ರಾಮನಗರ: ಕಾಂಗ್ರೆಸ್ ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಲುಲು ಮಾಲ್ ಗಿಫ್ಟ್ ಕೂಪನ್ ಗಳನ್ನು ಹಂಚಿಕೊಂಡು ಚುನಾವಣಾ ಅಕ್ರಮ ನಡೆಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಪ್ರಚಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭಾರೀ ಅಕ್ರಮಗಳನ್ನು ನಡೆಸಲು ಸಂಚು ರೂಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಬೇಕಿದೆ. ಕಾಂಗ್ರೆಸ್ ಎಲ್ಲಾ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ವ್ಯಾಪಕ ಅಕ್ರಮಗಳನ್ನು ನಡೆಸಿ ಜನರನ್ನು ನಂಬಿಕೆಗೆ ಮಾಡಿತು. ಹಲವು ಕ್ಷೇತ್ರಗಳಲ್ಲಿ ಲುಲು ಮಾಲ್ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿತ್ತು. ರಾತ್ರೋರಾತ್ರಿ ಹಳ್ಳಿಗಳಿಗೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಕೂಪನ್ ಹಂಚಿಕೆ ಮಾಡಿದ್ದರು. ಚುನಾವಣೆ ಮುಗಿದ ಮೇಲೆ ಹಣವೂ ಇಲ್ಲ, ಕೂಪನ್ನೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನರು ಹಿಡಿಶಾಪ ಹಾಕಿದರು. ಇಂಥ ಮೋಸಕ್ಕೆ ನೀವು ತುತ್ತಾಗಬೇಡಿ ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏಕವಚನದಲ್ಲಿ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗಳನ್ನು ನಾನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ನವೆಂಬರ್ 13ನೇ ತಾರೀಖು ಜನರೇ ಉತ್ತರ ಕೊಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.