ಕೋಲಾರ: ಮೂರು ದಶಕಗಳಿಂದ ಅಮೇರಿಕಾದಲ್ಲಿ ಭಾರತ ದೇಶದ ಹಿಂದೂ ಸಂಸ್ಕೃತಿಯನ್ನು ಸಾರುವ ಮೂಲಕ ಸನಾತನ ಧರ್ಮದ ಪ್ರಚಾರವನ್ನು ಮಾಡುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸುವಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊಂಡೇನಹಳ್ಳಿ ಗ್ರಾಮದ ಅರ್ಚಕಂ ಕೃಷ್ಣಮಾಚಾರ್ ಅವರು ಯಶಸ್ವಿಯಾಗಿದ್ದಾರೆ.
ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು ತಂದೆ ಅರ್ಚಕಂ ಗೋಪಾಲಚಾರ್ ತಾಯಿ ಸರಸ್ವತಮ್ಮ, ಕೃಷ್ಣಮಾಚಾರ್ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯು ವಿದ್ಯಾಭ್ಯ ಮುಳಬಾಗಿಲಿನಲ್ಲಿ ಮುಗಿಸಿದ್ದು ತದನಂತರ ಬೆಂಗಳೂರಿನ ಕೊಡಿಹಳ್ಳಿಯಲ್ಲಿರುವ ವಿಷ್ಣುಚಿತ್ತ ಸಂಸ್ಕೃತ ಆಗಮ ಪಾಠಶಾಲೆಯಲ್ಲಿ ವೇದ ಅಲಂಕಾರ ಶಾಸ್ತ್ರಗಳನ್ನು ಕಲಿತು ತಮ್ಮ ಗುರುಗಳಾದ ಸವ್ಯಸಾಚಿ ಅವರ ಮಾರ್ಗದರ್ಶನದೊಂದಿಗೆ ಪಾರಂಗತರಾದರು. ಮುಂದೆ ಬೆಂಗಳೂರಿನಿಂದ ಅಮೇರಿಕಾದ ಮೇರಿಲ್ಯಾಂಡ್ ಶಿವ ವಿಷ್ಣು ದೇವಸ್ಥಾನದಲ್ಲಿ ಆಗಮಿಕರಾಗಿ ಹಾಗೂ ಪ್ರಧಾನ ಅರ್ಚಕರಾಗಿ ನೇಮಗೊಂಡು ಸತತ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಹಿಂದು ವೇದಿಕ್ ಟೆಂಪಲ್ ಆಪ್ ವಜೇನಿಯ ಎನ್ನುವ ಹೆಸರನ್ನಿಟ್ಟು ದೇವಾಲಯವನ್ನು ಸ್ಥಾಪಿಸಿ ಹಿಂದೂ ಪ್ರಸಾರ ಕಾರ್ಯ ಆರಂಭಿಸಿದರು. ಹೀಗೆ ತಿರುಗಿ ನೋಡಿದರೆ ಬರೋಬ್ಬರಿ ಮೂರು ದಶಕಗಳಾಗಿವೆ. ಇವರೊಂದಿಗೆ ಬೆನ್ನೆಲುಬಾಗಿ ನಿಂತಿರುವವರು ಪತ್ನಿ ಅರುಣ ಕೃಷ್ಣಮಾಚಾರ್ ಹಾಗೂ ಮಕ್ಕಳಾದ ಶ್ರೀನಿಧಿ, ಸುದರ್ಶನ್ ಸೇರಿದಂತೆ ಇಡೀ ಕುಟುಂಬ ವರ್ಗ ಇವರ ಧರ್ಮ ಪ್ರಚಾರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಇನ್ನು ಅಮೇರಿಕಾದಲ್ಲಿ ಹುಣ್ಣಿಮೆಗೆ ಸತ್ಯನಾರಾಯಣ ಪೂಜೆ, ಚೌತಿಗೆ ಸಂಕಷ್ಟ ಗಣಪತಿ ಪೂಜೆ, ನವರಾತ್ರಿಗೆ ಲಲಿತಾ ಸಹಸ್ರನಾಮಾವಳಿ ಇಂತಹ ಧಾರ್ಮಿಕ ಕೈಂಕರ್ಯಗಳು ಕರ್ನಾಟಕದ ದೇವಾಲಯಗಳಲ್ಲಿ ಮಾಮೂಲಿ, ಆದರೆ ದೂರದ ಅಮೇರಿಕದ ವೇದಿಕ್ ಟೆಂಪಲ್ನಲ್ಲಿ ಮಕ್ಕಳು, ಮಹಿಳೆಯರ ಆದಿಯಾಗಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡಿ ಅಮೇರಿಕದ ನೆಲದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಹರಡುತ್ತಿರುವ ಮೂಲಕ ಭಾರತದ ನೆಲದ ಸಂಸ್ಕೃತವನ್ನು ಸಾರುತ್ತಿದ್ದಾರೆ.
