ಕೋಲಾರ: ಗುರಿ ಸಾಧನೆಗೆ ನಿಖರವಾದ ಯೋಜನೆ ಅಗತ್ಯವಿದೆ. ಯಾರು ತಮ್ಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೊ ಅವರಿಗೆ ಯಶಸ್ಸು ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಮ್ ಪಾಷಾ ಅವರು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಡಾ.ಶಿವಪ್ಪ ಅರಿವು ಅವರು ಸಿದ್ದಪಡಿಸಿರುವ “ಕೋಲಾರ ಜಿಲ್ಲಾ ಕೈಪಿಡಿ-2025” ಬಿಡುಗಡೆ ಮಾಡಿ ಮಾತನಾಡುತ್ತಾ ಕೋಲಾರ ಜಿಲ್ಲೆಯ ಮಹತ್ವದ ಸ್ಥಳ ಮತ್ತು ವ್ಯಕ್ಯಿಯ ಪರಿಚಯದೊಂದಿಗೆ ಗುರಿಸಾಧನೆಗಾಗಿ ಅಗತ್ಯವಿರುವ ಪ್ರೇರಣೆ, ಸಮಯ ನಿರ್ವಹಣೆ ಮತ್ತು ಯೋಜನೆ ರೂಪಿಸಿಕೊಳ್ಳಲು ಈ ಕೈಪಿಡಿ ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್ ಅವರು “ಓದುವ ಹವ್ಯಾಸ ಕಡಿಮೆಯಾಗಿರುವ ಈ ಕಾಲಮಾನದಲ್ಲಿ ಯುವಕರನ್ನು ಸೆಳೆಯಲು ಹೊಸಪ್ರಯತ್ನ ಮಾಡಬೇಕು. ಕೋಲಾರ ಕೈಪಿಡಿಯು ಪ್ಲಾನರ್ ಜೊತೆಗೆ ಪ್ರತಿ ಪುಟದಲ್ಲೂ ಕೋಲಾರದ ಸಾಧಕರನ್ನು ಮತ್ತು ಸ್ಥಳಗಳನ್ನು ಪರಿಚಯಿಸಿರುವುದರಿಂದ ಎಲ್ಲರೂ ಓದಲು ಆಸೆಪಡುವಂತಿದೆ. ಕೋಲಾರ ಜಿಲ್ಲೆಯ ಬಗ್ಗೆ ಹೆಮ್ಮೆ ಪಡುವ ವಿಚಾರಗಳು ಈ ಕೃತಿಯಲ್ಲಿವೆ” ಎಂದು ಹೇಳಿದರು. ಸಮಾಜ ಸೇವಕರಾದ ಸಿ. ಎಂ. ಆರ್. ಶ್ರೀನಾಥ್ ಮಾತನಾಡಿ ಸೂಕ್ಷ್ಮವಾಗಿ ಜಿಲ್ಲೆಯನ್ನು ಅಧ್ಯಯನ ಮಾಡಿ ಕೋಲಾರದ ಬಗ್ಗೆ ಹೆಮ್ಮೆ ಪಡುವ ವಿಚಾರಗಳನ್ನು ಹಲವು ಕೃತಿಗಳ ಮೂಲಕ ದಾಖಲಿಸಿದ ಲೇಖಕರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮವಿಕಾಸ ಸಂಸ್ಥೆಯ ಎಂ.ವಿ.ಎನ್. ರಾವ್ ಅವರು ಜಿಲ್ಲೆಯ ಗ್ರಾಮ ಪಂಚಾಯ್ತಿಗಳು ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ದಿಯ ಕಡೆ ಗಮನ ಕೊಡಬೇಕು. ಒಳ್ಳೆಯ ವಿಷಯಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಹೊಣೆಗಾರಿಕೆ ಹೊರಬೇಕು ಎಂದರು. ಕನ್ನಡ ಸಾಹಿತ್ಯ ಪರಿತ್ತಿನ ಜಿಲ್ಲಾಧ್ಯಕ್ಷ ಗೋಪಾಲಗೌಡರು ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಟಿ ವಿಜಯ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ಗಮನ ಮಹಿಳಾ ಸಂಘದ ಶಾಂತಮ್ಮ, ರೈತ ಮುಖಂಡ ಅಬ್ಬಣಿ ಶಿವಪ್ಪ, ಆನಂದ್, ದಲಿತ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರ್ ವೆಂಕಟೇಶ್, ಶಿಕ್ಷಕ ನಾರಾಯಣಪ್ಪ, ಫಾಲ್ಗುಣ, ಮಂಜುನಾಥರೆಡ್ಡಿ, ಸದಾನಂದ, ಡಿ ಶ್ರೀನಿವಾಸಲು, ಹೂವಳ್ಳಿ ನಾಗರಾಜ್, ರಾಧಾಮಣಿ, ಕೊಂಡರಾಜನಹಳ್ಳಿ ಮಂಜುಳ ಮತ್ತು ಈ ನೆಲೆ ಈಜಲ ವೆಂಕಟಾಚಲಪತಿ ಭಾಗವಹಿಸಿದ್ದರು.