ಮಹರ್ಷಿ ವಾಲ್ಮೀಕಿ ದರೋಡೆಕೋರನಲ್ಲ, ಬ್ರಾಹ್ಮಣನೂ ಅಲ್ಲ

 

ಬೇಡ ಸಮುದಾಯದ ಜಗತ್ತಿನ ಮೊದಲ ಸಾಕ್ಷರ ಮಹಾನುಭಾವ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾನ್ ಗ್ರಂಥ ರಚನೆ ಮಾಡಿದ ಕಾರಣಕ್ಕೆ ವಾಲ್ಮೀಕಿ ಆದಿಕವಿಯಾದದ್ದು. ಮಹರ್ಷಿ ವಾಲ್ಮೀಕಿ ಅಪ್ಪಟ ಜ್ಞಾನವಂತ, ಸುಸಂಸ್ಕೃತ, ಸಂಸ್ಕಾರವಂತ. ಹಾಡಿಗಳಲ್ಲಿ ಬೆಳೆದು ಬದುಕಿದ್ದರೂ ಇಡೀ ಜಗತ್ತಿಗೆ ತಾವು ಬದುಕಿದಂತೆಯೇ ಬದುಕಬೇಕು ಎಂಬುದನ್ನು ಹೇಳುತ್ತಲೇ ಆರ್ಯ ಜನಾಂಗದ ಆದರ್ಶಗಳನ್ನು ತಮ್ಮ ಮಹಾಕಾವ್ಯದ ಮೂಲಕವೇ ಸಾರಿ ಹೇಳಿದವರು ವಾಲ್ಮೀಕಿ. ಆ ಮೂಲಕ ನಾಗರಿಕ ಪ್ರಪಂಚದ, ವಿಶ್ವಮಾನವ ಪರಿಕಲ್ಪನೆಯನ್ನು ಮೊದಲು ನೀಡಿದವರು ಇದೇ ವಾಲ್ಮೀಕಿ. ಹಾಗಾಗಿ ಒಬ್ಬ ಸಾಮಾನ್ಯ ಬೇಡ ಮಹರ್ಷಿಯಾಗಿದ್ದು.

ರಾಮಾಯಣಕ್ಕಿಂತಲೂ ಮೊದಲು ರಚಿತವಾದದ್ದು ಎಂದು ಹೇಳಲು ಇದೂವರೆಗ ಯಾವುದೇ ಗ್ರಂಥಗಳ ಅಥವಾ ಕಾವ್ಯಗಳ ಪುರಾವೆಗಳೇ ಇಲ್ಲ. ಅದಕ್ಕಾಗಿ ಲಕ್ಷಾಂತರ ಸಂಸೋಧಕರು ಕೆದಕಿ ಹುಡುಗಿದ್ದಾರೆ. ಆದರೆ ರಾಮಾಯಣವೇ ಆದಿಕಾವ್ಯ ಎಂಬುದು ಸಾಭೀತಾಗಿದೆ. “ಆದಿಕಾವ್ಯಮಿದು ಪ್ರೋಕ್ತಂ ಪುರಾ ವಾಲ್ಮೀಕಿನಾ ಕೃತಮ್” ಎಂದು ರಾಮಾಯಣದಲ್ಲಿಯೇ ಹೇಳಲಾಗಿದೆ. ಮಹರ್ಷಿ ವಾಲ್ಮೀಕಿ ರಚಿಸಿದ “ಶ್ರೀಮದ್ರಾಮಾಯಣ” ಜಗತ್ತಿನ ಮೊದಲ ಕೃತಿ. ಆಗಿನ್ನೂ ಯಾವ ಜಾತಿ ವರ್ಗಗಳೂ ಇರಲಿಲ್ಲ! ವಾಲ್ಮೀಕಿ ರಚಿಸಿದ ಶ್ರೀಮದ್ರಾಮಾಯಣದ ಆಧಾರದ ಮೇಲೆಯೇ ಸಂಸ್ಕೃತದಲ್ಲಿ ನಂತರ ಆಧ್ಯಾತ್ಮ ರಾಮಾಯಣ, ವಾಸಿಷ್ಟರಾಮಾಯಣ, ಅಗಸ್ತ್ಯ ರಾಮಾಯಣ, ಆನಂದರಾಮಾಯಣ, ಅದ್ಭುತರಾಮಾಯಣ ಮುಂತಾದ ಅನೇಕ ರಾಮಾಯಣಗಳು ಬಂದವು. ಆನಂತರ ಕಂಬರಾಮಾಯಣ, ತುಲಸೀರಾಮಾಯಣ, ಕೃತ್ತಿವಾಸರಾಮಾಯಣ, ರಂಗನಾಥರಾಮಾಯಣ, ತೊರವೆರಾಮಾಯಣ, ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ, ಸೀತಾಯಣ ಸೇರಿದಂತೆ ಅನೇಕ ಆಯಾಮಗಳ ರಾಮಾಯಣಗಳು ಬಂದವು. ಆದರೆ ಎಲ್ಲ ರಾಮಾಯಣಗಳಿಗೂ ಮೂಲ ಆದಿಕವಿ ಮಹರ್ಷಿ ವಾಲ್ಮೀಕಿ ಬರೆದ ಶ್ರೀಮದ್ರಾಮಾಯಣವೆ… ಮಹರ್ಷಿ ವಾಲ್ಮೀಕಿ ರಾಮಾಯಣವನ್ನ ಆಧರಿಸಿ ಬರೆದ ಎಲ್ಲ ರಾಮಾಯಣಗಳನ್ನೂ ಕೆದಕಿದರೂ ಎಲ್ಲೂ ವಾಲ್ಮೀಕಿ ಕಳ್ಳನಾಗಿದ್ದನೆಂದಾಗಲಿ, ಬ್ರಾಹ್ಮಣನಾಗಿದ್ದನೆಂದಾಗಲಿ ಬರೆಯಲ್ಪಟ್ಟಿಲ್ಲ. ಕಾಳಿದಾಸನ ಕಾವ್ಯತ್ನಗಳಾದ ಋಘುವಂಶ-ಮೇಘದೂತಗಳು, ಭಾಸಮಹಾಕವಿಯ ಪ್ರತಿಮಾ-ಅಭಿಷೇಕ ನಾಟಕಗಳು, ಭವಭೂತಿಯ ಉತ್ತರರಾಮಚರಿತ, ಮುರಾರಿಯ ಅನರ್ಘರಾಘವ, ವಿದರ್ಭರಾಜನ ರಾಮಾಯಣ ಚಂಪೂ, ಶ್ರೀವೆಂಕಟನಾಥರ ಹಂಸ ಸಂದೇಶ ಹೀಗೇ ಅನೇಕ ಹಳೆಯ ಸಾಹಿತ್ಯಗಳನ್ನು ಕೆದಕರಿದೂ ಎಲ್ಲೂ ವಾಲ್ಮೀಕಿ ಕಳ್ಳನಾಗಿದ್ದನೆಂದಾಗಲಿ, ಆತ ಬ್ರಾಹ್ಮಣನೆಂದಾಗಲಿ ಪ್ರಸ್ತಾಪ ಮಾಡಲಾಗಿಲ್ಲ! ಇಷ್ಟಾದ್ರೂ ವಾಲ್ಮೀಕಿ ಹುತ್ತದಿಂದ ಎದ್ದು ಬಂದ, ನಾರದ ಮುನಿ ವಾಲ್ಮೀಕಿ ವರ ಕೊಟ್ಟ, ವಾಲ್ಮೀಕಿ ಬ್ರಾಹ್ಮಣ, ಆತ ಕಳ್ಳನಾಗಿದ್ದ ಎಂದೆಲ್ಲ ಸುಳ್ಳು ಸುಳ್ಳು ಕಪೋಲಕಲ್ಪಿತ ಕಟ್ಟು ಕಥೆಗಳನ್ನು ಕಟ್ಟುತ್ತಲೇ ಕೆಲವು ಕುಚೋದ್ಯ ಮನಸ್ಸುಗಳು ಅಸಲಿ ರಾಮಾಯಣವನ್ನು ಕಲಸುಮೋಲೋಗರ ಮಾಡುತ್ತಲೇ ಬರುತ್ತಿವೆ. ಇತಿಹಾಸವನ್ನು ತಮ್ಮ ಅನುಕೂಲಕ್ಕೆ ಬೇಕಾದ ಹಾಗೆ ತಿರುಚುತ್ತಲೇ ಬರುತ್ತಿವೆ.

