ಕೋಲಾರ: ರೈತರ ಸಮಸ್ಯೆಗಳು ಬಗೆಹರಿಯ ಬೇಕಾದರೆ ರೈತರಿಗೆ ಮನ ಸ್ಥೈರ್ಯ, ನೈತಿಕ ಸ್ಥೈರ್ಯದೊಂದಿಗೆ ಸಮರ್ಥ ನಾಯಕತ್ವದ ಅಗತ್ಯ ಇದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಭಿಪ್ರಾಯಪಟ್ಟರು.
ನಗರ ಸುವರ್ಣ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ 46 ನೇ ರೈತ ಹುತಾತ್ಮ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿ ರೈತರ ತ್ಯಾಗದಿಂದ ಹೊಸ ಶಕ್ತಿ ಉದಯವಾಯಿತು. ರೈತರು ಹುಟ್ಟಿನಿಂದ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದ್ದು, ಎಲ್ಲವನ್ನೂ ಕೇಳಿಪಡೆಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ವ್ಯವಸ್ಥೆ ಕಾರಣವಾಗಿರುವುದು ವಿಷಾದನೀಯ ಎಂದರು.
ರೈತ ಸಮುದಾಯ ಅನೇಕ ಸವಾಲು, ಸಮಸ್ಯೆಗಳು ಎದುರಿಸುತ್ತಿದ್ದು,ಜಿಲ್ಲಾಡಳಿತ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಒಂದು ಕಾಲದಲ್ಲಿ ರೈತ, ದಲಿತ ಚಳವಳಿ ಎಂದರೆ ಇಡೀ ಆಡಳಿತ ಥರ ಗುಟ್ಟುತಗತಿದ್ದವು. ಸರ್ಕಾರಗಳು ಅಲುಗಾಡುತ್ತಿದ್ದವು. ನೆಲದ ಬೇರು ಮತ್ತು ರೈತರ ಪರೋಪಕಾರಿ ಗುಣ ಅದಕ್ಕೆ ಕಾರಣ. ಕೃಷಿ ಬದುಕು ಮಾತ್ರ ಕಟ್ಟಿ ಕೊಡುವುದಿಲ್ಲ ಸಂಸ್ಕೃತಿ ಕಟ್ಟಿ ಕೊಡುತ್ತದೆ ಎಂದರು.
ಜಿಲ್ಲೆಯ ಕೆರೆಗಳು ಕೇವಲ ಜೀವ ಜಲ ಕಟ್ಟಿ ಕೊಡುತ್ತಿಲ್ಲ. ಬದುಕು ಕಟ್ಟಿ ಕೊಟ್ಟಿವೆ. ನೀರಿನ ಮಹತ್ವವನ್ನು ಕೋಲಾರದ ರೈತರಿಂದ ಇಡೀ ಕರ್ನಾಟಕ ಕಲಿಯಬೇಕಿದೆ. ಭೂಮಿ, ಜಲದ ಮಹತ್ವ
ಕಂಡುಕೊಂಡಿದ್ದಾರೆ,ಅರ್ಥ ಮಾಡಿಕೊಂಡಿದ್ದಾರೆ
ಹಾಗಾಗಿ ಜಿಲ್ಲೆಯಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾಲ ಮಾಡಿದರೂ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಕೆರೆಗಳ ಪುನಶ್ಚೇತನಕ್ಕೆ
ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.
ಮಾವು ಬೆಳೆಗಾರರ ಹೋರಾಟದಿಂದ ಬೆಂಬಲ ಬೆಲೆ ಸಿಕ್ಕಿದ್ದು, ಪ್ರಸ್ತುತ ೧೦೦ ಕೋಟಿ ಅನುದಾನ ಲಭ್ಯ ಇದೆ. ಎ.ಪಿ.ಎಂ.ಸಿಗೆ ಮಾರಾಟ ಮಾಡಿದ್ದರೆ ಬಿಲ್ ಕೊಡಬೇಕು. ಬಿಲ್ ನೀಡಲು ಜುಲೈ ೨೪ ಕೊನೆಯ ದಿನವಾಗಿದ್ದು, ಬಿಲ್ ನೀಡಲು ಇನ್ನೂ ೧೫ ದಿನ
ಕಾಲಾವಕಾಶ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ವರದಿ ಕೊಡಲಿದ್ದೇನೆ ಎಂದು ತಿಳಿಸಿದರು.
