ಗಣೇಶನೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಾಲಕರಿಂದ ಹಿಡಿದು ಯುವಕರು, ವೃದ್ಧರವರೆಗೆ ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಪ್ರಿಯವಾದವನು ಗಣೇಶ. ಆದ್ರೆ ಗಣೇಶ ಕೇವಲ ಹಿಂದುಗಳ ಪಾಲಿಗೆ ಮಾತ್ರ ಆರಾಧ್ಯ ದೈವವೇ ಅಥವಾ ಭಾರತಕ್ಕೆ ಮಾತ್ರ ಸೀಮಿತವೇ ಎಂದು ನಾವು ಅಂದುಕೊಂಡರೆ ಅದು ತಪ್ಪಾಗುತ್ತದೆ. ಏಕೆಂದರೆ ವಿಶ್ವಪೂಜಿತ, ವಿಶ್ವ ವಂದಿತ ವಿನಾಯಕ.
ಚಿತ್ರಕಾರ ಕೇವಲ ನಾಲ್ಕು ಗೆರೆ ಎಳೆದರೂ ಗಣೇಶನ ರೂಪ ಮೂಡುತ್ತದೆ, ಬಾಲಕ ಮಣ್ಣಿನ ಮುದ್ದೆಯನ್ನು ಸ್ವಲ್ಪ ತಿದ್ದಿ ತೀಡಿದರೂ ಗಣೇಶನ ಆಕಾರ ಪಡೆಯುತ್ತದೆ. ಕಡೆಗೆ ತಾಯಂದಿರು ಸಗಣಿ ಅಥವಾ ಅರಿಶಿನದಲ್ಲಿ ತ್ರಿಕೋನಾಕಾರದಲ್ಲಿ ಒಂದು ಮುದ್ದೆ ಮಾಡಿ ಅದರ ತುದಿಯಲ್ಲಿ ಗರಿಕೆ ಹುಲ್ಲನ್ನು ಚುಚ್ಚಿದರೂ ಅದು ಗಣೇಶನ ಪ್ರತಿರೂಪವೇ ಆಗಿದೆ. ಒಂದು ಎಲೆಯಲ್ಲಿ, ಒಂದು ಹೂವಿನಲ್ಲಿ, ಒಂದು ಸಾಧಾರಣ ಕಲ್ಲಿನಲ್ಲಿ ಉದ್ಭವ ರೂಪದಲ್ಲಿ ಹೀಗೆ ಸರಳವಾಗಿ ರೂಪ ತಾಳುತ್ತಾನೆ ಗಣಪ. ಹೀಗಾಗಿಯೇ ಗಣೇಶ ಎಲ್ಲರ ಅಚ್ಚುಮೆಚ್ಚಿನ ದೇವರು ಆತನನ್ನು ಪೂಜಿಸದವರು ಇಲ್ಲ ಆತನನ್ನು ಆರಾಧನೆ ಮಾಡದವರು ಇಲ್ಲ.
ಎಲ್ಲರೂ ಮಣ್ಣಿನಲ್ಲಿ ಮಣ್ಣಾಗಬೇಕು ಎಂಬ ಸಂಕೇತ ಸಾರುವ ಗಣೇಶ:
ಗಣೇಶ ಪ್ರಕೃತಿ ಸ್ವರೂಪ, ಆತ ಮಣ್ಣಿನಿಂದ ಆಕಾರ ಪಡೆದವನು. ಗೌರಿಯಿಂದ ಮಣ್ಣಿನ ಮೂರ್ತಿಗೆ ಜೀವ ತಂದುಕೊಂಡು ನಂತರ ಶಿವನಿಂದ ಹತನಾದ ನಂತರ ಪುನಃ ಆನೆಯ ತಲೆಯನ್ನು ಅಳವಡಿಸಿಕೊಂಡು ಗಜಾನನ ಎನಿಸಿಕೊಂಡವನು. ಹೀಗಾಗಿಯೇ ಮಣ್ಣಿನಿಂದ ಆಕಾರಪಡೆದು ಒಂದಲ್ಲ ಒಂದು ದಿನ ಎಲ್ಲರೂ ಮಣ್ಣಿನಲ್ಲಿ ಮಣ್ಣಾಗಬೇಕು ಎಂಬ ಸಂಕೇತ ಸಾರುತ್ತಾನೆ ಗಣೇಶ. ಹೀಗಾಗಿಯೇ ಗಣೇಶ ಚತುರ್ಥಿಗೆ ಮಣ್ಣಿನಿಂದ ಮಾಡಿದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜಾ ಆಚರಣೆಗಳು ಮುಗಿದ ನಂತರ ನೀರಿನಲ್ಲಿ ನಿಮಜ್ಜನ ಮಾಡಿ ಮಣ್ಣಲ್ಲಿ ಮಣ್ಣಾಗುವಂತೆ ಮಾಡುತ್ತಾರೆ. ಇದೇ ಗಣೇಶ ಚತುರ್ಥಿಯು ವೈಶಿಷ್ಟ್ಯ.
