
ಕೋಲಾರ: ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಗೊಲ್ಲಪೇಟೆ ಗ್ರಾಮದ ನಿವಾಸಿ ಎಸ್.ಜಾವೀದ್ ದಾರ್ವೇಶ್ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಇದೇ ಗ್ರಾಮದ ಕೆಲವು ಕಿಡಿಗೇಡಿಗಳ ವಿರುದ್ಧ ಪೋಲಿಸ್ ಇಲಾಖೆ ತಕ್ಷಣ ಕ್ರಮ ಜರುಗಿಸಿ, ಬಂಧಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ರಕ್ಷಣಾ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಸ್.ಜಾವೀದ್ ದಾರ್ವೇಶ್ ಅವರಿಗೆ ಗೊಲ್ಲಪೇಟೆ ಗ್ರಾಮದ ಇಮ್ರಾನ್, ಮುಬಾರಕ್, ಶೇಕ್ ಪ್ಯಾರು, ಅಫ್ಜಲ್, ಸದ್ದಾರ್ ಬೇಗ್ ಹಾಗೂ ಶೇಕ್ ಇನಾಯತ್ ಈ ವ್ಯಕ್ತಿಗಳು ಬದುಕಲು ಬಿಡದೆ ಪ್ರತಿನಿತ್ಯ ತೊಂದರೆ ನೀಡುತ್ತಿರುವ ಇವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ಆದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ. ಕರ್ನಾಟಕ ದಲಿತ ರಕ್ಷಣಾ ಸಮಿತಿಯು ಎಸ್.ಜಾವೀದ್ ದಾರ್ವೇಶ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದು, ಅವರಿಗೆ ನ್ಯಾಯ ಕೊಡಿಸುವವರಿಗೂ ನಾವು ಬಿಡುವುದಿಲ್ಲ ಎಂದು ಹೇಳಿದರು.
ನೊಂದ ವ್ಯಕ್ತಿ ಹಾಗೂ ದಲಿತ ರಕ್ಷಣಾ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಸ್.ಜಾವೀದ್ ದಾರ್ವೇಶ್ ಮಾತನಾಡಿ, ಗೊಲ್ಲಪೇಟೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನಾವು ವಾಸವಾಗಿದ್ದೇವೆ. ಪಕೀರ್ ಸಮುದಾಯಕ್ಕೆ ಸೇರಿದ ನಮ್ಮನ್ನು, ಇದೇ ಗ್ರಾಮದ ಅಲೆಹದ್ದೀಸ್ ಸಮುದಾಯಕ್ಕೆ ಸೇರಿದ ಕೆಲವರು ನಮ್ಮನ್ನು ಜೀವಿಸಲು ಬಿಡುತ್ತಿಲ್ಲ. ಮಂತ್ರ ಹಾಕುವುದು, ಪೂಜೆ ಸಲ್ಲಿಸುವುದು, ಭಜನೆ ಮಾಡುವುದು. ಮಕ್ಕಳು, ದೊಡ್ಡವರು ಭಯ ಬಿದ್ದರೆ ಅವರಿಗೆ ಮಂತ್ರ ಹಾಕಿ ತಾಯ್ತ ಕಟ್ಟುವ ವೃತ್ತಿಯನ್ನು ನಮ್ಮ ಕುಟುಂಬದವರು ಮಾಡುತ್ತಿದ್ದಾರೆ. ಪ್ರತಿ ಶುಕ್ರವಾರ ಅನ್ನದಾನ ಮಾಡುವುದನ್ನು ಸಹಿಸದ ಇವರು ನಮ್ಮನ್ನು ಗ್ರಾಮ ಬಿಟ್ಟು ಹೋಗಲು ಅಥವಾ ಈ ವೃತ್ತಿಯನ್ನು ಬಿಡಬೇಕೆಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಊರಲ್ಲಿರುವ ಮಸೀದಿಗಳಲ್ಲಿ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು, ನಮಗೆ ಗೌರವ ನೀಡದೆ, ಅಪಹಾಸ್ಯ ಮಾಡುವುದು, ನಮ್ಮ ಕುಟುಂಬದ ವ್ಯಕ್ತಿಗಳನ್ನು ನಿಂದಿಸುವುದು ಈ ರೀತಿ ಕಿರುಕುಳ ನೀಡುತ್ತಿದ್ದು, ಪ್ರಶ್ನೆ ಮಾಡಿದರೆ ಹಲ್ಲೇ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಇಮ್ರಾನ್, ಮುಬಾರಕ್, ಶೇಕ್ ಪ್ಯಾರು, ಅಫ್ಜಲ್, ಸದ್ದಾರ್ ಬೇಗ್ ಹಾಗೂ ಶೇಕ್ ಇನಾಯತ್ ಈ ಆರು ಮಂದಿ ವಿರುದ್ಧ ದೂರು ಸಹ ನೀಡಲಾಗಿದೆ. ಆದರೆ, ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡ ರಾಜಕುಮಾರ್, ಯಸ್ಮಾನ್ ಸುಲ್ತಾನ, ಶೇಕ್ ಅಮಿತ್ ಜಾನ್ ದರ್ವೇಶ್ ಹಾಜರಿದ್ದರು.