ಬಗರ್ ಹುಕುಂ ಮೂಲಕ ಭೂಮಿ ಮಂಜೂರು ಮಾಡಲು ೫೬ ಸಾವಿರ ಅರ್ಜಿಗಳನ್ನು ರೈತರು ಸಲ್ಲಿಸಿದ್ದು,ಅರ್ಹತೆಯ ಆಧಾರದ ಮೇಲೆ ಸಮಿತಿಗೆ ಶಿಫಾರಸ್ಸು ಮಾಡುತ್ತೇವೆ. ಸಮಿತಿ ಮೂಲಕ ವಿಲೇವಾರಿ ಮಾಡಲು ಜಿಲ್ಲಾಡಳಿತದಿಂದ ಕ್ರಮ ವಹಿಸುತ್ತೇವೆ. ಪೋಡಿ ಮಾಡುವ ಕೆಲಸ ನಡೆಯುತ್ತಿದೆ. ೫ ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಜಿಲ್ಲಾಡಳಿತ ದಿಂದ ಮುಖ್ಯ ಮಂತ್ರಿಗಳು ಬಂದಾಗ ಆರ್ ಟಿ ಸಿ ಕೊಡುತ್ತೇವೆ.ಅಧಿಕಾರಿಗಳು ಸೂಕ್ಷ್ಮತೆ ಅರಿತು ಕೆಲಸ ಮಾಡಬೇಕು, ರೈತರ ವಿರುದ್ಧ ದೌರ್ಜನ್ಯ ಎಸಗಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ.ಮಾತನಾಡಿ, ರೈತನ ಭುಜದ ಮೇಲೆ ಕೇವಲ ನೇಗಿಲು ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಇರುತ್ತದೆ. ಅಧಿಕಾರಿಗಳು ರೈತರ ಸಮಸ್ಯೆ ಅರ್ಥ ಮಾಡಿಕೊಂಡು ಬಗೆಹರಿಸಬೇಕು. ಪೊಲೀಸ್ ಇಲಾಖೆ
ತರಬೇತಿಯಲ್ಲಿ ರೈತರ ಸಮಸ್ಯೆ ಬಗ್ಗೆ ಹಾಗೂ ಪರಿಹರಿಸುವ ಬಗ್ಗೆ ಹೇಳಿಕೊಡುತ್ತಾರೆ ಎಂದರು. ಅಪಘಾತಗಳಲ್ಲಿ ೨೬೭ ಜನ ಸತ್ತಿದ್ದಾರೆ. ಬಹುತೇಕ ದ್ವಿಚಕ್ರ ವಾಹನ ಅಪಘಾತಗಳಲ್ಲಿ ರೈತರು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಬಳಸಿ ಪ್ರಾಣ ಉಳಿಸಿಕೊಳ್ಳುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ರೈತರು ಹುತಾತ್ಮರಾದ ಕಾರಣ ರೈತ ಸಂಘ ಹುಟ್ಟಿತು. ನವಲಗುಂದದಲ್ಲಿ ಗೋಲಿಬಾರ್ ಮಾಡಿ ದೌರ್ಜನ್ಯ ನಡೆಸಲಾಗಿತ್ತು. ರೈತ ಸಂಘದಿಂದ ಹಲವಾರು ಸಮಸ್ಯೆ ನೀಗಿವೆ. ಪಂಪ ಸೆಟ್ ಗೆ ಉಚಿತ ವಿದ್ಯುತ್ ಸಿಗಲು ಕಾರಣ ರೈತ ಚಳವಳಿ, ಹೋರಾಟಗಳ ಫಲವಾಗಿ ಹಲವಾರು ಬಾರಿ ಸಾಲಮನ್ನಾ ಮಾಡಲಾಗಿದೆ. ಆದರೆ, ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇವೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ರೈತ ಸಂಘಗಳು ಮಾಡಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಆರ್.