ಗಣೇಶ ಪ್ರಕೃತಿ ಸ್ವರೂಪ, ಆತ ಅಯೋನಿಜ ಯಾರ ಗರ್ಭದಲ್ಲಿಯೂ ಜನಿಸಿದವನಲ್ಲ. ಬದಲಾಗಿ ಈ ಮಣ್ಣಿನಿಂದ ಹಾಗೂ ಪ್ರಕೃತಿಯ ಭಾಗವಾಗಿರುವ ಆನೆಯಿಂದ ಜೀವ ಪಡೆದವನು. ಈತನ ವಾಹನ ಸಾಧಾರಣವಾದ ಇಲಿ ಆಗಿದೆ, ಈತನ ಆಭರಣ ಹಾವು ಆಗಿದೆ. ಅದಕ್ಕಾಗಿಯೇ ಗಣೇಶನನ್ನು ಹೀಗೆ ವರ್ಣಿಸುತ್ತಾರೆ.
“ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ”
ಇಂತಹ ಪ್ರಕೃತಿ ಪ್ರಿಯ ವಿನಾಯಕ ಪ್ರಕೃತಿ ವಿಕೋಪದಿಂದ ಪಾರು ಮಾಡುವ ದೈವವು ಹೌದು. ಪ್ರಥಮ ಪೂಜಿತನಾದ ವಿನಾಯಕನನ್ನು ಯಾವುದೇ ಕಾರ್ಯವನ್ನು ಮಾಡುವ ಮೊದಲು ಪೂಜೆ ಮಾಡಿದರೆ ಯಾವ ವಿಘ್ನವೂ ಇಲ್ಲದೆ ನೆರವೇರುವುದೋ ಹಾಗೆಯೇ ಎಲ್ಲಿ ಪ್ರಕೃತಿ ವಿಕೋಪಗೊಳ್ಳುತ್ತದೋ ಅಲ್ಲಿ ಗಣೇಶನನ್ನು ಪೂಜಿಸಿದರೆ ಅಲ್ಲಿ ನಡೆಯಬಹುದಾದ ಪ್ರಕೃತಿ ವಿಕೋಪದಿಂದ ಗಣೇಶ ಪಾರುಮಾಡುತ್ತಾನೆ ಎಂಬ ನಂಬಿಕೆ ಇದೆ.
ಇಂಡೋನೇಷ್ಯಾದ ಮುಸ್ಲಿಂ ಬಾಂಧವರು ಪೂಜಿಸುತ್ತಾರೆ:
ಇದಕ್ಕೆ ಒಂದು ಉದಾಹರಣೆ ವಿಶ್ವದಲ್ಲಿಯೇ ಬಹುಸಂಖ್ಯಾತ ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾ. ಈ ಇಂಡೋನೇಷ್ಯಾದ ಬ್ರಮ್ಹೋ ಎಂಬ ಜೀವಂತ ಜ್ವಾಲಾಮುಖಿ ಇರುವ ಹತ್ತಿರ ಸುಮಾರು 700 ವರ್ಷಗಳ ಹಿಂದೆ ದೊಡ್ಡದಾದ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹಕ್ಕೆ ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ ಇಂಡೋನೇಷ್ಯಾದ ಮುಸ್ಲಿಂ ಬಾಂಧವರು ಸಹ ಪೂಜೆ ಮಾಡುತ್ತಾರೆ. ಕಾರಣ ಅಲ್ಲಿ ಜೀವಂತವಾಗಿ ಇರುವ ಜ್ವಾಲಾಮುಖಿ ಸ್ಪೋಟಗೊಂಡು ಆ ದ್ವೀಪವನ್ನು ನಾಶ ಮಾಡದಂತೆ ಈ ಗಣೇಶ ಈಗಲೂ ಕಾಪಾಡುತ್ತಿದ್ದಾನೆ ಎಂಬ ನಂಬಿಕೆ. ಅದಕ್ಕಾಗಿಯೇ ಗಣೇಶನನ್ನು ಈ ರೀತಿ ಸ್ತುತಿಸುತ್ತಾರೆ.
“ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ”
ಹೀಗೆ ಗಣೇಶ ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿಲ್ಲ ಮತ್ತು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಆತ ವಿಶ್ವಪ್ರಿಯ ಮತ್ತು ವಿಶ್ವವಂದಿತ. ಈಗಾಗಲೇ ಹೇಳಿದಂತೆ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಇಂಡೋನೇಷ್ಯಾ ದಲ್ಲಿ 1998 ರಲ್ಲಿ ಅಲ್ಲಿನ ಸರ್ಕಾರ 20000 ರೂಪಾಯಿ ಮೌಲ್ಯದ ನೋಟಿನಲ್ಲಿ ಗಣೇಶನ ಚಿತ್ರವನ್ನು ಮುದ್ರಿಸಿದ್ದರು. ಹಾಗೆಯೇ ವಿಶ್ವದ ಅತಿ ಎತ್ತರದ ಗಣೇಶ ಥಾಯ್ಲೆಂಡ್ ನಲ್ಲಿ ಇದೆ. ಥಾಯ್ಲೆಂಡಿನ ನಾಗರೀಕರು ಗಣೇಶನನ್ನು “ಪ್ರಾಪಿಕಾನೆಟ್” ಹೆಸರಿನಿಂದ ಕರೆಯುತ್ತಾರೆ. 2011 ರಲ್ಲಿ ಬಿಡುಗಡೆಯಾದ ಥಾಯ್ಲೆಂಡಿನ ನಾಣ್ಯದಲ್ಲಿ ಗಣೇಶನ ರೂಪವನ್ನು ಮುದ್ರಿಸಲಾಗಿದೆ. ಹೀಗೆ ಸುಮಾರು 130 ಅಡಿಗಳ ಕಂಚಿನ ಪ್ರತಿಮೆ ಥಾಯ್ಲೆಂಡಿನಲ್ಲಿ ಸ್ಥಾಪನೆಯಾಗಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.
ಇದನ್ನೂ ಓದಿ: Ganesha Chaturthi 2024: ಮನೆಯಲ್ಲಿ ಪೂಜೆ ಮಾಡಲು ಗಣೇಶನ ಸೊಂಡಿಲು ಯಾವ ಕಡೆ ಇದ್ರೆ ಒಳ್ಳೆಯದು?
ಇದಲ್ಲದೆ ಮಧ್ಯಯುಗದ ಸಮಯದಲ್ಲಿ ಸಹ ದೂರದ ದೇಶಗಳಾದ ದಕ್ಷಿಣ ಮತ್ತು ಮಧ್ಯ ಅಮೆರಿಕ, ಮ್ಯಾಕ್ಸಿಕೊ, ಮಾರ್ಫಿಯಸ್ ಕಾಂಬೊಡಿಯಾ, ಜಪಾನ್ ಮತ್ತು ಇರಾನ್ ದೇಶಗಳಲ್ಲಿ ಸಹ ಗಣೇಶನ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹಿಂದೂ ಧರ್ಮದ ಪ್ರಭಾವ ಉತ್ತುಂಗದಲ್ಲಿದ್ದ ಚೋಳರ ಕಾಲದಲ್ಲಿ ಸಹ ಭಾರತವಲ್ಲದೆ ವಿಶ್ವದ ಶ್ರೀಲಂಕಾ, ಥಾಯ್ ಲ್ಯಾಂಡ್, ಇಂಡೋನೇಶಿಯಾ, ಚೀನಾದಲ್ಲಿಯೂ ಸಹ ಹಲವಾರು ಗಣೇಶ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಇಂದು ಗಣೇಶ ಯೂರೋಪ್ ಖಂಡದಲ್ಲಿ ಸಹ ಧರ್ಮಾತೀತವಾಗಿ ಜನರ ಆರಾಧ್ಯ ದೈವ ಆಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಹೀಗಾಗಿಯೇ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಪ್ರಾನ್ಸ್, ಜರ್ಮನಿ ಮತ್ತು ಅಮೆರಿಕದಂತಹ ರಾಷ್ಟ್ರಗಳಲ್ಲಿ ಬೃಹದಾಕಾರದ ಗಣೇಶ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಗಣೇಶನ ಉತ್ಸವಗಳನ್ನು ಆಚರಣೆ ಮಾಡುತ್ತಾರೆ. ಕೆಲವು ದೇಶಗಳಲ್ಲಿ ಗಣೇಶ ಚತುರ್ಥಿಯಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಹೀಗಾಗಿ ವಿನಾಯಕ ವಿಶ್ವ ವಂದಿತನಾಗಿದ್ದಾನೆ.