ಮಹರ್ಷಿ ವಾಲ್ಮೀಕಿ ಮನುಕುಲಧರ್ಮದ ಪ್ರತಿಪಾದಕರಾಗಿ, ಸಂಸ್ಕಾರದ ಪ್ರತಿಪಾದಕರಾಗಿ, ಸುಂಸ್ಕೃತಿಯ ಪ್ರತಿಪಾದಕರಾಗಿ ರಾಮಾಯಣದಲ್ಲಿ ಅನೇಕ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅದರ ಭಾಗವಾಗಿಯೇ ರಾಮ, ಸೀತೆ, ಲಕ್ಷ್ಮಣ, ಶಬರಿ, ಹನುಮಂತ, ರಾವಣ ಹೀಗೇ ಪ್ರತಿಪಾತ್ರಗಳನ್ನೂ ನಮ್ಮ ಸಮಾಜ ಅಷ್ಟೇ ಗೌರವಯುವಾಗಿ ಕಾಣುವ ಮೂಲಕ ಅವರನ್ನು ಪೂಜಿಸುವ ಹಂತಕ್ಕೆ ಬಂದು ನಿಂತಿದೆ. ಆದರೆ ಇಂತ ಅದ್ಭುತ ಪಾತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಮಹರ್ಷಿ ವಾಲ್ಮೀಕಿಯನ್ನು ಮಾತ್ರ ತೇಜೋವಧೆ ಮಾಡು ಜಾಣ ತಂತ್ರಗಾರಿಕೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಇದು ವಿಪರ್ಯಾಸ…

3ರಿಂದ 4ನೇ ಶತಮಾನಕ್ಕೂ ಹಿಂದೆ ವಾಲ್ಮೀಕಿ ಮಹರ್ಷಿ ಬದುಕಿದ್ದರು. ಆಗಲೇ ಅವರು ಶ್ರೀಮದ್ರಾಮಾಯಣ ರಚಿಸಿದರು ಎಂಬುದನ್ನು ಅನೇಕ ಇತಿಹಾಸಕಾರರು ಹೇಳಿದ್ದಾರೆ. ಆದರೆ ಆಗಲೂ ಆತ ಬ್ರಾಹ್ಮಣ ಎಂದು ಎಲ್ಲೂ ಹೇಳಿಲ್ಲ. ಆದರೆ ಆತನೊಬ್ಬ ಬೇಡನಾಗಿದ್ದ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಕಟ್ಟುಕಥೆಗಳಿಗೆ ಏನುಪುರಾವೆಗಳು ಇವೆ? ರಾಮಾಯಣದಲ್ಲಿ ವಾಲ್ಮೀಕಿ ಸ್ವತಃ ತಾನೇ ತಾನು ದರೋಡೆಕೋರನಾಗಿದ್ದೆ, ಬ್ರಾಹ್ಮಣನಾಗಿದ್ದೆ ಎಂದು ಬರೆದುಕೊಂಡಿರಬೇಕು, ಇಲ್ಲವೆ ಅವರ ಸಮಕಾಲೀನರಾದವರು ಯಾರಾದರೂ ಅದನ್ನು ಬರೆದಿರಬೇಕು. ಆದರೆ ಇವೆರಡೂ ಶತಮಾನಗಳ ಕಾಲದ ಯಾವುದೇ ಗ್ರಂಥಗಳನ್ನು ಹುಡಕಿದರೂ ಸಿಗುವುದಿಲ್ಲ. ಇತಿಹಾಸತಜ್ಞ ಎಚ್.