ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ವಿಶೇಷ ಸೌಲಭ್ಯಗಳನ್ನು ಪಡೆದು ವಿವಾದಕ್ಕೆ ಗುರಿಯಾಗಿದ್ದ ನಟ ದರ್ಶನ್ ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.
ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದು ನಟ ದರ್ಶನ್ ಆರಾಮವಾಗಿ ಕಾಲಕಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿತ್ತು. ಹಾಗಾಗಿ ಇದೀಗ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ದರ್ಶನ್ ರನ್ನು ಸ್ಥಳಾಂತರ ಮಾಡಲಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಬಳ್ಳಾರಿ ಜೈಲಿನಲ್ಲಿ ಸಿಗುವುದಿಲ್ಲ ಎನ್ನಲಾಗುತ್ತಿದೆ. ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಕಠಿಣ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.
ಇನ್ನು ಬಳ್ಳಾರಿ ಜೈಲಿಗೆ ನಟ ದರ್ಶನ್ ಎಂಟ್ರಿ ಕೊಡುತ್ತಿದ್ದಂತೆ, ಮೊದಲಿಗೆ ಜೈಲಿನ ಡೈರಿಯಲ್ಲಿ ದರ್ಶನ್ ಅವರ ಮಾಹಿತಿಯನ್ನು ಜೈಲಿನ ಸಿಬ್ಬಂದಿ ಬರೆದುಕೊಂಡಿದ್ದಾರೆ. ಯಾವ ಜೈಲಿನಿಂದ ದರ್ಶನ್ ಇಲ್ಲಿಗೆ ಬಂದಿದ್ದಾರೆ, ದಿನಾಂಕ ಮತ್ತು ಯಾವ ಸಮಯಕ್ಕೆ ಬಂದಿದ್ದಾರೆ, ದರ್ಶನ್ ಆರೋಪಿಯಾಗಿರುವ ಪ್ರಕರಣದ ಸಂಪೂರ್ಣ ಮಾಹಿತಿ ಸೇರಿದಂತೆ ಇನ್ನಿತರ ಹಲವು ಮಾಹಿತಿಯನ್ನು ಬರೆಯಲಾಗಿದೆ. ಇನ್ನು ದರ್ಶನ್ ಗೆ ಜೈಲಿನಲ್ಲಿಯೇ ಆರೋಗ್ಯ ತಪಾಸಣೆ ಮಾಡಿ, ಬ್ಯಾರಕ್ ಒಳಗಡೆ ಬಿಡಲಾಗಿದೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದು ವಿವಾದ ಮಾಡಿಕೊಂಡಿರುವ ಕಾರಣ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹಾಗಾಗಿ ಬಳ್ಳಾರಿ ಜೈಲಿನಲ್ಲಿ ಯಾವುದೇ ಕಾರಣಕ್ಕೂ ವಿಶೇಷ ಸೌಲಭ್ಯಗಳನ್ನು ದರ್ಶನ್ ಗೆ ನೀಡಬಾರದು ಎಂದು ಉನ್ನತ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದರ್ಶನ್ ವಿಚಾರದಲ್ಲಿ ಮತ್ತೆ ಯಾವುದೇ ರೀತಿಯ ವಿವಾದವಾಗಬಾರದೆಂದು ಜೈಲು ಅಧಿಕಾರಿಗಳು ನಿಯಮಗಳನ್ನು ಪಾಲಿಸಲಿದ್ದಾರೆ ಎನ್ನಲಾಗುತ್ತಿದೆ.
ನಟ ದರ್ಶನ್ ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಕರೆತಂದ ಸಮಯದಲ್ಲಿ ಜೈಲಿನ ಮುಂದೆ ದರ್ಶನ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳ ಕೂಗಾಟ ಕಿರುಚಾರ ಮಿತಿಮೀರಿತು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿರುವ ಘಟನೆ ನಡೆದಿದೆ.