ಕೋಚಿಮುಲ್ ವಿಭಜನೆ ಮಾಡಿ ಚುನಾವಣೆ ನಡೆಸಲು ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒತ್ತಾಯ

ಕೋಲಾರ: ಕೋಚಿಮೂಲ್ ನಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣದಿಂದ ಹಾಲು ಉತ್ಪಾದಕರನ್ನು ಬೀದಿಯಲ್ಲಿ ತಂದು ಹರಾಜು ಹಾಕಿದ್ದೀರಿ, ಇದು ಆಡಳಿತ ಮಂಡಳಿಗೆ ಶೋಭೆ ತರುವುದಿಲ್ಲ ಕೂಡಲೇ ಕೋಚಿಮೂಲ್ ಗೆ ಚುನಾವಣೆ ನಡೆಸಬೇಕು ಎಂದು ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯ ಮಾಡಿದರು.

ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕೋಚಿಮುಲ್ ಒಕ್ಕೂಟದ ಅಧ್ಯಕ್ಷ ಕೆ.ವೈ ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೋಚಿಮುಲ್ ಲೋಪಗಳ ವಿರುದ್ದ ಧ್ವನಿ ಎತ್ತಿದರು.

ನುಕ್ಕನಹಳ್ಳಿ ಡೇರಿ ಪ್ರತಿನಿಧಿ ಎನ್.ಎನ್ ಶ್ರೀರಾಮ್ ಮಾತನಾಡಿ ನಂದಿನಿ ಮಳಿಗೆಗಳಿಗೆ ಹಾಲಿನ ಉತ್ಪನ್ನಗಳನ್ನು ನೀಡಿದ್ದು ಸುಮಾರು 3.37 ಕೋಟಿ ಹಣ ಬಾಕಿ ಇದ್ದು ವಸೂಲಿ ಮಾಡಲು ಆಡಳಿತ ಮಂಡಳಿಯ ನಿರ್ಲಕ್ಷ್ಯ ತೋರಿದ್ದು ಅಲ್ಲದೇ ಕೋಚಿಮುಲ್ ನಲ್ಲಿ ಕೆಲಸಕ್ಕಾಗಿ ನೇಮಕಾತಿಗೆ ಸಂಬಂಧಿಸಿದಂತೆ ಒಕ್ಕೂಟವನ್ನು ಬೀದಿಯಲ್ಲಿ ಹರಾಜು ಹಾಕಲಾಗಿದೆ ಎಂದು ಪ್ರಶ್ನಿಸಿದರು

ಇದಕ್ಕೆ ಸಭೆಯ ಅಧ್ಯಕ್ಷ ಕೆ.ವೈ ನಂಜೇಗೌಡ ಮಾತನಾಡಿ, ನಂದಿನಿ ಉತ್ಪನ್ನಗಳ ಬಾಕಿ ಹಣವನ್ನು ಕೂಡಲೇ ಅಧಿಕಾರಿಗಳು ವಸೂಲಿ ಮಾಡಬೇಕು ಕೋಚಿಮುಲ್ ನೇಮಕಾತಿ ವಿಚಾರವು ಈಗಾಗಲೇ ಕೋರ್ಟ್ ನಲ್ಲಿ ಇದ್ದು ಅದರ ನೋವು ನಾನು ಅನುಭವಿಸುತ್ತಿದ್ದೇನೆ ಅದರ ಕಷ್ಟ ನನಗೆ ಗೊತ್ತು ಈ ವಿಚಾರವನ್ನು ಚರ್ಚೆ ಮಾಡುವುದು ಬೇಡ ಎಂದು ವಿನಂತಿಸಿದರು,

ಚಿಕ್ಕಬಳ್ಳಾಪುರ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಮುಕ್ತಾ ಮುನಿಯಪ್ಪ ಮಾತನಾಡಿ, ಕೋಚಿಮುಲ್ ಒಕ್ಕೂಟದ ಮಾಜಿ ಅಧ್ಯಕ್ಷರನ್ನು ಸಭೆಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಆಡಳಿತ ಮಂಡಳಿಗೆ ಚುನಾವಣೆ ನೆಡಿಸಿ ಆರು ವರ್ಷವಾಗಿದ್ದು ಕೂಡಲೇ ವಿಭಜನೆ ಮಾಡಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು

