ನನ್ನ ವಿರುದ್ಧದ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸಲಿ – ವೆಂಕಟೇಶಪ್ಪ

ಕೋಲಾರ: ತಾಲೂಕಿನ ಹರಟಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ ಅವರು ತನ್ನ ವಿರುದ್ಧ ಆರೋಪ ಮಾಡಿದ್ದನ್ನು ದಾಖಲೆ ಸಮೇತ ಸಾಬೀತುಪಡಿಸಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗ್ರಾ.ಪಂ ಅಧ್ಯಕ್ಷ ಮೇಸ್ತ್ರಿ ವೆಂಕಟೇಶಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತಿ ಅಧ್ಯಕ್ಷಗಾದಿ ಸಿಗದಿರುವ ಕಾರಣ ನನ್ನ ಮೇಲೆ 5 ಕೋಟಿ ಅವ್ಯವಹಾರ ಹಾಗೂ ಇಲ್ಲಸಲ್ಲದ ಆರೋಪ ಮಾಡಿ ನನ್ನ ತೇಜೋವಧೆ ಮಾಡಿದ್ದಾರೆ. ಅವರು ಮಾಡಿರುವ ಆರೋಪದಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನು ಅಧ್ಯಕ್ಷನಾಗಿ ಒಂದು ವರ್ಷ ಮಾತ್ರ ಆಡಳಿತ ನಡೆಸಿದ್ದೇನೆ. ಕಳೆದ ನಾಲ್ಕು ವರ್ಷದ ಲೆಕ್ಕವನ್ನು ಕೇಳುತ್ತಿದ್ದಾರೆ. ಅವರಿಗೆ ಲೆಕ್ಕ ಬೇಕಾಗಿದ್ದಲ್ಲಿ ಮಾಹಿತಿ ಹಕ್ಕಿನ ಮೇಲೆ ಪಡೆಯಲಿ. ಅದನ್ನು ಬಿಟ್ಟು ನನ್ನ ಮೇಲೆ ಗೂಬೆ ಕೂರಿಸುತ್ತಿರುವುದು ತರವಲ್ಲ. ನನ್ನ ಆಡಳಿತ ಹಾಗೂ ನನ್ನ ವ್ಯಕ್ತಿತ್ವ ಇಡೀ ಹರಟಿ ಪಂಚಾಯಿತಿಯ 12 ಹಳ್ಳಿಗಳಿಗೆ ಗೊತ್ತಿದೆ ಎಂದು ತಿಳಿಸಿದರು.

ಪಂಚಾಯತಿಯ ಸಾಮಾನ್ಯ ಸಭೆಯಲ್ಲಿಯೂ ಸಹ ಅವಿಶ್ವಾಸ ಮಂಡನೆ ಮಾಡಿದರು. ಎಲ್ಲಾ ಸದಸ್ಯರು ನನ್ನ ಪರವಾಗಿಯೇ ಮತ ಹಾಕಿದ್ದಾರೆ. ನನ್ನ ಬಗ್ಗೆ, ಕಾರ್ಯವೈಕರಿಯ ಬಗ್ಗೆ ಎಲ್ಲಾ ಸದಸ್ಯರಿಗೂ ಗೊತ್ತಿದೆ. ಆಗಾಗಿ ಸುರೇಶ್ ಮಾಡಿರುವ ಆರೋಪಕ್ಕೂ ನನಗೂ ಸಂಬಂಧವಿಲ್ಲ. ದಾಖಲೆ ಸಮೇತ ಆರೋಪ ನಿರೂಪಿಸಿದರೆ ಕಾನೂನಿನ ಪ್ರಕಾರ ಯಾವ ಕ್ರಮ ಬೇಕಾದರೂ ಜರುಗಿಸಲಿ ಎಂದರು.

ಗ್ರಾ.ಪಂ ಸದಸ್ಯ ನಾರಾಯಣಪ್ಪ ಮಾತನಾಡಿ, ಸುರೇಶ್ ಅವರು ಸುಮ್ಮನೆ ಅಪವಾದ ಮಾಡುವುದಲ್ಲ. ಅದನ್ನು ನಿರೂಪಿಸಬೇಕು. ಒಳ್ಳೆ ವ್ಯಕ್ತಿತ್ವ ಹೊಂದಿರುವ ನಮ್ಮ ಅಧ್ಯಕ್ಷರ ಬಗ್ಗೆ ಈ ರೀತಿ ಅಪಮಾನ ಮಾಡಬಾರದು. ಅವರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದರೆ, ಅವ್ಯವಹಾರ ಮಾಡಿದ್ದಾರೆ. ನಾವು ಸದಸ್ಯರು ಇದ್ದೇವೆ. ಅವರನ್ನು ನಾವು ಸುಮ್ಮನೆ ಬಿಡುತ್ತಿವಾ? ನಮಗೂ ಎಲ್ಲಾ ತಿಳಿದಿದೆ, ಮಂಕುಸಾಬ್ರಾಣಿಗಳಲ್ಲ ನಾವು. ಆರೋಪವನ್ನು ದಾಖಲೆ ಸಮೇತ ನಿರೂಪಿಸಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಹರಟಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರತ್ನಮ್ಮ, ಗ್ರಾಮಸ್ಥರಾದ ಪಾಪಮ್ಮ, ಅರುಣ್, ರಮೇಶ್, ಗಂಗಾಧರ್, ಸೀನಪ್ಪ, ಶಶಿ, ಗೋಪಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *