ಕೋಲಾರ: ನಗರದಲ್ಲಿ ಸರ್ಕಾರಿ ನೌಕರರ ಭವನ ಹಾಗೂ ಗುರುಭವನ ನಿರ್ಮಿಸಲು ಬದ್ಧನಾಗಿದ್ದು, ಅದು ನನ್ನ ಜವಾಬ್ದಾರಿಯಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು ಒಳಿದ ಸಿಬ್ಬಂದಿ ಮೇಲೆ ಒತ್ತಡ ಉಂಟಾಗುತ್ತಿರುವುದು ನಿಜ. ಮುಂದಿನ ದಿನಗಳಲ್ಲಿ ಭರ್ತಿಗೆ ಕ್ರಮ ವಹಿಸುತ್ತೇನೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಹೊಸದಾಗಿ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ನಗರ ಹೊರವಲಯದಲ್ಲಿರುವ ತಮ್ಮ ಅತಿಥಿಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹಾಗೂ ತಾಲ್ಲೂಕಿನಲ್ಲಿ ಭಾರಿ ಬದಲಾವಣೆ ಆಗಬೇಕಿದೆ. ಕೋಲಾರಕ್ಕೆ ವೈದ್ಯಕೀಯ ಕಾಲೇಜು ಸಿಕ್ಕಿದ್ದು, ಅದನ್ನು ಉತ್ತಮವಾಗಿ ಹಾಗೂ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕೆಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿಗಳು ಕೂಡ ಸ್ಥಳ ನೋಡಿಕೊಂಡು ಹೋಗುತ್ತಿದ್ದಾರೆ. ಎಸ್ಎನ್ಆರ್ ಜಿಲ್ಲಾಸ್ಪತ್ರೆ ಸ್ಥಳ ಕೂಡ ಪರಿಶೀಲನೆಯಲ್ಲಿದೆ ಎಂದರು.
ಸಂಘಕ್ಕೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು, ತಾಲ್ಲೂಕು ಅಧ್ಯಕ್ಷರಿಗೆ ಅಭಿನಂದನೆಗಳು. ಪರಸ್ಪರ ಸಹಕಾರದಿಂದ ತಾಲ್ಲೂಕು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ನಾನು ರೋಲ್ ಕಾಲ್ ಗಿರಾಕಿ ಅಲ್ಲ, ಅಧಿಕಾರಿಗಳು ಸೇರಿದಂತೆ ಯಾರಿಗೂ ಫೋನ್ ಮಾಡಿ ಕಾಟ ಕೊಡಲ್ಲ ಸೇಡು ತೀರಿಸಿಕೊಳ್ಳುವ ವ್ಯಕ್ತಿಯೂ ಅಲ್ಲ. ನೌಕರರ ಸಹಾಯಕ್ಕೆ ನಾನು ಸದಾ ಬದ್ಧ ಆದರೆ, ಕೆಲಸ ಸರಿಯಾಗಿ ನಡೆಯಬೇಕು. ಸಾರ್ವಜನಿಕರಿಗೆ ರೈತರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಸರ್ಕಾರದ ಯೋಜನೆ ಜಾರಿ ಮಾಡಬೇಕು ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ನಾನು ಪದಾಧಿಕಾರಿಗಳ ಚುನಾವಣೆಯಲ್ಲಿ ಇಂಥವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಪದಾಧಿಕಾರಿಗಳಾಗಿ ಮಾಡಿ ಎಂದು ನಾನು ಹೇಳಲ್ಲ. ಆ ವಿಚಾರ ತಮ್ಮ ಜವಾಬ್ದಾರಿಗೆ ಬಿಡುತ್ತೇನೆ. ಅವಿರೋಧವಾಗಿ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದು ನನ್ನ ಭಾವನೆ. ಕೆಲ ನೌಕರರು ತಮ್ಮ ಸಹೋದ್ಯೋಗಿಗಳನ್ನೇ ಲೋಕಾಯುಕ್ತಕ್ಕೆ ಹಿಡಿದುಕೊಟ್ಟಿರುವುದು ನನಗೆ ಗೊತ್ತು. ಮಾಲೂರಿನಲ್ಲಿ ಈಚೆಗೆ ಏನಾಯಿತು ಎಂಬುದು ಗೊತ್ತು. ಪಾಪ ಮಹಿಳಾ ಉದ್ಯೋಗಿ ಕಣ್ಣೀರಿಟ್ಟರು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಕಿತಾಪತಿ ಮಾಡುವವರನ್ನು ನಾನು ಸುಮ್ಮನೇ ಬಿಡಲ್ಲ, ಸಹಿಸಿಕೊಳ್ಳುವುದಿಲ್ಲ. ಎಲ್ಲಿ ಮುಳಗಿಸಬೇಕು ಎಂಬುದು ಗೊತ್ತು ಎಂದು ಎಚ್ಚರಿಕೆ ನೀಡಿದರು. ರಾಜ್ಯಮಟ್ಟದಲ್ಲಿ ಜಿಲ್ಲೆಯ ನೌಕರರು ಉತ್ತಮ ಹೆಸರು ಮಾಡಬೇಕು. ಯಾರೇ ಆಯ್ಕೆಯಾದರೂ ಜಿಲ್ಲೆಯ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಈಗ ಗೆದ್ದು ನಿರ್ದೇಶಕರಾಗಿ ಆಯ್ಕೆಯಾದವರು ತಮ್ಮ ಇಲಾಖೆಯಲ್ಲಿನ ಸರ್ಕಾರಿ ನೌಕರರ ಪ್ರತಿನಿಧಿಗಳು. ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸ ಮಾಡಬೇಕು. ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ವ್ಯವಸ್ಥೆಯಲ್ಲಿನ ಕಲುಷಿತ ವಾತಾವರಣವನ್ನು ತಾವೆಲ್ಲಾ ಸೇರಿ ಶುದ್ಧ ಮಾಡಬೇಕು ಇದು ಎಲ್ಲರ ಮೇಲೆ ಜವಾಬ್ದಾರಿ ಇದೆ ಎಂದರು.