ಡಿ. ಸಾಂಕಾಲಿಯ ಅವರು ಉಲ್ಲೇಖಿಸುವಂತೆ ಈ ಅಧ್ಯಯನ 1837ರಿಂದ 1843ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ 6 ಸಂಪುಟಗಳಿಂದ ಆರಂಭವಾಗಿದೆ. ಇನ್ನು ಕಾಲ ನಿರ್ಣಯದ ಬಗ್ಗೆ 1873ರಲ್ಲಿ ಮತ್ತೊಬ್ಬ ಇತಿಹಾಸತಜ್ಞ ಎ. ವೆಬರ್ ಮೊದಲು ವಿಮರ್ಶೆ ಮಾಢಿರಬೇಕು ಎಂದು ಹೇಳಲಾಗಿದೆ. ರಾಮಸ್ವಾಮಿಶಾಸ್ತ್ರಿ, ವಿಲಿಯಂ ಜೋನ್ಸ್, ರೊರೇಸಿಯಾ, ಆರ್.ಸಿ. ಮುಜುಂದಾರ್, ಪುಲಸ್ಕರ್, ಪಿ.ವಿ.ಕಾಣೆ, ಡಿ.ಡಿ.ಕೋಸಾಂಬಿ, ಎ.ಎಲ್.ಬಾಷಂ, ಇರ್ಫಾನ್ ಹಬೀಬ್, ರೋಮಿಲಾ ಥಾಫರ್ ಅಷ್ಟೇ ಅಲ್ಲದೆ ಡಾ. ಬಿ.ಆರ್. ಅಂಬೇಡ್ಕರ್, ರಾಮ್ ಮನೋಹರ್ ಲೋಹಿಯಾ, ಪೆರಿಯಾರ್ ತನಕ ಲಕ್ಷಾಂತರ ಸಂಶೋಧಕರು ವಾಲ್ಮೀಕಿಯ ಜಾತಿ, ಕುಲಕಸುಬಿನ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಲ್ಲರೂ ಹೇಳುವುದು ವಾಲ್ಮೀಕಿ ಬೇಡನಾಗಿದ್ದ. ನಂತರ ಶಿಕ್ಷಣದ ಅರಿವು ಹೆಚ್ಚಾದ ಬಳಿಕ ಆತ ಶ್ರೀಮದ್ರಾಮಾಯಣ ಬರೆದ ಎಂದೇ ಹೇಳುತ್ತಾರೆ.

9ನೇ ಶತಮಾನದ ತನಕ ಎಲ್ಲಿಯೂ ಮಹರ್ಷಿ ವಾಲ್ಮೀಕಿ ದರೋಡೆಕೋರಗಿದ್ದ ಎಂದಾಗಲಿ, ಬ್ರಾಹ್ಮಣ ಎಂದಾಗಲಿ ಉಲ್ಲೇಖಿಸಿಲ್ಲ; ಬದಲಿಗೆ ಆತನೊಬ್ಬ ಭಗವಾನ್, ಮಹರ್ಷಿ, ಋಷಿ, ಮುನಿ ಎಂದೆಲ್ಲ ಉಲ್ಲೇಖಿಸಲಾಗಿದೆ. ಆದರೆ ಇದ್ದಕ್ಕಿಂದ್ದಂತೆ ಆನಂತರದ ಕಾಲ ಘಟ್ಟದಲ್ಲಿ 10ನೇ ಶತಮಾನದ ಸ್ಕಂದ ಪುರಾಣದಲ್ಲಿ ಶ್ರೀರಾಮನನ್ನು ವೈಭವೀಕರಿಸುವ ಭರದಲ್ಲಿ ರಾಮನನ್ನು ಸೃಷ್ಟಿಸಿದ ಮೂಲ ಕರ್ತೃವನ್ನೇ ದರೋಡೆಕೋರನಾಗಿದ್ದ ಎಂದು ಕಟ್ಟುಕಥೆಯನ್ನು ಹೆಣೆಯಲಾಗುತ್ತದೆ! ಅಲ್ಲಿಂದ ಅದನ್ನೇ ಬಂಡವಾಳ ಮಾಡಿಕೊಂಡ ಮನುವಾದಿಗಳು ಅದನ್ನೇ ಬಿಂಬಿಸುತ್ತ ಶ್ರೀರಾಮನನ್ನು ತಮ್ಮ ಬದುಕಿನ ಅನುಕೂಲಕ್ಕೆ ತಕ್ಕಂತೆ ಬಿಂಬಿಸುತ್ತ ಹೋದರು. ಪುರಾಣಗಳಲ್ಲಿ ಎಲ್ಲವೂ ಪುರಾಣೀಕರಿಸುತ್ತಲೇ ಹೋಗುತ್ತವೆ. ಹೀಗಾಗಿ ಶ್ರೀ ಮಹರ್ಷಿ ವಾಲ್ಮೀಕಿಯ ತೇಜೋವಧೆ ಅಲ್ಲಿಂದ ಶುರುವಾಯಿತು. ಇದು ವಾಸ್ತವ ಹಾಗೂ ಸತ್ಯಾಂಶ.