ಬೌದ್ಧ, ಜೈನ ಧರ್ಮಗಳಲ್ಲಿಯೂ ಗಣೇಶನಿಗೆ ಪೂಜಿಸುತ್ತಾರೆ:
ವಿನಾಯಕ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಹಿಂದೂ ಧರ್ಮಕ್ಕೆ ಸೀಮಿತವಾಗಿರದೆ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಸಹ ಸ್ಥಾನವನ್ನು ಪಡೆದಿದ್ದಾನೆ. ಇದಕ್ಕೆ ನಿದರ್ಶನವಾಗಿ ಟಿಬೆಟಿಯನ್ ಕಗ್ಯೂರ್ ಸಂಪ್ರದಾಯದಲ್ಲಿ ಬುದ್ಧನು ತನ್ನ ಶಿಷ್ಯ ಆನಂದನಿಗೆ “ಗಣಪತಿ ಹೃದಯ ಮಂತ್ರ” ಅಥವಾ “ಆರ್ಯ ಗಣಪತಿ ಮಂತ್ರ” ವನ್ನು ಬೋಧಿಸಿದ ಎಂಬ ಪ್ರತೀತಿ ಇದೆ. ಬೌದ್ಧ ಧರ್ಮದಲ್ಲಿ ಹೇಗೆ ರಾಮ ಸೀತೆ ಲಕ್ಷ್ಮಣ ಪಾತ್ರಗಳು ಬೆರೆತು ಹೇಗೆ ಬೌದ್ಧ ರಾಮಾಯಣ ಪ್ರಚಲಿತದಲ್ಲಿ ಇದೆಯೋ ಹಾಗೆಯೇ ಗಣೇಶನನ್ನು ಸೇರಿಸಿಕೊಂಡಿದ್ದಾರೆ. ಅದರ ಭಾಗವಾಗಿ ಜಪಾನ್ ನಲ್ಲಿ ಬೌದ್ಧ ವಿನಾಯಕನನ್ನು ಜಪಾನೀಸ್ ಭಾಷೆಯಲ್ಲಿ “ಶೂಟೇನ್ ” ಅಥವಾ “ಕಂಗಿಟನ್” ಎಂದು ಕರೆದು ಪೂಜಿಸುತ್ತಾರೆ. ಅದರ ಅರ್ಥ ಆನಂದವನ್ನು ನೀಡುವ ದೇವರು, ಉದಾತ್ತ ದೇವರು ಎಂದು ಅರ್ಥ. ಜೈನ ಧರ್ಮದಲ್ಲಿ ನೋಡುವುದಾದರೆ ಹೆಚ್ಚಾಗಿ ವ್ಯಾಪಾರವನ್ನು ಮಾಡುವ ಜೈನರು ಸಹ ತಮ್ಮ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯಲಿ ಎಂದು ಗಣೇಶನನ್ನು ಪೂಜಿಸುತ್ತಾರೆ. ಪೂರ್ವದಲ್ಲಿ ಸಹ ಜೈನರು ಗಣೇಶನನ್ನು ಪೂಜಿಸುತ್ತಿದ್ದರು ಎಂದು ತೋರಿಸಲು ಒರಿಸ್ಸಾದ ಉದಯಗಿರಿ ಮತ್ತು ಖಂಡಗಿರಿ ಜೈನರಿಗೆ ಸಂಬಂಧಿಸಿದ ಗುಹೆಗಳಲ್ಲಿ ಗಣೇಶ ರೂಪವನ್ನು ಕೆತ್ತಲಾಗಿದೆ. ರಾಜಸ್ಥಾನ ಮತ್ತು ಗುಜರಾತ್ ನ ಜೈನ ಬಸದಿಗಳಲ್ಲಿ ಗಣೇಶ ಚಿತ್ರಗಳಿವೆ.