ಇದಕ್ಕೆ ಉತ್ತರಿಸಿದ ನಂಜೇಗೌಡ ಮುಂದಿನ ಸಭೆಯಲ್ಲಿ ಎಲ್ಲಾ ಮಾಜಿ ಅಧ್ಯಕ್ಷರನ್ನು ವೇದಿಕೆಯಲ್ಲಿ ಕೂರಿಸಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು ವಿಭಜನೆಗೆ ಹಿಂದಿನ ವಿಶೇಷ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಕೂಡಲೇ ಪ್ರತ್ಯೇಕ ಆಡಳಿತಾಧಿಕಾರಿ ನೇಮಿಸಿ ಚುನಾವಣೆ ನಡೆಸಲಾಗುತ್ತದೆ ಎಂದು ಉತ್ತರಿಸಿದರು.

ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಕೋಚಿಮುಲ್ ಒಕ್ಕೂಟವನ್ನು ಭೌಗೋಳಿಕವಾಗಿ ವಿಭಜನೆಗೆ ಹಿಂದಿನ ಸರಕಾರ ಮುಂದಾಗಿದ್ದರೂ ಸಹ ತಡೆಯಾಜ್ಞೆ ತಂದು ಅನ್ಯಾಯ ಮಾಡಲಾಗಿದೆ. ಕೂಡಲೇ ಸರಕಾರವು ವಿಭಜನೆ ಮಾಡಿ ಚುನಾವಣೆ ನಡೆಸಬೇಕು ಚಿಂತಾಮಣಿಯಲ್ಲಿ ಉನ್ನತ ಶಿಕ್ಷಣ ಸಚಿವರು ಇದ್ದರೂ ಸಹ ಐಸ್ ಕ್ರೀಂ ಘಟಕಕ್ಕೆ ಒಕ್ಕೂಟ ಹಳೆಯ ಜಾಗದಲ್ಲೇ ಸ್ಥಾಪನೆಗೆ ಮುಂದಾಗಿದ್ದಾರೆ ಹೊಸ ಜಾಗವನ್ನು ಹುಡುಕುವ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು.

ತುರಾಂಡಹಳ್ಳಿ ಡೇರಿ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಒಕ್ಕೂಟದಿಂದ ಹೊಳಲಿ ಬಳಿಯ ಸೋಲಾರ್ ಪ್ಯಾಂಟ್ ಗೆ ದಿವಂಗತ ಜಿಲ್ಲಾಧಿಕಾರಿ ಡಿ‌.ಕೆ ರವಿ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿದರು ಇದಕ್ಕೆ ಸರ್ವ ಸದಸ್ಯರು ಅನುಮೋದನೆ ನೀಡಿದರು.

ಕೋಚಿಮುಲ್ ನೌಕರರು-ಸಿಬ್ಬಂದಿ ಸಾಮಾನ್ಯ ಕಲ್ಯಾಣ ಟ್ರಸ್ಟ್ ಗೆ ಸಂಗ್ರಹವಾಗಿರುವ ಹಣ ಎಷ್ಟು, ನೌಕರರು, ಸಿಬ್ಬಂದಿಗೆ ಖರ್ಚು ಮಾಡುವ ಬದಲು ಅನ್ಯ ಕಾರ್ಯಗಳಿಗೆ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು

ಇದಕ್ಕೆ ಉತ್ತರಿಸಿ ಕೋಚಿಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ, ಕಲ್ಯಾಣ ಟ್ರಸ್ಟ್ ಗೆ ಸಂಗ್ರಹವಾಗಿರುವ ಹಣದ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ಬಳಿಕ ಕೆವೈ ನಂಜೇಗೌಡ ಸುದ್ದಿಗೋಷ್ಠಿ: 

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ, ಒಕ್ಕೂಟದಿಂದ ಸುಮಾರು 350 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು ಇತಿಹಾಸ ಪುಟಗಳಲ್ಲಿ ಉಳಿಯುತ್ತದೆ ಎಂವಿಕೆ ಗೋಲ್ಡನ್ ಡೇರಿಗೆ ಕಾಮಗಾರಿ ಪ್ರಗತಿಯಲ್ಲಿದೆ ಈಗಾಗಲೇ ಪ್ರತಿ ತಿಂಗಳು ಕೋಚಿಮುಲ್ ಒಕ್ಕೂಟವು 2 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದ್ದು ಹೊಳಲಿ ಬಳಿಯ ಸೋಲಾ‌ರ್ ಘಟಕ ಸ್ಥಾಪನೆಯಿಂದ ೨ ಕೋಟಿ ರೂ ವಿದ್ಯುತ್ ಬಿಲ್ ಅನ್ನು ಉಳಿಯುತ್ತದೆ ಚಿಂತಾಮಣಿಯಲ್ಲಿ ಐಸ್‌ಕ್ರೀಂ ಘಟಕ ೪೫ ಕೋಟಿರೂನಲ್ಲಿ ಮಾಡಲಾಗುತ್ತಿದೆ ಎರಡೂ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್‌ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಸಾಮಾನ್ಯ ಸಭೆಯಲ್ಲಿಯೂ ಒಪ್ಪಿಗೆ ಸೂಚಿಸಿದೆ ಎಂದರು.

