ದೇವನಹಳ್ಳಿಯಿಂದ ಹೊಸೂರುವರೆಗೆ 3190 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ – ಶಾಸಕ ಕೊತ್ತೂರು ಮಂಜುನಾಥ್

 

ಕೋಲಾರ: ದೇವನಹಳ್ಳಿಯಿಂದ ಹೊಸೂರು ಗಡಿಯವರೆಗೆ 110 ಕಿ.ಮೀ ಹೆದ್ದಾರಿ ನಿರ್ಮಿಸಲು ಸಚಿವ ಸಂಪುಟ ಸಭೆ ಒ‌ಪ್ಪಿಗೆ ನೀಡಿದೆ. ಯೋಜನೆಗೆ 3,190 ಕೋಟಿ ಅನುದಾನ ಮೀಸಲಿಡಲಾಗಿದ್ದು, ರಸ್ತೆ ಕಾಮಗಾರಿಗೆ 2,032 ಕೋಟಿ ಹಾಗೂ ಭೂಸ್ವಾಧೀನಕ್ಕೆ 1,158 ಕೋಟಿ ಸಿಗಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಟೆಂಡರ್‌ ಮಾಡಿ ಕಾಮಗಾರಿಗೆ ಮುಖಮಂತ್ರಿಯಿಂದ ಚಾಲನೆ ನೀಡಲಾಗುವುದು ದೇವನಹಳ್ಳಿ, ವಿಜಯಪುರ, ಜಂಗಮನಕೋಟೆ ಕ್ರಾಸ್, ಎಚ್‌ ಕ್ರಾಸ್‌, ವೇಮಗಲ್‌, ನರಸಾರಪುರ, ಕೈಗಾರಿಕಾ ಪ್ರದೇಶ, ಮಾಲೂರು, ಹೊಸೂರು ಗಡಿವರೆಗೆ ಈ ಹೆದ್ದಾರಿ ಇರಲಿದೆ. ಆ ಕಡೆ ತಮಿಳುನಾಡಿವರು ಕೂಡ ಅವರ ವ್ಯಾಪ್ತಿಯಲ್ಲಿ ಹೆದ್ದಾರಿ ಪೂರ್ಣಗೊಳಿಸಿದ್ದಾರೆ. ಇದರಿಂದ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದ್ದು, ಸಂಚಾರ ಸುಗಮವಾಗಲಿದೆ’ ಎಂದು ಹೇಳಿದರು.

‘ಈ ಯೋಜನೆ ಮಾಡಿಸಿಕೊಳ್ಳಲು ನಾನು, ಶಾಸಕರಾದ ಕೆ.ವೈ.ನಂಜೇಗೌಡ, ಎಸ್‌.ಎನ್‌.ನಾರಾಯಣಸ್ವಾಮಿ, ಶರತ್‌ ಬಚ್ಚೇಗೌಡ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಸಾಕಷ್ಟು ಪ್ರಯತ್ನ ಹಾಕಿದ್ದೇವೆ. ಮುಖ್ಯಮಂತ್ರಿ ಭೇಟಿಯಾಗಿ ಸಚಿವ ಸಂಪುಟದಲ್ಲಿ ತರಲು ಈ ವಿಷಯ ತರುವಂತೆ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದನೆ ಸಿಕ್ಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಎರಡೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

‘ಎಲ್ಲಾ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ಇರಬೇಕೆಂದು ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಿಂದೆಯೇ ಚರ್ಚೆ ಆಗಿದೆ. ಹಾಗೆಯೇ ಕೋಲಾರಕ್ಕೂ ಒಂದು ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಬಹಳ ಹಿಂದೆಯೇ ಜಿಲ್ಲೆಯಲ್ಲಿ ಆಗಬೇಕಿತ್ತು. ಆದಷ್ಟು ಬೇಗ ಟೆಂಡರ್‌ ಮಾಡಿಸಿ ನಿರ್ಮಾಣ ಮಾಡಿಸಲಾಗುವುದು. ನಗರದ ಹೊರವಲಯದಲ್ಲಿ ಎರಡು ಕಡೆ ಜಾಗ ಗುರುತಿಸಲಾಗಿದೆ’ ಎಂದು ಹೇಳಿದರು. ‘ಕೋಲಾರಕ್ಕೆ ರಿಂಗ್‌ ರಸ್ತೆ ಅವಶ್ಯವಿದೆ. ಈ ಸಂಬಂಧ ಮುಖ್ಯಮಂತ್ರಿ ಭೇಟಿ ಮಾಡಿ ಅನುದಾನ ತರುತ್ತೇನೆ. ಹಿಂದೆ ನಗರಾಭಿವೃದ್ಧಿ ಇಲಾಖೆ ಮೂಲಕ ಕೇಂದ್ರದಿಂದ 100 ಕೋಟಿ ಬಂದಿತ್ತು. ಆದರೆ, ಏಕೋ ವಾಪಸ್‌ ಪಡೆದಿದ್ದಾರೆ’ ಎಂದು ನುಡಿದರು.