ರಾಜ್ಯಾಂಗ ಹಾಗೂ ಕಾರ್ಯಾಂಗ ಒಟ್ಟಿಗೆ ಕೆಲಸ ಮಾಡಬೇಕು. ಯೋಜನೆ ಜಾರಿ ಮಾಡುವವರು ತಾವು. ಸರ್ಕಾರ ಕೈಗೊಂಡ ತೀರ್ಮಾನ ಜಾರಿ ಮಾಡಬೇಕು ಎಲ್ಲರೂ ಸೇರಿ ನೌಕರರ ಸಂಘಕ್ಕೆ ಉತ್ತಮರನ್ನು ಆಯ್ಕೆ ಮಾಡಿ. ಸಾಮಾಜಿಕವಾಗಿ ಎಲ್ಲಾ ವರ್ಗದವರಿಗೆ ಅವಕಾಶ ಸಿಗಬೇಕು. ಮಹಿಳೆಯರಿಗೂ ಜವಾಬ್ದಾರಿ ಮಾಡಿಕೊಡಬೇಕು ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿ ಒಟ್ಟು 71 ನಿರ್ದೇಶಕರಲ್ಲಿ 60 ನಿರ್ದೇಶಕರು ಭಾಗವಹಿಸಿದ್ದರು. 5 ನಿರ್ದೇಶಕರು ಸಂಘಟಕರಿಗೆ ಮೊದಲೇ ಸೂಚಿಸಿ ಸನ್ಮಾನ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಹೊರಗಿದ್ದರು ಉಳಿದ 5 ನಿರ್ದೇಶಕರು ಸನ್ಮಾನದಿಂದ ದೂರ ಉಳಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಂಜಿಮಲೆ ರಮೇಶ್, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮಾಲೂರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಮುಳಬಾಗಿಲು ಅಧ್ಯಕ್ಷ ಅರವಿಂದ್, ಕಂದಾಯ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಜಿಲ್ಲಾ ಚಾಲಕರ ನೌಕರರಸಂಘದ ಅಧ್ಯಕ್ಷ ಮಾರುತಿ ಕುಮಾರ್ ಮುಂತಾದವರು ಇದ್ದರು.
ಸಂಘಕ್ಕೆ ಹೊಸದಾಗಿ ಆಯ್ಕೆಯಾಗಿರುವ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್, ಕಂದಾಯ ಇಲಾಖೆ ಎಫ್ಡಿಎ ಅಜಯಕುಮಾರ್, ಎನ್.ಶ್ರೀನಿವಾಸ್, ತಬ್ಸುಮ್, ನಾಗವೇಣಿ, ಮಂಜುಳಾ, ನೀಲಮ್ಮ, ನಂದಿನಿ ಎಚ್.ಎ., ಸೌಮ್ಯಾ, ಮಂಜುನಾಥ್, ಮಂಜುನಾಥ್ ಕೆ., ಶ್ರೀನಿವಾಸಮೂರ್ತಿ, ಹೇಮಂತಕುಮಾರ್, ಅನಿಲ್ಕುಮಾರ್, ಶಿವಪ್ರಕಾಶ್, ಕೇಶವರೆಡ್ಡಿ, ನಾರಾಯಣಸ್ವಾಮಿ, ಸೋಮಶೇಖರ್ ಆರ್, ರಾಮಮೂರ್ತಿ, ವೆಂಕಟೇಶ, ಚೌಡಪ್ಪ, ಡಾ.ಪ್ರಶಾಂತ್, ವೆಂಕಟೇಶ್ ಬಾಬು, ಮುರಳಿ ಮೋಹನ್, ರತ್ನಪ್ಪ, ಮೊಹಮ್ಕದ್ ಹಿದಾಯತುಲ್ಲಾ, ಮಧು, ಪುರುಷೋತ್ತಮ, ಸುಬ್ರಮಣಿ, ಕೆ.ಕಿರಣ್ ಕುಮಾರ್, ಕೆ.ಶ್ರೀನಿವಾಸ್ , ಮಂಜೇಶ್, ಮಂಜುನಾಥ್, ಸುಬ್ರಮಣ್ಯ, ಯದುನಂದನ್, ರಾಘವೇಂದ್ರ, ಸತೀಶ್ ಕುಮಾರ್, ಬಂಗಾರಪೇಟೆಯ ಅಪ್ಪೇಗೌಡ, ಅಜಯ್, ಪ್ರಭುಕರ್ ರೆಡ್ಡಿ, ಕೆ.ಟಿ.ನಾಗರಾಜ್, ಪ್ರೇಮಾ ಮುಂತಾದವರು ಇದ್ದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುತೂಹಲ ಮೂಡಿಸಿದ್ದು, ಹಾಲಿ ಅಧ್ಯಕ್ಷ ಸುರೇಶ್ ಬಾಬು ಅವರ ವಿರೋಧಿ ಬಣಕ್ಕೆ ಮಾಜಿ ಗೌರವ ಅಧ್ಯಕ್ಷ ರವಿಚಂದ್ರರೆಡ್ಡಿ ಜಾರಿದ್ದಾರೆ. ಈವರೆಗೆ ಅವರು ಜೊತೆಯಲ್ಲಿದ್ದರು ಇದು ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ.