ಪ್ರತಿ ವರ್ಷ ಆಗಸ್ಟ್ 29ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟಿದ ದಿನವಿದು. ಹಾಗಾಗಿ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವಾರ್ಷಿಕೋತ್ಸವ ದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ.
1905 ಆಗಸ್ಟ್ 29 ರಂದು ಪ್ರಯಾಗರಾಜ್ ನ ರಜಪೂತ ಕುಟುಂಬದಲ್ಲಿ ಮೇಜರ್ ಧ್ಯಾನ ಚಂದ್ ಜನಿಸಿದರು. ಅವರು ತಮ್ಮ ಅತ್ಯುತ್ತಮ ಕೌಶಲ್ಯದಿಂದಾಗಿ ವಿಶ್ವದ ಅತ್ಯುತ್ತಮ ಭಾರತೀಯ ಹಾಕಿ ಆಟಗಾರರಲ್ಲಿ ಒಬ್ಬರಾದರು. ಧ್ಯಾನ್ ಚಂದ್ ಅವರು ತನ್ನ 22 ವರ್ಷಗಳ ವೃತ್ತಿ ಜೀವನದಲ್ಲಿ 185 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 400ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ.
ಶ್ರೇಷ್ಠ ಆಟಗಾರನನ್ನು ಸ್ಮರಿಸುವುದಕ್ಕಾಗಿ ಭಾರತ ಸರ್ಕಾರವು 2012 ರಿಂದ ಮೇಜರ್ ಧ್ಯಾನ್ ಚಂದ್ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಘೋಷಿಸಿತು. ಕ್ರೀಡೆಗಳ ಮೇಲೆ ಧ್ಯಾನ್ ಚಂದ್ ಗೆ ಇದ್ದ ಬದ್ಧತೆ, ಉತ್ಸಾಹ ಬೇರೆ ಕ್ರೀಡಾಪಟುಗಳಿಗೆ ಪ್ರೇರೇಪಣೆಯಾಗಲು ಈ ದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಯಿತು.
ಭಾರತೀಯ ಹಾಕಿ ತಾರೆ ಧ್ಯಾನ್ ಚಂದ್ ಅವರು 1928, 1932 ಮತ್ತು 1936 ರಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆಯು ಭಾರತೀಯ ಹಾಕಿ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿತು. ಹಾಗೇ ಧ್ಯಾನ್ ಚಂದ್ ಅವರ ಹೆಸರೂ ಸಹ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸೇರಿತು.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯು ಮುಖ್ಯವಾಗಿ ಕ್ರೀಡೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದಾಗಿದೆ. ಕ್ರೀಡೆಗಳಿಂದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಪ್ರಯೋಜನಗಳನ್ನು ತಿಳಿಸುವುದಾಗಿದೆ. ಹಾಗೇ ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ, ಕ್ರೀಡೆಗಳಿಂದ ಜಾಗತಿಕ ಸ್ಥಾನಮಾನ, ಸಾಮರ್ಥ್ಯ, ಪ್ರಾಮುಖ್ಯತೆಯನ್ನು ತೋರಿಸುತ್ತದೆ.