ಅದ್ದೂರಿಯಾಗಿ ನಡೆದ ಮೇಲ್ ಮರವತ್ತೂರು ಆಧಿಪರಾಶಕ್ತಿ ಆಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮ


ಕೋಲಾರ:
ಮೇಲ್ ಮರವತ್ತೂರು ಆಧಿಪರಾಶಕ್ತಿ ಆಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮವು ಕೋಲಾರದ ಅಂಬೇಡ್ಕರ್‌ ನಗರದ ರೇಣುಕಾ ಯಲ್ಲಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.

ಮೇಲ್ ಮರವತ್ತೂರ್‌ ಉಪಾಧ್ಯಕ್ಷ ಮರುವೂರ್‌ ಚಿನ್ನಾವರ್‌ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೋಲಾರದ ಗಂಜಿ ಮೆರವಣಿಗೆ ರಾಜ್ಯದಲ್ಲೇ ಅತ್ಯುತ್ತಮವಾಗಿ ನಡೆದದ್ದನ್ನು ಭಕ್ತರಿಂದ ಮಾಹಿತಿ ಪಡೆದುಕೊಂಡು ಕೋಲಾರಮ್ಮನ ನಾಡಿನಲ್ಲಿ ನಡೆಯುವ ಜ್ಯೋತಿಗೆ ಖುದ್ದಾಗಿ ಆಗಮಿಸಿ ಸಂಭ್ರಮಿಸುತ್ತಿರುವುದಾಗಿ ಹೇಳಿದರು. ಮೇಲ್ ಮರವತ್ತೂರ್‌ ಆದಿಪರಾಶಕ್ತಿ ಶಕ್ತಿಪೀಠಕ್ಕೆ ಪರ್ಯಾಯ ಯಾವುದೂ ಇದುವರೆಗೂ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಹೀಗಾಗಿ ಭಕ್ತರು ಜಿಲ್ಲಾಧ್ಯಕ್ಷ ಶಕ್ತಿ ಪಿವಿಸಿ ಕೃಷ್ಣಪ್ಪ ನೇತೃತ್ವದಲ್ಲಿ ಪೀಠಕ್ಕೆ ಆಗಮಿಸಿ ದೇವಿ ಆಶೀರ್ವಾದ ಪಡೆದುಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಕೋಲಾರದ ಕಾರ್ಯಕ್ರಮಗಳಿಗೆ ಪೀಠವು ಶಕ್ತಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಆದಿಪರಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಶಕ್ತಿ ಎ.ಕೃಷ್ಣಪ್ಪ ಮಾತನಾಡಿ, 23 ವರ್ಷದ ಕನಸು ಇದೀಗ ನನಸಾಗಿದ್ದು, ಕೋಲಾರ ಕೆಂಪುಮಯವಾಗಿದೆ. ಉರಿಬಿಸಿಲಿನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ ಕೆಲವರು ಕಾರ್ಯಕ್ರಮ ಯಶಸ್ವಿ ಆಗಬಾರದೆಂದು ನಡೆಸಿದ ತಂತ್ರಗಾರಿಕೆ ವಿಫಲವಾಗಿದೆ. ಮುಂದೆ ಕುತಂತ್ರ ಮಾಡಿದವರ ಬಣ್ಣವನ್ನು ದೇವಿ ಬಯಲು ಮಾಡಲಿದ್ದು, ಕೋಲಾರ ಅಥವಾ ಬೆಂಗಳೂರಿನಲ್ಲಿ ಪರ್ಯಾಯ ಶಕ್ತಿಪೀಠ ನಿರ್ಮಾಣ ಸರಿಯಲ್ಲ, ತಮಿಳುನಾಡಿನ ಮೇಲ್ ಮರವತ್ತೂರ್‌ ಶಕ್ತಿ ಕೇಂದ್ರಕ್ಕೆ ತನ್ನದೇ ಆದ ಧಾರ್ಮಿಕ ಐತಿಹ್ಯವಿದ್ದು ಪರ್ಯಾಯ ಸ್ಥಾಪನೆ ಮಾಡುವ ಅಹಂ ಬೇಡ ಎಂದರು.

ಆದಿ ಪರಾಶಕ್ತಿ ಅಮ್ಮನವರ ಸುಪ್ರಭಾತ, ಕಳಸ, ದೀಪಾರಾಧನೆ, ವಿಶೇಷ ಪೂಜೆ ಯಾಗ ನಡೆಯಿತು. ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ, ದೇವಾಲಯಕ್ಕೆ ದೀಪಾಲಂಕಾರ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು ನಂತರ ಅನ್ನದಾನ ನಡೆಯಿತು. ಹಿರಿಯ ವಕೀಲ ಗಣೇಶ್, ಮಂಜುಳಾ, ಚೇತನ್, ಚಿನ್ಮಯ, ಅಂಗಾಳ ಪರಮೇಶ್ವರಿ ದೇವಾಲಯದ ಧರ್ಮದರ್ಶಿ ತಂಗಮ್ ಸ್ವಾಮಿ, ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್, ಯಲ್ಲಮ್ಮ, ನಾರಾಯಣಸ್ವಾಮಿ, ಸಂತೋಷ್, ವೇಣು, ನರಸಾಪುರ ಕೃಷ್ಣಪ್ಪ, ಅಖಿಲ, ಶಾರದಕೃಷ್ಣಪ್ಪ, ಕೆ.ಕಿರಣ್‌ಕುಮಾರ್, ಕೆ.ಶರಣ್ ಕುಮಾರ್, ಕೆ.ಶಾಂತಕುಮಾರ್, ಅರ್ಬನ್ ಬ್ಯಾಂಕ್ ಸುಜಾತ, ನಿರೂಪಕಿರೇಣುಕಾ, ಗಾಯಕ ತನುಷ್‌ರೇಣುಕಾ ಇದ್ದರು.

Leave a Reply

Your email address will not be published. Required fields are marked *