ಹಿಂದು ಧರ್ಮ ಕೇವಲ ಧರ್ಮವಲ್ಲ, ಅದು ಬದುಕಿನ ವಿಧಾನ ಎಂಬಂತೆ, ದೂರದ ನೆಲದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವಲ್ಲಿ ವರ್ಜಿನಿಯಾದಲ್ಲಿರುವ ಹಿಂದು ವೇದಿಕ್ ಟೆಂಪಲ್ ಇಡೀ ಅಮೇರಿಕಾದಲ್ಲಿಯೇ ಖ್ಯಾತಿ ಪಡೆದುಕೊಂಡಿದೆ.
ಕೋಲಾರದ ಮಣ್ಣಿನಿಂದ ಜನಿಸಿದ ಅರ್ಚಕಂ ಕೃಷ್ಣಮಾಚಾರ್ ಕಳೆದ ಮೂರು ದಶಕಗಳಿಂದ ಅಮೇರಿಕದ ನೆಲದಲ್ಲಿ ಅದರಲ್ಲಿಯೂ ವಾಷಿಂಗ್ಟನ್ ಡಿಸಿ ರಾಜ್ಯದ ವರ್ಜೆನಿಯ ನಗರದಲ್ಲಿ ವೇದಿಕ್ ಟೆಂಪಲ್ ಆಫ್ ವರ್ಜೆನಿಯಾ ನಿರ್ಮಾಣ ಮಾಡಿ, ಅದನ್ನೆ ವೇದಿಕೆ ಮಾಡಿಕೊಂಡು ಧರ್ಮದ ಪೋಷಣೆ, ಪ್ರಚಾರ ಮಾಡುತ್ತಿದ್ದಾರೆ.
ಹಿಂದು ಧರ್ಮದ ಜೊತೆಗೆ ವಿದೇಶಿ ನೆಲದಲ್ಲಿ ದೇವರ ಹಾಡು, ಮಕ್ಕಳಿಗೆ ಸಂಗೀತ, ಶ್ಲೋಕವನ್ನು ಎಲ್ಲರಿಗೂ ಕಲಿಸುತ್ತಿದ್ದಾರೆ ಇದು ಧiದ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಪ್ರಚಾರದ ಕೆಲಸವಾಗಿದೆ. ೨೭ ಜನರ ಅಮೇರಿಕನ್ನರ ತಂಡದೊಂದಿಗೆ ಮಾನಸ ಸರೋವರ, ಕೈಲಾಸ ಯಾತ್ರೆಯನ್ನು ಸಹ ಮಾಡಿದ್ದಾರೆ.
ನೇಪಾಳದ ಮೂಲಕ ಮಾನಸ ಸರೋವರಕ್ಕೆ ಹೋಗಿ ಯಮದ್ವಾರದ ಮೂಲಕ ಕೈಲಾಸಕ್ಕೆ ಹೋಗಿ ಪರಿಕ್ರಮ ಮಾಡಿರುವ ಇವರು ಮಾನಸ ಸರೋವರ, ಕೈಲಾಸ ಪರ್ವತ ಯಾತ್ರೆಯ ಪರಿಕ್ರಮ ಅದೊಂದು ವಿಶೇಷದ ಅನುಭೂತಿಯನ್ನು ನೀಡಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ಪ್ರತಿವರ್ಷವೂ ಅಮೇರಿಕನ್ನರ ತಂಡವನ್ನು ಕರೆದುಕೊಂಡು ಭಾರತಕ್ಕೆ ಬಂದು ದಿವ್ಯಕ್ಷೇತ್ರಗಳ ಪ್ರವಾಸ ಮಾಡುವುದು ಇವರ ಮತ್ತೊಂದು ಗರಿಮೆಯಾಗಿದೆ.
