತ್ತೆ ಇಟ್ಟಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಗಣೇಶ ವಿಸರ್ಜನೆ ವೇಳೆ ಮತಾಂಧರು ದೂರ್ತತನ ಪ್ರದರ್ಶಿಸಿದ್ದಾರೆ. ಗಣಪತಿ ಭಕ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಈ ಘಟನೆಗೆ ಕೋಮು ದಳ್ಳುರಿ ಹೊತ್ತಿಸಿ ಜನರು, ಪೊಲೀಸರ ಮೇಲೆ ಪೂರ್ವಯೋಜಿತವಾಗಿ ದೌರ್ಜನ್ಯ ನಡೆಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದರು.

ಕಲ್ಲುಗಳ ಸುರಿಮಳೆಗರೆದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಪ್ರಚೋದಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಇರುವುದರಿಂದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ರಾಜಕೀಯ ಸ್ವಾರ್ಥಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇಶವಿರೋಧಿ ಶಕ್ತಿಗಳನ್ನು ಹುರಿದುಂಬಿಸಿ ಓಲೈಕೆ ರಾಜಕಾರಣ ಮಾಡುತ್ತಿರುವುದರ ಪರಿಣಾಮ ಇದು. ಹಿಂದೂಗಳ ಮೇಲಿನ ಈ ದಾಳಿಗೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

 

Leave a Reply

Your email address will not be published. Required fields are marked *