ವಿಶ್ವದ ಎಲ್ಲಾ ಸಮುದಾಯಗಳ ಪ್ರೀತಿಯ ವಿನಾಯಕ:
ವಿಶ್ವವಂದಿತನಾದ ವಿನಾಯಕನು ವಿಶ್ವದ ಹಲವು ಧರ್ಮಗಳ ಜೊತೆಗೆ ಹಲವು ಸಂಸ್ಕೃತಿಗಳಲ್ಲಿ ಸಹ ವಿವಿಧ ಹೆಸರುಗಳಿಂದ ವಿವಿಧ ರೂಪಗಳಲ್ಲಿ ಪೂಜಿಸಲ್ಪಡುತ್ತಾನೆ. ಮ್ಯಾನ್ಮಾರ್ ನಲ್ಲಿ “ಆರ್ಸಿ” ದೇವರಾಗಿ, ಚೈನಾದಲ್ಲಿ “ಕುವಾನ್ -ಶಿ- ಟಿಯೆನ್ ” ದೇವರಾಗಿ, ಹವಾಯಿಯಲ್ಲಿನ ಪಾಲಿನೇಷಿಯನ್ನರಿಗೆ “ಲೋನೋ” ದೇವರಾಗಿ, ಶ್ರೀಲಂಕಾದಲ್ಲಿ “ಪಿಳ್ಳೈಯಾರ್” ಆಗಿ, ಮಂಗೋಲಿಯನ್ನರಿಗೆ “ತೊಟ್ಟರೂರ್ ಖಘನ್” ಆಗಿ, ಕಾಂಬೋಡಿಯಾದಲ್ಲಿ “ಪ್ರಹ್ ಕೆನೆಸ್” ಆಗಿ, ರೋಮನ್ನರ ಪಾಲಿಗೆ “ಜಾನಸ್” ಆಗಿ ಪೂಜಿಸಲ್ಪಡುತ್ತಾನೆ. ಹೀಗೆ ಗಣೇಶ ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿರದೆ ಧರ್ಮಾತೀತವಾಗಿ ವಿಶ್ವದ ಎಲ್ಲಾ ಸಮುದಾಯಗಳ ಪ್ರೀತಿಯ ವಿನಾಯಕನಾಗಿದ್ದಾನೆ.
ಹೀಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕ ವಾಹನ ಮುಂತಾದ ಹಲವಾರು ಹೆಸರುಗಳಿಂದ ಕೇವಲ ಮಾನವರು ಮಾತ್ರರಿಂದ ಅಲ್ಲದೆ ಸಕಲ ಭೂತಗಣ, ಸಕಲ ದೇವರಿಂದ ಪೂಜಿಸಲ್ಪಡುವ ಗಣೇಶ ಎಲ್ಲರಿಗೂ ಒಳಿತನ್ನು ಮಾಡಲಿ, ವಿಶ್ವ ಶಾಂತಿ ಮೂಡಿಸಿ ನಾಡನ್ನು ಸುಭಿಕ್ಷವಾಗಿಡಲಿ. ಹಾಗೆಯೇ ಗಣೇಶ ಚತುರ್ಥಿಯಂದು ಗಣೇಶನ ಪೂಜೆ ಮತ್ತು ಆರಾಧನೆ ಡಾಂಭಿಕವಾಗಿರದೆ ನಮ್ಮ ಸಂಸ್ಕೃತಿ, ನಮ್ಮ ಆಚಾರಗಳನ್ನು ಬಿಂಬಿಸುವಂತೆ ಇರಲಿ.
ಬಿ.ಆರ್. ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