ಕೋಲಾರ: ನಗರದಲ್ಲಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಪಕ್ಕದ ಕಲ್ಯಾಣ ಮಂಟಪದ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕಾದ ಜಿಲ್ಲಾಡಳಿತವು ಸಮುದಾಯದ ಕೆಲವು ಮುಖಂಡರ ಪ್ರಭಾವದಿಂದ ಕಾಂಪೌಂಡ್ ಗೋಡೆ ಕಟ್ಟುತ್ತಿದ್ದಾರೆ. ತಕ್ಷಣ ಕಾಮಗಾರಿ ನಿಲ್ಲಿಸದೇ ಹೋದರೆ ಮುಂದೆ ಉ್ರಗವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತ ವಾಲ್ಮೀಕಿ ಮಾಹಾಸಭಾದ ತಾಲೂಕು ಅಧ್ಯಕ್ಷ ಕೆ.ಆನಂದ್ ಕುಮಾರ್ ಒತ್ತಾಯಿಸಿದರು.
ಸಮುದಾಯದ ಮುಖಂಡ ನಗರಸಭೆ ಸದಸ್ಯ ಅಂಬರೀಶ್ ಬೇರೆಯವರ ಜೊತೆ ಶಾಮೀಲಾಗಿದ್ದಾರೆ:
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯ ಭವನಕ್ಕೆ ಸುಮಾರು 31 ಗುಂಟೆ ಜಾಗವನ್ನು ನಿಗದಿಪಡಿಸಲಾಗಿದೆ. ಭವನದ ಪಕ್ಕದಲ್ಲಿ ಖಾಸಗಿ ಕಲ್ಯಾಣ ಮಂಟಪದ ಮಾಲೀಕರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಹಿಂದೆ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳು ಸಹ ಒತ್ತುವರಿ ತೆರೆವಿಗೆ ಆದೇಶ ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ಇದಕ್ಕೆ ಸಮುದಾಯದ ಕೆಲವು ಪ್ರಭಾವಿ ವ್ಯಕ್ತಿಗಳು ನೇರವಾಗಿ ಶಾಮೀಲಾಗಿದ್ದಾರೆ. ಮುಖ್ಯವಾಗಿ ನಗರಸಭೆ ಸದಸ್ಯ ಅಂಬರೀಶ್ ಹಣದ ಆಸೆಗಾಗಿ ಕಲ್ಯಾಣ ಮಂಟಪದ ಮಾಲೀಕರ ಜೊತೆ ಶಾಮೀಲಾಗಿ ವಾಲ್ಮೀಕಿ ಭವನಕ್ಕೆ ಸೇರಿದ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಗಳು ಪೂರ್ಣಗೊಂಡಿಲ್ಲದಿಂದ್ದರೂ ಶಾಸಕರು ಎಂಎಲ್ಸಿಗಳ ಒತ್ತಡದಿಂದ ಭವನವನ್ನು ಉದ್ವಾಟನೆ ಮಾಡಲಾಗಿದೆ. ಭವನದ ಜಾಗದ ಸಮಸ್ಯೆಗೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ಇದ್ದರೂ ಕಾಂಪೌಂಡ್ ಗೋಡೆಯ ಕಾಮಗಾರಿ ಪ್ರಾರಂಭಿಸಿದ್ದಾರೆ. ಕೂಡಲೇ ಜಾಗದ ಸಮಸ್ಯೆ ಇತ್ಯರ್ಥವಾಗುವ ತನಕ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮುಖಂಡ ನರಸಿಂಹಯ್ಯ ಮಾತನಾಡಿ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರು ಸಹ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೆ ಮಾಡಿ ಕಲ್ಯಾಣ ಮಂಟಪದ ಮಾಲೀಕನಿಗೆ ನೋಟೀಸ್ ನೀಡಿದ್ದರು ಸಮುದಾಯದ ಮುಖಂಡರು ಸಾಕಷ್ಟು ಬಾರಿ ಮನವಿ ನೀಡಿದ್ದರು ಯಾವುದೇ ತೆರವು ಮಾಡದೇ ಏಕಾಏಕಿ ಕಾಂಪೌಂಡ್ ಗೋಡೆ ಕಟ್ಟಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ರೋಣೂರು ಕೃಷ್ಣಪ್ಪ, ನರಸಾಪುರ ನಾಗರಾಜ್, ಮುನಿಯಪ್ಪ, ಶ್ಯಾಮ್ ನಾಯಕ್, ಮುನೇಯ್ಯ, ಅಶ್ವಥ್, ಗಿರೀಶ್ ಮುಂತಾದವರು ಇದ್ದರು