ಇದಾದ ಬಳಿಕ ಇತ್ತೀಚೆಗೆ ವಾಲ್ಮೀಕಿ ದರೋಡೆಕೋರನಾಗಿದ್ದ ಎಂಬುದನ್ನೇ ಹೆಚ್ಚು ಬಿಂಬಿಸಿ ಆತ ಬ್ರಾಹ್ಮಣ ಎಂಬ ಸುಳ್ಳನ್ನೂ ಬಿತ್ತುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಶುರುಮಾಡಿದ ಮನುವಾದಿಗಳ ವಿರುದ್ಧ ವಾಲ್ಮೀಕಿ ಸಮುದಾಯ ಬಂಡೆದ್ದು ನಿಲ್ಲೋಕೆ ಶುರುಮಾಡಿತು. ಬೇಡರು ಬಂಡೆದ್ದರೆ ಗೊತ್ತಲ್ಲ..? ವಾಲ್ಮೀಕಿ ದರೋಡೆಕೋರ ಎಂದು ಹೇಳುವುದರ ವಿರುದ್ಧ ಪಂಜಾಬ್ ನಲ್ಲಿ ಎಫ್.ಐ.ಆರ್ ದಾಖಲಿಸಲಾಯಿತು. ಅದು ಕೋರ್ಟ್ ಕಟೆಕಟೆ ಏರಿತು. ಅಲ್ಲಿ 2003ರಲ್ಲಿ ಪ್ರಸಾರವಾಗಿದ್ದ “ಕುಮ್ ಕುಮ್ ಏಕ್ ಪ್ಯಾರ್ ಬಂಧನ್’ ಎನ್ನುವ ಧಾರಾವಾಹಿಯಲ್ಲಿ ಮಹರ್ಷಿ ವಾಲ್ಮೀಕಿಯನ್ನು “ಡಾಕು” ಎಂಬ ಪದ ಬಳಕಿ ಮಾಡಲಾಗಿತ್ತು. ಇದರ ವಿರುದ್ಧವೂ ಎಫ್.ಐ.ಆರ್. ದಾಖಲಾಯಿತು. ಆಗ ಬ್ಯಾಗ್ ಫಿಲ್ಮ್ ಲಿಮಿಟೆಡ್ ಸಂಸ್ಥೆ ಟಿವಿ ಚಾನಲ್ ಮೂಲಕವೇ ಪಂಜಾಬಿನ ವಾಲ್ಮೀಕಿ ಸಮುದಾಯದ ಕ್ಷಮೆ ಕೇಳಿತು, ಆ ಮೂಲಕ ಕೇಸ್ ವಾಪಸ್ ಪಡೆಯಲು ಮನವಿ ಮಾಡಿತು. ಇಷ್ಟಾದರೂ ವಾಲ್ಮೀಕಿ ಸಮುದಾಯ ಸುಮ್ಮನೆ ಬಿಡಲಿಲ್ಲ. 2009ರಲ್ಲಿ “ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಕೇಸಿನಲ್ಲಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ ಎಂದು ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ ಭಲ್ಲಾ ಮಹತ್ವದ ತೀರ್ಪು ನೀಡಿದರು. ಅಲ್ಲಿಗೆ ಈ ವಾಲ್ಮೀಕಿ ದರೋಡೆಕೋರ ಎಂಬ ವಿಷಯ ತಾರ್ಕಿಕ ಅಂತ್ಯ ಕಂಡಿತು.