ಸುಮಾ ಮಾತನಾಡಿ, ರೈತರು ಬೆನ್ನೆಲೆಬು ಎನ್ನುತ್ತೇವೆ ಅಂತಹ ರೈತ ಸಮುದಾಯದವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ. ನಮ್ಮ ಜಿಲ್ಲೆಯ ರೈತರು ಶ್ರಮಜೀವಿಗಳು. ನೀರಿಲ್ಲದೆ ಹೆಚ್ಚು ಬೆಳೆ ಬೆಳೆಯುತ್ತಾರೆ. ಉತ್ತಮ ಕೃಷಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಸಂಸ್ಕೃತಿ ಕೇಂದ್ರದ ಅಧ್ಯಕ್ಷ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ರೈತರಿಗೆ ರಾಜಕೀಯ ಪ್ರಜ್ಞೆ ಬೇಕಾಗಿದೆ. ಸರ್ಕಾರ, ಕೆ.ಐ.ಎ.ಡಿ.ಬಿ ಮಾಡುತ್ತಿರುವ ದರೋಡೆ ಬಗ್ಗೆ ನಮಗೆ ಪ್ರಜ್ಞೆ ಇಲ್ಲ.ಕೃಷಿ ಉದ್ಯಮವಾಗಿದೆ. ಕೃಷಿಕರು ಜಮೀನು ಮಾರಾಟ ಮಾಡುತ್ತಿದ್ದಾರೆ. ಭೂಮಿಯನ್ನು ನೋಡುವ ವಿಧಾನ ಬದಲಾಗಿದೆ. ಆದರೆ ಹಣಕ್ಕಾಗಿ ಭೂಮಿ ಮಾರಾಟ ಮಾಡುವುದು ಸರಿಯೇ? ಈ ಬಗ್ಗೆ ಯೋಚನೆ ಮಾಡಬೇಕಿದೆ ಎಂದರು.
ಇರುವ ಭೂಮಿ ಕಳೆದುಕೊಂಡರೆ ನಾಳೆ ತಿನ್ಮಲು ಏನು ಮಾಡಬೇಕು. ಯಾವ ಸಂಸ್ಕೃತಿ ಕಡೆ ನಮ್ಮ ಬದುಕು ಸಾಗುತ್ತಿದೆ. ಭೂಮಿ ಹಣಕ್ಕೆ ಮಾರಿದರೆ ನಾಳಿನ ಗತಿ ಏನು? ಇದರ ಬಗ್ಗೆ ರೈತ ಸಮುದಾಯ ಚಿಂತನೆ ಮಾಡುವ ಅಗತ್ಯ ಇದೆಯೆಂದು ಪ್ರತಿಪಾದಿಸಿದರು.
ಕ.ರಾ.ರೈ.ಸಂಘ ಜಿಲ್ಲಾಧ್ಯಕ್ಷ ಬೇಡಶೆಟ್ಟಿಹಳ್ಳಿ ರಮೇಶ್
ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.ಹಸಿರು ಸೇನೆ ಸಂಚಾಲಕ ಕೆ.ಆನಂದಕುಮಾರ್ ಸ್ವಾಗತಿಸಿ ಹುತಾತ್ಮರ ದಿನಾಚರಣೆಯ ಬಗ್ಗೆ ವಿವರಣೆ ನೀಡಿದರು.
ಕೊಂಡರಾಜನಹಳ್ಳಿ ಮಂಜುಳ ರವರು ನಿರೂಪಣೆ ಮಾಡಿದರು.ಈ ನೆಲ ಈ ಜಲ ವೆಂಕಟಾಚಲಪತಿ ಹಾಡಿ ರಂಜಿಸಿದರು.
ವೇದಿಕೆಯಲ್ಲಿ ಕ.ರಾ.ರೈ.ಸಂಘದ ರಾಜ್ಯ ಕಾರ್ಯಾಧ್ಯಕ್ಷರುಗಳಾದ ಈಚಘಟ್ಟದ ಸಿದ್ಧವೀರಪ್ಪ, ಬಿಸನಹಳ್ಳಿ ಬೈಜೇಗೌಡ,ಬಯಲು ಸೀಮೆ ಕಾರ್ಯದರ್ಶಿ ಪ್ರಭಾಕರ್ ಗೌಡ, ರಾಜ್ಯ ಮಹಿಳಾ ಸಂಚಾಲಕಿ ರಾಧಮ್ಮ ಹಾಗೂ ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.