‘ನರಸಾಪುರದಲ್ಲಿ ಇಎಸ್‌ಐ ಆಸ್ಪತ್ರೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಲಿದ್ದು, ಅದಕ್ಕೆ ಕೇಂದ್ರದಿಂದ 154 ಕೋಟಿ ಅನುದಾನ ಬಿಡುಗಡೆಯಾಗಿದೆ. ಐದು ಎಕರೆ ಜಾಗವನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ. ಕೈಗಾರಿಕಾ ಪ್ರದೇಶ ಇರುವುದರಿಂದ ಹೆಚ್ಚು ಕಾರ್ಮಿಕರು ಇದ್ದು, ಇಂಥ ಆಸ್ಪತ್ರೆ ಅಗತ್ಯವಿತ್ತು. ಇದಕ್ಕೆ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಕೂಡ ಕಾಳಜಿ ವಹಿಸಿ ಹೋರಾಟ ನಡೆಸಿದ್ದರು’ ಎಂದರು. ‘ವಾರ್ತಾ ಇಲಾಖೆಯಲ್ಲಿ ವಾಹನ ಇಲ್ಲದಿರುವ ಮಾಹಿತಿ ನನಗೆ ಗೊತ್ತಿಲ್ಲ. ಅವರೂ ನನ್ನನ್ನು ಕೇಳಿಲ್ಲ. ಈ ಸಂಬಂಧ ನಾನೇ ಖುದ್ದಾಗಿ ಮಾತನಾಡಿ ವಾಹನ ಕೊಡಿಸುವ ಕೆಲಸ ಮಾಡುತ್ತೇನೆ. ಹಿಂದೆ‌ ಶಾಸಕರ ಅನುದಾನದಲ್ಲಿ ಪೊಲೀಸ್‌ ಇಲಾಖೆಗೆ ವಾಹನ ನೀಡಲಾಗಿದೆ’ ಎಂದು ಹೇಳಿದರು.

‘ನಗರದಲ್ಲಿ ರಸ್ತೆ ಕಿರಿದಾಗಿದ್ದು, ಭವಿಷ್ಯದ ದೃಷ್ಟಿಯಿಂದ ವಿಸ್ತರಣೆ ಆಗಬೇಕಿದೆ. ಉದಾಹರಣೆಗೆ ಕಾರಂಜಿ ಕಟ್ಟೆ ರಸ್ತೆ ತೀರಾ ಇಕ್ಕಟ್ಟಾಗಿದೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಕೈಗೆತ್ತಿಕೊಳ್ಳಲಾಗುವುದು’ ಎಂದರು. ‘ಕ್ಷೇತ್ರದಲ್ಲಿ ಈವರೆಗೆ 70 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಆಗಿದೆ. ಆದರೆ, ಕೆಲಸ ಇನ್ನೂ ಆರಂಭವಾಗಿಲ್ಲ’ ಎಂದು ಹೇಳಿದರು.
‘ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನವರೂ ಬಲಿಷ್ಠರಾಗಿದ್ದಾರೆ. ಹಾಗೆಯೇ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕೂಡ ಬಲಿಷ್ಠವಾಗಿದೆ. ನಮ್ಮವರು ಗೆಲ್ಲಲಿದ್ದಾರೆ’ ಎಂದು ತಿಳಿಸಿದರು

Leave a Reply

Your email address will not be published. Required fields are marked *