ಲೋಕ ಸಮಸ್ತ ಸುಖಿನೋಭವಂತು ಎನ್ನುವ ಶ್ಲೋಕದ ಅರ್ಥದಂತೆ ವಿಶ್ವದಲ್ಲಿ ಶಾಂತಿ ನೆಲೆಸಲಿ ಹಾಗೂ ಎಲ್ಲರೂ ಧರ್ಮದ ಮೋರೆ ಹೋಗಿ ಸುಖ ಶಾಂತಿಯಾಗಿ ಇರಲಿ ಎನ್ನುವುದು ಹಿಂದೂ ಧರ್ಮದ ಪ್ರಚಾರದ ಉದ್ದೇಶ. ಜನರಿಗೆ ಧರ್ಮದ ಬಗ್ಗೆ ನಂಬಿಕೆ ಬಂದು ಶ್ರದ್ಧೆ ಉಂಟು ಮಾಡಿ ಮನುಕುಲದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಇವರ ವಿಶೇಷವಾಗಿದೆ.
ಅಮೇರಿಕಾ ಅಧ್ಯಕ್ಷ ಜೋ ಬೈಡೆನ್, ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಭಾರತದ ಸಂಸ್ಕೃತಿ ಹಾಗೂ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದಾರೆ ವಿಶೇಷವಾಗಿ ವರ್ಜಿನಿಯಾದ ಸೆನೆಟ್ನಲ್ಲಿ ಪ್ರಾರಂಭದ ಮೊದಲ ದಿನ ವಿಶ್ವಶಾಂತಿ ಆಶಯಗಳ ಕುರಿತು ಹಿಂದೂ ಧರ್ಮದ ಶ್ಲೋಕಗಳನ್ನು ಹೇಳಿ ಅದರ ಅರ್ಥವನ್ನು ಹೇಳುತ್ತ, ವಸುಧೈವ ಕುಟುಂಬಕಂ ಎಂದು ಸಾರಿದ್ದು ಕೃಷ್ಣಮಾಚಾರ್ಯರ ಹೆಗ್ಗಳಿಕೆಗೂ ಪಾತ್ರವಾಗಿದೆ.
ನಾವು ವೆಂಕಟೇಶ್ವರನಿಗೆ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತೇವೆ. ಇನ್ನೂ ಲಾಡು ವಿಚಾರವಾಗಿ ತಪ್ಪು ನಡೆದಿದೆಯೋ, ಇಲ್ಲವೋ ತಿಳಿದಿಲ್ಲ. ಆದರೆ ನಿತ್ಯ ಶಾಂತಿಮಂತ್ರ ಪಠಣ ಹಾಗೂ ಶಾಂತಿ ಹೋಮ ಮಾಡುವುದರ ಮೂಲಕ ಪ್ರಾಯಶ್ಚಿತವನ್ನು ತಿರುಮಲ ಸೇರಿದಂತೆ ದೇಶ ಹಾಗೂ ವಿದೇಶದ ಎಲ್ಲ ಪ್ರಮುಖ ವೆಂಕಟೇಶ್ವರ ದೇವಾಲಯಗಳಲ್ಲಿ ನಡೆಸಲಾಗುತ್ತಿದೆ. ಇದೊಂದು ಭಕ್ತರಿಗೆ ಸೇರಿದ ಭಾವನಾತ್ಮಕ ವಿಚಾರವಾಗಿದ್ದು, ತಪ್ಪು ಮಾಡಿರುವವರಿಗೆ ಸರ್ಕಾರ ಶಿಕ್ಷೆ ವಿಧಿಸಬೇಕು. ಧರ್ಮೋ ರಕ್ಷತಿ ರಕ್ಷಿತಃ, ಆ ಉದ್ದೇಶದಿಂದ ಧರ್ಮವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಹರಡುವುದು ನಮ್ಮ ಉದ್ದೇಶವಾಗಿದೆ. ವಿದೇಶಿ ನೆಲದಲ್ಲಿ ಸನಾತನ ಧರ್ಮದ ಪ್ರಚಾರ ಮಾಡುವುದೇ ನಮ್ಮ ಉದ್ದೇಶ ಎಂದು ಅರ್ಚಕಂ ಕೃಷ್ಣಮಾಚಾರ್ ಹೇಳಿದರು.