ರೇಣುಕಾಸ್ವಾಮಿ‌ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ – ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಆಧರಿಸಿ ಯಾರನ್ನು ಎ1, ಎ2 ಆರೋಪಿಗಳನ್ನಾಗಿಸಬೇಕು ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕುಟುಂಬಸ್ಥರು ನಮ್ಮಿಂದ ನ್ಯಾಯವನ್ನು ನಿರೀಕ್ಷೆ ಮಾಡಬಹುದು. ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ಕೋರ್ಟ್‌ನಲ್ಲಿ ಸಹ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ಹಂಚಿಕೆ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಕಾನೂನು ಬಾಹಿರವಾಗಿ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಾದವರು ರಾಜ್ಯಪಾಲರು. ಸಾವಿರಾರು ಜನ ದೂರು ಕೊಡುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ. ಅನಾವಶ್ಯಕವಾಗಿ ಆಪಾದನೆ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮೊದಲಿಂದಲೂ ಹೇಳುತ್ತಿದ್ದೇವೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾವು ಜನರ ಮುಂದೆ ಸತ್ಯಸತ್ಯಾತೆ ಇಡುತ್ತೇವೆ. ನಾವು ಯಾವುದನ್ನು ಕೂಡ ಕಾನೂನು ಬಾಹಿರವಾಗಿ ಮಾಡಿಲ್ಲ ಎಂಬುದನ್ನು ಈಗಾಗಲೇ ಕೋರ್ಟ್‌ಗೆ ತಿಳಿಸಿದ್ದೇವೆ ಎಂದು ಹೇಳಿದರು.

ಬಿಟ್ ಕಾಯಿನ್, ವಾಲ್ಮೀಕಿ, ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮ ಸೇರಿದಂತೆ ಎಲ್ಲ ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ. ಎಸ್‌ಐಟಿಗೆ ವಹಿಸಿರುವ ಮತ್ತು ಸಿಐಡಿ ಕೈಗೊಂಡಿರುವ ಪ್ರಕರಣಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಈ ಎಲ್ಲ ಪ್ರಕರಣಗಳ ರಿವ್ಯೂವ್ ನಡೆಸಲು ಮುಂದಿನ‌ ದಿನಗಳಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹೈಕಮಾಂಡ್ ಭೇಟಿ ಸಂಪ್ರದಾಯ: 

ಸಚಿವ ಸತೀಶ್ ಜಾರಕಿಹೊಳಿಯವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡುವುದು ಪಕ್ಷದ ಸಂಪ್ರದಾಯ. ಆ ಸಂಪ್ರದಾಯಕ್ಕೆ ಹೋಗಿರುತ್ತಾರೆ. ಎಲ್ಲದಕ್ಕು ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ. ಹೈಕಮಾಂಡ್ ಬೇರೆಬೇರೆ ಕೆಲಸಗಳನ್ನು ಒಪ್ಪಿಸಿರುತ್ತದೆ‌. ನನಗೆ ಸೋಷಿಯಲ್ ಮೀಡಿಯಾ ಟ್ವೀಟರ್, ಫೇಸ್ಬುಕ್‌ನಲ್ಲಿ ವೈಯಕ್ತಿಕ ನಿಂದನೆಯ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇದರಿಂದ ಗೌರವಕ್ಕೆ ದಕ್ಕೆಯಾಗುತ್ತಿದೆ ಎಂದು ಹೇಳಿದ್ದರು. ಇದೇ ವಿಚಾರಕ್ಕೆ ನಾನು ಭೇಟಿಯಾಗಿದ್ದೆ. ಅದನ್ನು ಬೇರೆ ತರ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು.

ಇನ್‌ಸ್ಪೆಕ್ಟರ್‌ಗೆ ಗೃಹ ಸಚಿವರ ತರಾಟೆ:
ಗೃಹ ಸಚಿವರ ಮನೆ ಬಳಿ ಮನವಿ ನೀಡಲು ಬಂದಿದ್ದವರನ್ನು ಕರೆದೊಯ್ದ ಸ್ಥಳೀಯ ಪೊಲೀಸರನ್ನು ಗೃಹ ಸಚಿವ ಪರಮೇಶ್ವರ ಅವರು ತರಾಟೆಗೆ ತೆಗೆದುಕೊಂಡರು. ಜನರು ಆಹ್ವಾಲು ನೀಡಲು ಬಂದಾಗ ಸುಮ್ಮನೆ ನಿಂತುಕೊಂಡು ನೋಡಬೇಕು.‌ ಇನ್ನೊಮ್ಮೆ ಆ ರೀತಿ ನಡೆದುಕೊಳ್ಳದಂತೆ ಸೂಚಿಸಿದರು.

ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಬಗೆಹರಿಯುತ್ತದೆ ಎಂಬ ಉದ್ದೇಶದಿಂದ ಬರುತ್ತಾರೆ. ನಮ್ಮ ಬಳಿಗೆ ಬಾರದಿದ್ದರೆ, ಇನ್ಯಾರ ಬಳಿ ಹೋಗಲು ಸಾಧ್ಯ. ಸುಮ್ಮನೆ ನಿಂತುಕೊಂಡು ನೋಡಬೇಕು ಎಂದು ಸದಾಶಿವನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ತಾಕೀತು ಮಾಡಿದರು.

Leave a Reply

Your email address will not be published. Required fields are marked *