ಕೋಲಾರ: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ವಸತಿ ಯೋಜನೆಗಾಗಿ ಬಹಳ ವರ್ಷಗಳ ನಂತರ ಹೊಸ ಬಡಾವಣೆ ನಿರ್ಮಾಣಕ್ಕೆ ಪ್ರಯತ್ನ ಹಾಕುತ್ತಿದ್ದು, ಸಾರ್ವಜನಿಕರಿಂದ ನಿವೇಶನಗಳಿಗೆ ಬೇಡಿಕೆ ಇರುವ ಕಾರಣ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ವಸತಿ ಬಡಾವಣೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಕುಡಾ ಅಧ್ಯಕ್ಷ ಮೊಹಮ್ಮದ್ ಅನೀಫ್ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರವು ಜಂಟಿ ಯೋಜನೆಗೆ ಮುಂದಾಗಿದೆ. ಭೂಮಾಲೀಕರ ಸಹಭಾಗಿತ್ವದಲ್ಲಿ 50:50 ಅನುಪಾತದ ಒಪ್ಪಂದ ಮಾಡಿಕೊಂಡು ಹೊಸ ಬಡಾವಣೆ ಅಭಿವೃದ್ಧಿ ಮಾಡಲು ನಿರ್ಧರಿಸಿದೆ ಎಂದರು.
ನಗರ ಹೊರವಲಯದ ಅಮಾನಿಕೆರೆಗೆ ಹೊಂದಿಕೊಂಡಿರುವ ಹಾಗೂ ಗದ್ದೆ ಕಣ್ಣೂರು ಗ್ರಾಮಕ್ಕೆ ಸೇರಿರುವ ನೂರು ಎಕರೆ ಜಮೀನಿನನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಎರಡನೇ ಹಂತದಲ್ಲಿ ಅಮಾನಿಕೆರೆ ಗ್ರಾಮದ ಜಮೀನುಗಳಲ್ಲಿ ವಸತಿ ಯೋಜನೆ ರೂಪಿಸಲು ಉದ್ದೇಶಿಸಿದೆ. ಉದ್ದೇಶಿತ ಬಡಾವಣೆಗೆ ಸ್ವಇಚ್ಛೆಯಿಂದ ಭೂಮಿ ನೀಡಲು ಆಸಕ್ತಿ ಇರುವ ಜಮೀನು ಮಾಲೀಕರು ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಕೋಲಾರ ಅಭಿವೃದ್ಧಿ ಆಗುವುದರ ಜೊತೆಗೆ ರೈತರಿಗೂ ಅನುಕೂಲವಾಗಲಿದೆ. ನಾವೇ ಬಡಾವಣೆ ಅಭಿವೃದ್ಧಿಪಡಿಸಿ 50:50 ಅನುಪಾತದಲ್ಲಿ ರೈತರಿಗೆ ನಿವೇಶನ ನೀಡುತ್ತೇವೆ ಎಂದು ಹೇಳಿದರು.
ಪ್ರಾಧಿಕಾರದಿಂದ ಕಡೆಯ ಬಡಾವಣೆ ಮಾಡಿ ನಿರ್ಮಿಸಿ 30 ವರ್ಷಗಳಾಗಿದೆ. ನಾನು ಬಂದ ಮೇಲೆ ಟಮಕ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ರಸ್ತೆ ಅಭಿವೃದ್ಧಿಗಾಗಿ ಪಿಡಬ್ಲ್ಯೂಡಿ ಗೆ ಗುತ್ತಿಗೆ ನೀಡಲಾಗಿದೆ. ಇನ್ನು ಮೂರು ತಿಂಗಳಗಳಲ್ಲಿ ಸಂಪೂರ್ಣ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ರಿಂಗ್ ರೋಡ್ ಮಾಡಲು ಡಿಪಿಆರ್ ಮಾಡಲಾಗಿದೆ. ಪ್ರಾಧಿಕಾರದ ಬಳಿ ಹಣವಿಲ್ಲದ ಕಾರಣ ರಿಂಗ್ ರೋಡ್ ಮಾಡಲು ಸರ್ಕಾರವೇ ಅನುದಾನ ನೀಡಬೇಕಾಗಿದೆ. ಕೋಲಾರ ನಗರ ಸುತ್ತಮುತ್ತ 12 ಕಿ.ಮೀ ರಂತೆ 193 ಹಳ್ಳಿ ಒಳಗೊಂಡಂತೆ ರಿಂಗ್ ರೋಡ್ ಲಿಮಿಟ್ ನಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಅಭಿವೃದ್ಧಿ ಮಾಡಿದ ತಕ್ಷಣವೇ ಸ್ವಾಗತ ಕಮಾನುಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.