06-10-2009ರಲ್ಲಿ ಪಂಜಾಬ್ ನ ಸ್ಟಾರ್ ಪ್ಲಸ್ ಟಿವಿಯಲ್ಲಿ “ಸಪ್ನ ಬಾಬುಲ್ ಕಾ ಬಿದಾಯಿ” ಎಂಬ ಧಾರಾವಾಹಿಯಲ್ಲಿ ಕೂಡ ವಾಲ್ಮೀಕಿ ಋಷಿ ಪೂರ್ವ ಜೀವನದಲ್ಲಿ ದರೋಡೆಕೋರನಾಗಿದ್ದ ಎಂದು ಸಂಭಾಷಣೆ ಪ್ರಸಾರವಾಗುತ್ತದೆ. ಅದರ ವಿರುದ್ಧ ಕೂಡ ನವ್ವಿಕಾಸ್ ಎಂಬುವರು ಕೇಸ್ ದಾಖಲಿಸುತ್ತಾರೆ. ಈ ಎಲ್ಲ ಘಟನಾವಳಿಗಳ ಬಳಿಕ ಪಂಜಾಬ್ ಕೋರ್ಟ್ ಪಂಜಾಬ್ ಯುನಿವರ್ಸಿಟಿಯ ಪಾಟಿಯಾಲದ ಪ್ರೊಫೆಸರ್ ಮಂಜುಳಾ ಸಹದೇವ್ ಅವರು ಬರೆದ ವಾಲ್ಮೀಕಿ ಜೀವನ ವೃತ್ತಾಂತದ ಸಂಶೋಧನೆ ಬಗ್ಗೆ ಪರಿಶೀಲನೆ ನಡೆಸುತ್ತದೆ. ಮಂಜುಳಾ ಸಹದೇವ್ 1979ರಲ್ಲಿ ಪಂಜಾಬ್ ಯೂನಿವರ್ಸಿಟಿಯ ಸಂಸ್ಕೃತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು, 1995ರಿಂದ 2004ರ ತನಕ ಮಹರ್ಷಿ ವಾಲ್ಮೀಕಿ ಚೇರ್ ಮುಖ್ಯಸ್ಥರಾಗಿದ್ದರು. ವಾಲ್ಮೀಕಿ ಅವರ ಇಡೀ ಬದುಕಿನ ಬಗ್ಗೆ ಇವರು ಸವಿಸ್ತಾರವಾಗಿ ಆಳವಾಗಿ ಅಧ್ಯಯನ ನಡೆಸಿದ್ದಾರೆ. ಅವುಗಳ ಕುರಿತು ಅನೇಕ ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅವರ “ಮಹರ್ಷಿ ವಾಲ್ಮೀಕಿ ಏಕ್ ಸಮೀಕ್ಷಾತ್ಮಕ್ ಅಧ್ಯಯನ್” ಎಂಬ ಮಹತ್ವದ ಕೃತಿಯಲ್ಲಿ “ಮಹರ್ಷಿ ವಾಲ್ಮೀಕಿ ಋಷಿ ಆಗುವುದಕ್ಕೆ ಮುಂಚಿತವಾಗಿ ದರೋಡೆಕೋರನಾಗಿದ್ದ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅವರು ಡಕಾಯತ್, ರೋಡ್ ರಾಬರ್ ಆಗಿರಲಿಲ್ಲ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ವಾಲ್ಮೀಕಿ ಬದುಕಿದ್ದ 1500 ವರ್ಷಗಳ ನಂತರ ಆತ ದರೋಡೆಕೋರನಾಗಿದ್ದ ಎನ್ನುವ ಕಟ್ಟು ಕಥೆ ಹೆಣೆಯಲಾಗುತ್ತದೆ. ವಾಲ್ಮೀಕಿಯ ಕುರಿತು ಆತ ದರೋಡೆಕೋರ ಅಥವಾ ಬ್ರಾಹ್ಮಣ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಹೀಗಾಗಿ ಮಹರ್ಷಿ ವಾಲ್ಮೀಕಿ ಕುರಿತು ಕಟ್ಟು ಕಥೆಗಳನ್ನು, ಸುಳ್ಳುಗಳನ್ನು ಬಿತ್ತುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. 