ಕೋಲಾರ: ಶ್ರೀನಿವಾಸಪುರ ಅರಣ್ಯ ವಲಯದ ಜಿಂಗಾಲಕುಂಟೆ ಗ್ರಾಮದಲ್ಲಿ 61.39 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಜಂಟಿ ಸರ್ವೆ ಮಾಡಿ ತೆರವುಗೊಳಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ಈಗಿನವರೆಗೂ ತೆರವುಗೊಳಿಸಿರುವ ಬಡ ರೈತರ ಕೃಷಿ ಭೂಮಿಗಳನ್ನು ಮರು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆಂಬ ಎಚ್ಚರಿಕೆಯ ಸಂದೇಶವನ್ನು ಅರಣ್ಯ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ರವಾನಿಸಿದೆ.
ರಾಜ್ಯ ಉಚ್ಛನ್ಯಾಯಾಲಯವು 2013ರಲ್ಲಿ ಜಂಟಿ ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ತೀರ್ಪು ನೀಡಿತ್ತು. ತೀರ್ಪು ನೀಡಿ 11ವರ್ಷವಾದರೂ ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ದೂರು ಸಲ್ಲಿಸಿದ್ದರ ಮೇರೆಗೆ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೂಡಲೇ ಜಂಟಿ ಸರ್ವೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದರ ಮೇರೆಗೆ ರಾಜ್ಯ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಕೋಲಾರ ಜಿಲ್ಲೆಯ ಉಪ ಅರಣ್ಯ ಇಲಾಖೆಯವರಿಗೆ ಪತ್ರ ಬರೆದು ಜಂಟಿ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಿ ಅನುಪಾಲನಾ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಇದರ ಮೇರೆಗೆ ನವೆಂಬರ್ 6 ರಂದು ಜಂಟಿ ಸರ್ವೆ ಮಾಡುವುದಾಗಿ ಅರಣ್ಯ ಇಲಾಖೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದರೆ ಒತ್ತುವರಿ ಭೂಮಿಯು ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಆರ್.ರಮೇಶ್‌ಕುಮಾರ್ ರವರಿಗೆ ಸೇರಿದ್ದಾಗಿದೆ ಎನ್ನುವ ಕಾರಣಕ್ಕೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಭೂ ದಾಖಲೆಗಳ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಲು ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ಖಂಡನೀಯವಾಗಿರುತ್ತದೆ. ಈ ವಿಚಾರದಲ್ಲಿ ಅಧಿಕಾರಿಗಳಿಗೆ ರಾಜ್ಯಮಟ್ಟದಲ್ಲಿ ರಾಜಕೀಯ ಒತ್ತಡಗಳು ಬಂದಿದ್ದರಿಂದ ಸರ್ವೆ ಕಾರ್ಯ ಮಾಡಲು ಹಿಂದೇಟು ಹಾಕುತ್ತಿರುವ ಗಂಭೀರ ಆರೋಪಗಳು ಜನಸಾಮಾನ್ಯರಿಂದ ಕೇಳಿಬರುತ್ತಿವೆ.
ಆದ್ದರಿಂದ ಸರ್ವೆ ಕಾರ್ಯ ನಿಗದಿ ಮಾಡಿರುವ ದಿನಾಂಕದಂದೆ ಕಾನೂನು ಚೌಕಟ್ಟಿನಲ್ಲಿ ತೆರವುಗೊಳಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ಈಗಿನವರೆಗೂ ತೆರವುಗೊಳಿಸಿರುವ ಬಡ ರೈತರ ಕೃಷಿ ಭೂಮಿಗಳನ್ನು ಮರು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಅಬ್ಬಣಿ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಬೆಂಗಳೂರು ವಲಯ ಕಾರ್ಯದರ್ಶಿ ಸಿ.ವಿ.ಪ್ರಭಾಕರ್‌ಗೌಡ, ಜಿಲ್ಲಾಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆನಂದ್ ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ತಾಲ್ಲೂಕು ಸಂಚಾಲಕ ಸುರೇಶ್ ಮತ್ತಿತರರು ಒತ್ತಾಯಿಸಿದ್ದಾರೆ.