ಕೋಲಾರ: ಮಾಲೂರು ಪಟ್ಟಣದ ಪುರಸಭೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರುಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ಕೋಮಲ ಕೋಳಿ ನಾರಾಯಣ ಅಧ್ಯಕ್ಷರಾಗಿ ಆಯ್ಕೆಯಾದರೆ, ವಿಜಯಲಕ್ಷ್ಮಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣೆ ಅಧಿಕಾರಿ ತಹಶೀಲ್ದಾರ್ ಕೆ.ರಮೇಶ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷದ ಕೋಮಲ ನಾರಾಯಣ ಅವರು 19 ಮತಗಳನ್ನು ಪಡೆದು ಅಧ್ಯಕ್ಷರಾದರು. ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ 7 ಮತಗಳು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಜಯಲಕ್ಷ್ಮಿ 19 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು, ಬಿಜೆಪಿ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅನಿತಾ ನಾಗರಾಜ್ 7 ಮತಗಳು ಪಡೆದು ಪರಾಭವಗೊಂಡರು.
ಶಾಸಕರು ಸಂಸದರು ಸೇರಿದಂತೆ ಒಟ್ಟು 29 ಸದಸ್ಯರ ಪೈಕಿ ಒಬ್ಬ ಪಕ್ಷೇತರ ಸದಸ್ಯ ಬಾನುತೇಜ ಯಾರಿಗೂ ಮತಹಾಕಲು ಇಷ್ಟವಾಗದೆ ತಟಸ್ಥವಾಗಿ ಮತ ಹಾಕದೆ ಉಳಿದರು, ಶಾಸಕರು ಸೇರಿದಂತೆ ಒಟ್ಟು 27 ಮತಗಳು ಚಲಾವಣೆಗೊಂಡವು, ಸಂಸದರು ಸೇರಿದಂತೆ ಇಬ್ಬರು ಸದಸ್ಯರು ಚುನಾವಣಾ ಸಭೆಗೆ ಗೈರು ಹಾಜರಾಗಿದ್ದರು. ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ್ದ ಪವಿತ್ರ ರಾಘವೇಂದ್ರ ಅವರು ಸಭೆಗೆ ಗೈರು ಹಾಜರಾಗಿದ್ದಾರು. ಚುನಾವಣಾ ಸಭೆಗೆ ಹಾಜರಾಗಿದ್ದ ಬಿಜೆಪಿ ಸದಸ್ಯರು ಎಂ ಸಿ ಮುನಿರಾಜು ಹಾಗೂ ಸುಮಿತ್ರ ಪಚ್ಚಪ್ಪ, ಹೂಡಿ ವಿಜಯಕುಮಾರ್ ಸ್ವಾಭಿಮಾನಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಮಂಜುಳ ಅವರು ಕಾಂಗ್ರೆಸ್ ಪರ ಮತ ಚಲಾವಣೆ ಮಾಡಿದ್ದಾರೆ.
ಶಾಸಕ ಕೆ.ವೈ.ನಂಜೇಗೌಡ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸದಸ್ಯರ ಒಗ್ಗಟ್ಟು ಹಾಗೂ ಬೇರೆ ಪಕ್ಷದ ಸದಸ್ಯರ ಸಹಕಾರದಿಂದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಲ್ಲಿ ಅಧಿಕಾರ ಚುಕಾಣಿ ಹಿಡಿಯಲು ಸಾಧ್ಯವಾಯಿತು, ಬೇರೆ ಪಕ್ಷದಿಂದ ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಸಹಕಾರ ನೀಡಿದ್ದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಹಕಾರ ನೀಡಿದ ಸದಸ್ಯರಿಗೆ ಪಕ್ಷದಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು ನಮ್ಮ ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಸದಸ್ಯರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ ಹೇಳಿದರು.
ಪಟ್ಟಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವುದರ ಜೊತೆಗೆ ಪಟ್ಟಣದ ಜನತೆಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವ ಕೆಲಸ ಮಾಡಲಾಗುವುದು ಪುರಸಭೆಗೆ ನೂತನವಾಗಿ ಅಧ್ಯಕ್ಷರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೋಮಲ ಹಾಗೂ ವಿಜಯಲಕ್ಷ್ಮಿ ಅವರು ಪಕ್ಷಾತೀತವಾಗಿ ಪುರಸಭೆಯ ಎಲ್ಲಾ ಸದಸ್ಯರ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಜಿ ಮಧುಸೂದನ್, ಎಚ್.ಎಂ.ವಿಜಯ ನರಸಿಂಹ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಂ ಉಲ್ಲಾ ಖಾನ್, ಪುರಸಭಾ ಸದಸ್ಯರಾದ ಆರ್ ವೆಂಕಟೇಶ್, ಎ ರಾಜಪ್ಪ, ಮುರಳಿಧರ್, ವಿಜಯಲಕ್ಷ್ಮಿ, ಇಂತಿಯಾಜ್ ಖಾನ್, ಜಾಕೀರ್ ಖಾನ್, ಪದ್ಮಾವತಿ, ಹೇಮಾ, ಚೈತ್ರ, ಪ್ರಭಾರ ಮುಖ್ಯ ಅಧಿಕಾರಿ ಸತ್ಯನಾರಾಯಣ, ದರಕಾಸ್ತು ಸಮಿತಿ ಅಧ್ಯಕ್ಷ ಆನೆಪುರ ಹನುಮಂತಪ್ಪ, ಸದಸ್ಯರಾದ ಸತೀಶ್, ನವೀನ್, ಯೋಜನಾ ಪ್ರಾಧಿಕಾರ ಸದಸ್ಯರಾದ ನಾಗರಾಜ್, ಮಂಜುನಾಥ್ ರೆಡ್ಡಿ, ಚಿರಂಜೀವಿ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ಕೊಳಿನಾರಾಯಣ್, ಕೃಷ್ಣಪ್ಪ, ಕಿರಣ್ ಸೊಮಣ್ಣ, ನವೀನ್, ಇನ್ನಿತರರು ಇದ್ದರು.