2009ರ ಸ್ಟಾರ್ ಇಂಡಿಯಾಗ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಕೇಸಿನಲ್ಲಿ ನ್ಯಾಯಮೂರ್ತಿ ರಾಜೀವ ಭಲ್ಲಾ “ವಾಲ್ಮೀಕಿ ಋಷಿ ಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ” ಎನ್ನುವ ತೀರ್ಪು ನೀಡುತ್ತಾರೆ. ಜೊತೆಗೆ 2019ರಲ್ಲಿ ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ಪ್ರೊ. ಮಂಜುಳಾ ಸಹದೇವವ್ ಅವರ ಸಂಶೋಧನೆಯನ್ನೇ ಉಲ್ಲೇಖಿಸಿ ನ್ಯಾಯಮೂರ್ತಿ ರಾಜೀವ ಭಲ್ಲಾ ಅವರ ತೀರ್ಪನ್ನೇ ಎತ್ತಿ ಹಿಡಿದಿದ್ದಾರೆ.

ಜಗತ್ತಿನ ಯಾವುದೇ ಮಹಾನ್ ಕಾರ್ಯಗಳು ನಡೆದಿದ್ದು ಶೂದ್ರ ಸಮುದಾಯಗಳಿಂದ ಅಥವಾ ತಳ ಸಮುದಾಯಗಳಿಂದ ಬಂದ ಮಹಾನ್ ಮೇದಾವಿಗಳಿಂದಲೇ. ಅದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಅಂತಹವರ ತೇಜೋವಧೆ ಹೊಸದಲ್ಲ. ಆದರೆ ವಾಲ್ಮೀಕಿ ತೇಜೋವಧೆ ಮಾಡುವಾಗ ಎಚ್ಚರವಿರಬೇಕು, ಅರಿವಿರಬೇಕು. ಮಹರ್ಷಿ ವಾಲ್ಮೀಕಿ ಮಾಹನ್ ದಾರ್ಶನಿಕ, ಮಹಾನ್ ಮೇಧಾವಿ, ಋಷಿಗಳಿಗೇ ಋಷಿಯಾಗದ್ದವರು. ಅವರು ಅಜ್ಞಾನವನ್ನು ತೊಲಗಿಸಿ ಜ್ಞಾನ ನೀಡಿದ ಸಂಕೇತ. ಶಿಕ್ಷಣ, ಜ್ಞಾನದ ಜೊತೆಗೆ ಹೋರಾಟ, ಪ್ರತಿಭಟನೆಯ ಸಂಕೇತ. ಸುಂಸ್ಕೃತಿ ಹಾಗೂ ಸಂಸ್ಕಾರತ ಪ್ರತಿರೂಪ. ಅಂತಹವರ ಬಗ್ಗೆ ಬರೆಯುವಾಗ, ಹೇಳುವಾಗ ತುಸು ಎಚ್ಚರವಿರಲಿ. ಒಟ್ಟಿನಲ್ಲಿ ಪ್ರತಿವರ್ಷ ಅಕ್ಟೋಬರ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆಯಾಗುತ್ತದೆ. ಆ ಮೂಲಕ ಜಗತ್ತಿಗೇ ಸಂಸ್ಕೃತಿ, ಸಂಸ್ಕಾರ, ಚರಿತ್ರೆ ಕಟ್ಟಿ ಬದುಕು ಕಲಿಸಿದ ಮಹಾಚೇತನನಿಗೆ ಜಾತಿ, ಮತ ಪಂಥಗಳನ್ನ ಮೀರಿ ನಮನ ಸಲ್ಲಿಸೋಣ…

-ರಮೇಶ್ ಹಿರೇಜಂಬೂರು, ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು.
-ರಮೇಶ್ ಹಿರೇಜಂಬೂರು, ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು.

Leave a Reply

Your email address will not be published. Required fields are marked *