ಕೋಲಾರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿರುತ್ತದೆ. ಆದ್ರೆ ಈ ಒಂದು ಟ್ರಸ್ಟ್ ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟು ಸಾವಿರಾರು ಬಡ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ.
ಹೌದು.. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಬುಧವಾರ ಮುಳಬಾಗಿಲು ತಾಲೂಕಿನ 70 ಸರ್ಕಾರಿ ಶಾಲೆಯ 2500 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಿದೆ. ಏಕೆಂದರೆ ಸರ್ಕಾರಿ ಶಾಲೆಯಲ್ಲಿ ಓದುವುದು ಬಡ ಕುಟುಂಬದ ಮಕ್ಕಳು ಮಾತ್ರ. ಸರ್ಕಾರಿ ಶಾಲೆ ಚೆನ್ನಾಗಿದ್ದರೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಬಡ ಕುಟುಂಬದ ಪ್ರತೀ ಮಗುವೂ ಸಹ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಮುನೇಶ್ ಜೋಗಲಕಾಷ್ಠಿ ಹೇಳಿದರು.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಮಕ್ಕಳ ಕಲಿಕೆಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ನೀಡುವುದು, ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವುದು, ನಲಿ-ಕಲಿ ಚೇರ್ಸ್ ಮತ್ತು ಟೇಬಲ್ ಗಳನ್ನು ವಿತರಿಸುವುದು, ಸ್ಮಾರ್ಟ್ ಕ್ಲಾಸ್ ಗಳಿಗೆ ಟಿವಿ ಮತ್ತು ಕಂಪ್ಯೂಟರ್ ಗಳನ್ನು ನೀಡುವುದು, ಮಳೆಗಾಲದಲ್ಲಿ ನೀರು ಸೋರುತ್ತಿರುವ ಸರ್ಕಾರಿ ಶಾಲೆಗಳನ್ನು ದುರಸ್ಥಿ ಪಡಿಸುವುದು, ಶಾಲಾ ಕಾಂಪೌಂಡ್ ಗಳನ್ನು ನಿರ್ಮಿಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಮುಳಬಾಗಿಲು ತಾಲೂಕು ಒಂದರಲ್ಲೇ 155ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದ್ದಾರೆ. ಬರೀ ಕೋಲಾರ ಜಿಲ್ಲೆ ಒಂದೇ ಅಲ್ಲದೆ ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಸಹ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಕೆಲಸ ಮಾಡುತ್ತಿದೆ.
ಈ ಹಿಂದೆ ನಟಿ ಸೌಂದರ್ಯ ಅವರು ಓದಿದ ಶಾಲೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಮುಂದೆ ಬಂದು ಶಾಲೆಗೆ ಸುಣ್ಣಬಣ್ಣ ಬಳಿದು, ಶಾಲೆಯ ಕಾಂಪೌಂಡ್ ನ ಗೋಡೆಗಳಿಗೂ ಮಕ್ಕಳ ಕಲಿಕೆಗೆ ಉಪಯುಕ್ತವಾಗಿರುವಂತಹ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಿದ್ದರು. ಸೌಂದರ್ಯ ಕಟ್ಟಿಸಿದ ಶಾಲೆ ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದಾರೆ. ಪ್ರಗತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 155ಕ್ಕೂ ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಬಳಿದು ಚಿತ್ರಗಳನ್ನು ಬಿಡಿಸುವ ಕಾರ್ಯ ಮಾಡಲಾಗಿದೆ.
ಅಲ್ಲದೆ ವಿಶೇಷವಾಗಿ ಮಹಾಮಾರಿ ಕೊರೊನಾ ಸಂದರ್ಭದಲ್ಲೂ 15 ಸಾವಿರ ಮಂದಿಗೆ ಉಚಿತವಾಗಿ ಫುಡ್ ಕಿಟ್ ಗಳನ್ನು ನೀಡಿದ್ದು, ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೂರಕವಾದ ಆಹಾರ, ದಿವ್ಯಾಂಗ ಮಕ್ಕಳಿಗೆ ವ್ಹೀಲ್ ಚೇರ್ಸ್ ಸಹ ಕೊಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿಯೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್ ಕೆಲಸ ಮಾಡುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷ ಮುನೇಶ್ ಭರವಸೆ ನೀಡಿದರು.