ಸೋಲಿನ ಹತಾಶೆಯಿಂದಾಗಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‍ಗೆ ಮತಿಭ್ರಮಣೆಯಾಗಿದ್ದು, ಅವರ ಅವಧಿಯಲ್ಲಿ ಯಾವುದೇ ಕೆಲಸ ಮಾಡದೆ ಕೇವಲ ಉಪ ಗುತ್ತಿಗೆಗಳನ್ನು ನೀಡಿದ್ದೇ ಅವರ ಕೊಡುಗೆ ರಾಜಕೀಯವಾಗಿ ಹೆಸರು ಪಡೆಯುವ ಉದ್ದೇಶದಿಂದಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿಭಜನೆಗೆ ಆತುರ ಬಿದ್ದಾಗ ಚಿಕ್ಕಬಳ್ಳಾಪುರದಲ್ಲಿ ಪ್ಯಾಕಿಂಗ್ ಘಟಕ ಇಲ್ಲದಿರುವುದು ಅರಿವಾಗಿರಲಿಲ್ಲವೇ ಇದೀಗ ಸರಕಾರ ನಿರ್ಣಯ ತೆಗೆದುಕೊಂಡಿದೆ ವಿಚಾರವು ನ್ಯಾಯಾಲಯದಲ್ಲಿದ್ದು, 5-6 ತಿಂಗಳಲ್ಲಿ ವಿಭಜನೆ ಕಾರ್ಯ ನಡೆಯಲಿದೆ ನಂಜೇಗೌಡ ತಿಳಿಸಿದರು

ಇನ್ನು ಆಂಧ್ರದಲ್ಲಿ ಕಳೆದ ಸರಕಾರವು ತಿರುಪತಿ ಲಾಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆಯಾಗುತ್ತಿದ್ದ ಅವಕಾಶವನ್ನು ತಪ್ಪಿಸಿತ್ತು, ಸ್ವಾಮಿಯು ಇದೀಗ ಪುನಃ ನಂದಿನಿ ತುಪ್ಪಕ್ಕೆ ಅವಕಾಶ ನೀಡಿದ್ದಾರೆ. ಇದು ಕೋಲಾರ ಅಲ್ಲದೆ ಎಲ್ಲ ಒಕ್ಕೂಟಗಳಿಗೂ ಲಾಭ ಬೇಡಿಕೆಯೂ ಹೆಚ್ಚಾಗಲಿದೆ. ತಿರುಪತಿಯಂತಹ ಘಟನೆ ನಮ್ಮ ರಾಜ್ಯದಲ್ಲಿ ನಡೆಯಬಾರದು ಎಂದು ನಂದಿನಿ ತುಪ್ಪ ಬಳಕೆಗೆ ಸರಕಾರ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ನಂಜೇಗೌಡ ತಿಳಿಸಿದರು.

ಸಭೆಯಲ್ಲಿ ಕೋಚಿಮುಲ್ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಕೆ.ಎನ್.ನಾಗರಾಜ್, ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜು, ವೈ.ಬಿ.ಅಶ್ವತ್ಥನಾರಾಯಣಬಾಬು, ಡಿ.ವಿ.ಹರೀಶ್, ಎನ್‌.ಹನುಮೇಶ್, ಎನ್.ಸಿ.ವೆಂಕಟೇಶ್, ಆ‌ರ್.ಶ್ರೀನಿವಾಸ್‌, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಷಂಷೀರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ಗೋಪಾಲಮೂರ್ತಿ, ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆಯ ಡಾ.ಜಿ.ಟಿ.ರಾಮಯ್ಯ ಮಾರುಕಟ್ಟೆ ವಿಭಾಗದ ಡಾ.ಶ್ರೀನಿವಾಸಗೌಡ ಅಡ್ಮೀನ್ ನಾಗೇಶ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *