ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಕುಮಾರ್ ನಾಮಪತ್ರ ಸಲ್ಲಿಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಅಜಯ್ ಕುಮಾರ್, ರಾಜ್ಯ ಪರಿಷತ್ ಸ್ಥಾನಕ್ಕೆ ಕುಡಿಯುವ ನೀರು ನೈಮಲ್ಯ ಇಲಾಖೆಯ ಶ್ರೀನಿವಾಸರೆಡ್ಡಿ, ಹಾಗೂ ಖಜಾಂಚಿ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಮುರಳಿ ಮೋಹನ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಕಾಂಕ್ಷಿ ಅಜಯ್‍ಕುಮಾರ್, ತಾವು ಆಯ್ಕೆಯಾದರೆ ಸಂಘವನ್ನು ನೌಕರರ ಸ್ನೇಹಿಯಾಗಿ
ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಕೇಂದ್ರದ ನೌಕರರ ಭವನವನ್ನು ಈಗಾಗಲೇ ಕೆಡವಲಾಗಿದ್ದು, ಆಯ್ಕೆಯಾದ ಕೂಡಲೇ ಮೊದಲ
ಆದ್ಯತೆಯಾಗಿ ಸುಸಜ್ಜಿತ ನೌಕರರ ಭವನ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಸಂಘವನ್ನು ಇಡೀ ರಾಜ್ಯಕ್ಕೆ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಿರಿಯರು ಒಂದೆಡೆ ಸೇರಿ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ನಮ್ಮದೇನು ತಕರಾರಿಲ್ಲ. ಚುನಾವಣೆ ನಡೆದರೆ ನಾವು ಪ್ರಬಲವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕರಿಗೆ ಸಹಕಾರ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಸನ್ಮಾನಿಸಿದೆವು. ಅದೇ ಸಂದರ್ಭದಲ್ಲಿ ನಾವೂ ಪದಾಧಿಕಾರಿಗಳಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಮಗೂ ಅಭಿನಂದಿಸಿದ್ದು, ಯಾವುದೇ ಕಾರಣಕ್ಕೂ ಅವರು ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಆದರೆ, ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ಯಾರೇ ಅಧ್ಯಕ್ಷರಾದರೂ ರೈತರು, ಬಡವರಿಗೆ ಸಹಕಾರ ಮಾಡುವಂತೆ ತಿಳಿಸಿದ್ದಾರೆ ಎಂದು ಹೇಳಿದರು.

ನೌಕರರ ಸಂಘದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆಯಿಲ್ಲ. ಯಾವುದೇ ರೀತಿಯ ಪ್ರಭಾವಗಳನ್ನು ಸಹ ಯಾರೂ ಹೇರುತ್ತಿಲ್ಲ. ಹಣ ಹಂಚಿಕೆ ಮಾಡುತ್ತಿರುವ ಬಗ್ಗೆಯೂ ಮಾಹಿತಿಯಿಲ್ಲ. ಆದರೆ, ನಾವು ಪ್ರಾಮಾಣಿಕವಾಗಿ ಚುನಾವಣೆಯನ್ನು ನಡೆಸಿ ಗೆಲ್ಲುತ್ತೇವೆ
ಎಂದು ಅಜಯ್‍ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಲೂರು ತಾಲ್ಲೂಕು ಅಧ್ಯಕ್ಷ ಮುನೇಗೌಡ, ಮುಳಬಾಗಿಲು ಅಧ್ಯಕ್ಷ ಅರವಿಂದ್, ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್ ಚೌಡಪ್ಪ, ಮಾಜಿ‌ ಖಜಾಂಚಿ ವಿಜಯ್, ಮುಖಂಡರಾದ ಅನಿಲ್ ಕುಮಾರ್, ಅಪ್ಪೇಗೌಡ, ರಾಜೇಂದ್ರ ಸಿಂಗ್, ಮಂಜುನಾಥ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *