ಬೆಂಗಳೂರು: ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೇಕೆ ಬೇಕು. ಅವರ ಪಕ್ಷದಲ್ಲಿರುವ ವ್ಯತ್ಯಾಸ, ಜಗಳನ್ನು ಸರಿಪಡಿಸಿಕೊಳ್ಳಲಿ ಎಂದು ವಿಪಕ್ಷನಾಯಕ ಆರ್.ಅಶೋಕ್ ಅವರಿಗೆ ಗೃಹ ಸಚಿವ ಪರಮೇಶ್ವರ್ ಅವರು ತಿರುಗೇಟು ನೀಡಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಸಿಎಂ ಬದಲಾವಣೆ ಮಾಡುವುದಿಲ್ಲ. ಆ ಪಕ್ಷದವರೇ ಬದಲಾವಣೆ ಮಾಡುತ್ತಾರೆ. ಎಂದು ವಿಪಕ್ಷನಾಯಕ ಆರ್.ಅಶೋಕ್ ಹೇಳಿಕೆಗೆ, ನಮ್ಮ ಪಕ್ಷವನ್ನು ನಾವು ನೋಡಿಕೊಳ್ಳುತ್ತೇವೆ. ತಮ್ಮಪಕ್ಷದಲ್ಲಿನ ಜಗಳ ಸರಿಪಡಿಸಿಕೊಳ್ಳಲಿ ಎಂದು ಪರಮೇಶ್ವರ್ ಹೇಳಿದರು.
ಸಚಿವ ಎಂ.ಬಿ.ಪಾಟೀಲ‌್ ಅವರ ಮನೆಗೆ ಭೇಟಿ ನೀಡಿದ ವಿಚಾರ ಕುರಿತು ಮಾತನಾಡಿ, ಎತ್ತಿನಹೊಳೆ ಯೋಜನೆ ಕಾರ್ಯಕ್ರಮಕ್ಕೆ ಜೊತೆಯಲ್ಲೇ ಹೋಗುವ ಬಗ್ಗೆ ಮಾತನಾಡಿದ್ದೆವು. ನಮ್ಮ ಮನೆಗೆ ಬನ್ನಿ. ಉಪಹಾರ ಸೇವಿಸಿ ಇಲ್ಲಿಂದಲೇ ಹೋಗೋಣ ಎಂದು ಎಂ.ಬಿ.ಪಾಟೀಲರು ಹೇಳಿದ್ದರು. ಅವರ ಮನೆಯಲ್ಲಿದ್ದಾಗ ಮುಖ್ಯಮಂತ್ರಿಯವರು ಮನೆಯಿಂದ ಸಕಲೇಶಪುರಕ್ಕೆ ಹೋರಡಲು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಬಂತು. ನಾವು ಜೊತೆಯಲ್ಲೆ ಬರುತ್ತೇವೆ ಎಂದು ಸಿಎಂ ಅವರಿಗೆ ತಿಳಿಸಿ ಹೋಗಿದ್ದೇವೆ. ಇದಕ್ಕೆ ಬೇರೆ ಅರ್ಥಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಇವತ್ತಿಗೆ ಸಿಎಂ ಬದಲಾವಣೆಯ ಪ್ರಶ್ನೆ ಹುಟ್ಟಿಕೊಳ್ಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿದ್ದಾರೆ, ಆಡಳಿತ ನಡೆಯುತ್ತಿದೆ. ಕೋರ್ಟ್‌ನಲ್ಲಿ ಕೇಸ್ ಇದೆ, ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಆ ಬಗ್ಗೆ ಚರ್ಚೆ ಪ್ರಾರಂಭ ಮಾಡುವಂತ ಅಗತ್ಯ ಕಾಣುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ? ರಷ್ಯಾದ ಈ ಯೋಜನೆಗೆ ಭಾರತವು ಕೈಜೋಡಿಸಬಹುದು -ವರದಿ
ಆಡಳಿತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಪ್ರತಿಯೊಬ್ಬ ಸಚಿವರು ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳಾಗಲಿ, ಸರ್ಕಾರದ ಕಾರ್ಯದರ್ಶಿಗಳು ಯಾರು ಸಹ ಸುಮ್ಮನೆ ಕುಳಿತಿಲ್ಲ. ಕೋರ್ಟ್‌ನಲ್ಲಿ ಆರ್ಗ್ಯೂಮೆಂಟ್ ಇರುವುದರಿಂದ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಕ್ಕಿಲ್ಲ. ಆದರೆ, ಆಡಳಿತ ಸುಗಮವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿ, ಪರಿಸರದ ಪ್ರಶ್ನೆ ಬರುವ ಭಾಗದಲ್ಲಿ ಕೆಲಸ ಮುಗಿದಿದೆ. ಇನ್ನೇನಿದ್ದರು ಬಯಲು ಸೀಮೆಯಲ್ಲಿ ಕೆಲಸಗಳು ನಡೆಯುತ್ತಿವೆ. ಪರಿಸರ ನಾಶ ಆಗುತ್ತಿದೆ ಎಂಬುದು ವನ್ಯಜೀವಿ ಮಂಡಳಿಯ ಪ್ರಶ್ನೆ. ಈವರೆಗೂ ನಾಶವಾಗದಂತೆ ಕೆಲಸ ಮಾಡಿಕೊಂಡು ಬರಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಉತ್ತರ ನೀಡುತ್ತಾರೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಚಿವರ, ಶಾಸಕರ ಮಕ್ಕಳು ಎಂಬ ಪ್ರಶ್ನೆ ಬರುವುದಿಲ್ಲ. ಸಮರ್ಥರಿದ್ದರೆ ಆಯ್ಕೆಯಾಗುತ್ತಾರೆ. ಇಲ್ಲವಾದರೆ ಬೇರೆಯವರನ್ನು ಆಯ್ಕೆ ಮಾಡಲಾಗುತ್ತದೆ. ಸ್ವಭಾವಿಕವಾಗಿ ಸ್ಪರ್ಧಿಸಿರಬಹುದು. ಆದರೆ, ಅವರನ್ನೇ ಆಯ್ಕೆ ಅಮಡುತ್ತಾರೆ ಎಂದು ಹೇಳಲಾಗುವುದಿಲ್ಲ ಎಂದರು.