
ಕೋಲಾರ: ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಡಿಐಸಿಸಿಐ)ನ ನೂತನ ಜಿಲ್ಲಾಧ್ಯಕ್ಷರಾಗಿ ಅಮ್ಮೇರಹಳ್ಳಿ ವಿ. ವೆಂಕಟಾಚಲಪತಿ ನೇಮಕ ಮಾಡಲಾಗಿದೆ.
ಫೆಬ್ರವರಿ 01 ರಂದು ಕೋಲಾರದಲ್ಲಿ ಹಮ್ಮಿಕೊಂಡಿದ್ದ ದಲಿತ ಉದ್ದಿಮೆದಾರರ ಸಭೆಯಲ್ಲಿ ಅಮ್ಮೇರಹಳ್ಳಿ ವೆಂಕಟಾಚಲಪತಿ ಅವರನ್ನು ಜಿಲ್ಲಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಜಿಲ್ಲಾ ಸಮಿತಿ ಆಯ್ಕೆಯನ್ನು ಪುರಸ್ಕರಿಸಿ ರಾಜ್ಯಾಧ್ಯಕ್ಷ ಗಂಗಾಧರ್ ರವರು ಅಧಿಕೃತವಾಗಿ ಘೋಷಣೆ ಮಾಡಿದ ಪತ್ರವನ್ನು ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಸಲ್ಲಿಸಿ ಜಿಲ್ಲಾ ಸಮಿತಿ ಸದಸ್ಯರನ್ನು ಪರಿಚಯಿಸಲಾಯಿತು.
ಅಮ್ಮೇರಹಳ್ಳಿ ವಿ ವೆಂಕಟಾಚಲಪತಿ ಅವರು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಒಂದು ರೆಸ್ಟೋರೆಂಟ್, ಮಾಲೂರು ರಸ್ತೆಯಲ್ಲಿರುವ ರಾಯಲ್ ಫಿಲ್ಲಿಂಗ್ ಪೆಟ್ರೋಲ್ ಬಂಕ್ ಮಾಲೀಕರಾಗಿ ಒಬ್ಬ ಯಶಸ್ವಿ ದಲಿತ ಕೈಗಾರಿಕೋದ್ಯಮಿಯಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪ್ರಾರಂಭವಾದ ದಲಿತ ಉದ್ಯಮಿಗಳ ಡಿಕ್ಕಿ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಹಲವಾರು ದಲಿತ ಉದ್ದಿಮೆದಾರರು ಏಕಗವಾಕ್ಷಿ ಸಭೆಯಲ್ಲಿ ತಮ್ಮ ಉದ್ದೇಶಿತ ಯೋಜನೆಗಳ ಬಗ್ಗೆ ಯಶಸ್ವಿಯಾಗಿ ವಿಷಯ ಮಂಡಿಸಿ ಕೆಐಎಡಿಬಿ ನಿವೇಶನಗಳನ್ನು ಪಡೆದು ಕೈಗಾರಿಕೆ ಪ್ರಾರಂಭಿಸಲು ಈಗಾಗಲೇ ಹಲವು ಕಟ್ಟಡಗಳು ಪ್ರಗತಿಯಲ್ಲಿವೆ.
ಜಿಲ್ಲಾಧಿಕಾರಿಗಳು ಡಿಕ್ಕಿ ಸದಸ್ಯರ ಜೊತೆ ಮಾತನಾಡಿ, ದಲಿತ ಉದ್ದಿಮೆದಾರರು ಯಾವುದೇ ಯೋಜನೆ ಪ್ರಾರಂಭಿಸುವ ಮೊದಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಪಸ್ಸಿನಂತೆ ಕೆಲಸ ಮಾಡಿದರೆ ಅಲ್ಲಿ ನಮ್ಮ ಊಟ ಇದ್ದೇ ಇರುತ್ತದೆ ಎಂದು ಕಿವಿಮಾತು ಹೇಳಿದರಲ್ಲದೆ ಉತ್ತಮ ಯೋಜನೆಗಳಿಗೆ ಜಿಲ್ಲಾಡಳಿತ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಇಟ್ಟಿಗೆ ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ಜಿಲ್ಲಾ ಎಸ್.ಸಿ/ಎಸ್.ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರ್ಜೇನಹಳ್ಳಿ ಬಾಬು,ವರದೇನಹಳ್ಳಿ ವೆಂಕಟೇಶ್, ಮಾನಸ ಎಂಟರ್ಪ್ರೈಸಸ್ ಮಾಲಿಕ ಸಿ.ವಿ.ನಾಗರಾಜ್, ಅಪ್ಪಿ ನಾರಾಯಣಸ್ವಾಮಿ, ಗುತ್ತಿಗೆದಾರ ಡಿ.ಮುನೇಶ್, ಬೆಟ್ಟಹೊಸಪುರ ರವಿ, ದಮ್ಮಮಿತ್ರ ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.