ಕೋಲಾರ: ಮುಂದಿನ ವರ್ಷ 2025ರ ಜುಲೈ, ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಕಂಟಕ ಎದುರಾಗಲಿದೆ. ಆಗ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಿಯವರೆಗೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಬಾರ್ಕೂರು ಸಂಸ್ಥಾನ ಮಠದ ಸಂತೋಷ್ ಗುರೂಜಿ ಭವಿಷ್ಯ ನುಡಿದರು.
ಸೋಮವಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಅವರ ನಿವಾಸಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಭಾಗ್ಯವಿದೆ ಎಂಬುದಾಗಿ ನಾನು ಹೇಳಲ್ಲ. ಅವರಿಗೆ ನಾಲ್ಕಾರು ತೊಡಕುಗಳು ಇವೆ. ಮುಖ್ಯಮಂತ್ರಿ ಆಕಾಂಕ್ಷಿಗಳು ಹಲವು ಮಂದಿ ಇದ್ದಾರೆ. 2025ರ ಆಗಸ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ, ಪ್ರಧಾನಿ ಮೋದಿ ಅವರಿಗೂ ಕಂಟಕವಿದೆ ಎಂದರು.
ಎಲ್ಲಾ ಮಠದ ಸ್ವಾಮೀಜಿಗಳು ಸಿದ್ದರಾಮಯ್ಯ ಪರ ನಿಲ್ಲಬೇಕು:
ಹಿಂದುಳಿದ ವರ್ಗದ ಕೆಲ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. ನಾವೂ ಸಹ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದ್ದೇವೆ. ಹಿಂದುಳಿದ ವರ್ಗದವರು ಮಾತ್ರವಲ್ಲ, ಎಲ್ಲಾ ಲಿಂಗಾಯತ ಮಠದ ಸ್ವಾಮೀಜಿಗಳೂ ಸಿದ್ದರಾಮಯ್ಯ ಜೊತೆ ನಿಲ್ಲಬೇಕಿದೆ ಎಂದು ಎಂದು ಬಾರ್ಕೂರು ಸಂಸ್ಥಾನ ಮಠದ ಸಂತೋಷ ಗುರೂಜಿ ತಿಳಿಸಿದರು.
ಮುಖ್ಯಮಂತ್ರಿ ವಿಚಾರದಲ್ಲಿ ಜಾತಿ ನೋಡಬಾರದು. ಸಿಎಂ ಸ್ಥಾನಕ್ಕೆ ಯಾವುದೇ ಜಾತಿ ಇಲ್ಲ. ಮುಖ್ಯಮಂತ್ರಿ ಜಾತಿವಾದಿ ಆಗಿರಬಾರದು. ಇಲ್ಲಿವರೆಗೆ ಬಂದ ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ನಿಜವಾಗಿಯೂ ಭ್ರಷ್ಟರಲ್ಲ. ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಡಾ ವಿಚಾರ ಮುಂದಿಟ್ಟುಕೊಂಡಿವೆ. ಪಾರ್ವತಮ್ಮನರ ಜಮೀನಿಗೆ ಬದಲಾಗಿ ಬೇರೆ ನಿವೇಶನ ಕೊಡಲಾಗಿದೆ ಅಷ್ಟೆ. ಹಿಂದಿನ ಮುಖ್ಯಮಂತ್ರಿಗಳು ಎಷ್ಟು ಹಗರಣ ಮಾಡಿದ್ದಾರೆ, ಎಷ್ಟು ದುಡ್ಡು ಮಾಡಿದ್ದಾರೆ ಎಂಬುದೆಲ್ಲಾ ನಮಗೆ ಗೊತ್ತಿದೆ. ಕೆಲ ರಾಜಕಾರಣಿಗಳಿಗೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಇಂಥವರು ಸಭೆ ಮಾಡುತ್ತಾರೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲು ಕರ್ನಾಟಕದ ಜನ ದಡ್ಡರಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಬೆಂಬಲ ಅಗತ್ಯವಿದೆ ಅದಕ್ಕೆ ನಾವು ಬದ್ಧ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್ ಮುನಿಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಬಿ.ವಿ ಮಹೇಶ್, ರಾಜು ಅಪ್ಪಿ ಮಹಿಳಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಮುಖಂಡರಾದ ಸಾ.ಮಾ ಬಾಬು, ನಾಮಲ್ ಮಂಜು, ಎಬಿವಿಪಿ ಹರೀಶ್, ಅಪ್ಪಿ ನಾರಾಯಣಸ್ವಾಮಿ, ರವೀಶ್ ಗೌಡ, ಮುಂತಾದವರು ಇದ್ದರು.