ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ಸಿಪಿಐಎಂ ಪಕ್ಷದ 18 ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿ 31 ನಿರ್ಣಯ ಅಂಗೀಕಾರ ಮಾಡಲಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಸರ್ಕಾರಗಳ ಕಣ್ಣು ತೆರೆಸಲು ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ ಎಂದು ಸಿಪಿಐಎಂ ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಕೈಗಾರಿಕೆಗಳ ಪ್ರದೇಶವಾಗಿದೆ ಮತ್ತಷ್ಟು ಕೈಗಾರಿಕೆ ಸ್ಥಾಪಿಸಲು ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ. ಭೂಕಾಯ್ದೆ ಮಾರಕವಾಗಿದ್ದು ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನಾವು ಕೈಗಾರಿಕೆ ವಿರೋಧಿ ಅಲ್ಲ ಆದರೆ, ಶ್ರೀನಿವಾಸಪುರದಲ್ಲಿ ಮಾವು ಬೆಳೆಯುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನೇ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ ಬೇಕಾದರೆ ಸರ್ಕಾರಿ ಜಾಗದಲ್ಲೂ ದೂರದ ಪ್ರದೇಶದಲ್ಲೂ ಕೈಗಾರಿಕೆ ಮಾಡಿಕೊಳ್ಳಲಿ ಎಂದರು.
ರೈತರು ಸಾಗುವಳಿ ಮಾಡುತ್ತಿದ್ದರೂ ಆ ಜಮೀನನನ್ನು ಅರಣ್ಯ ಇಲಾಖೆ ತನ್ನದು ಎಂದು ವಶಕ್ಕೆ ಪಡೆಯುತ್ತಿದೆ. ರೈತರಿಗೆ ಬೆದರಿಕೆ ಹಾಕಿ ಬಲವಂತದಿಂದ ಹೊರಹಾಕಲಾಗುತ್ತಿದೆ ಈ ಬಗ್ಗೆ ದೊಡ್ಡ ಹೋರಾಟ ನಡೆಸುತ್ತೇವೆ ಜಿಲ್ಲೆಯಲ್ಲಿ ಕುಡಿಯಲು ಹಾಗೂ ಕೃಷಿಗೆ ಶಾಶ್ವತವಾದ ನೀರಾವರಿ ವ್ಯವಸ್ಥೆ ಇಲ್ಲ. ಆ ವ್ಯವಸ್ಥೆ ಮಾಡಬೇಕು. ಮೂರನೇ ಹಂತದ ಶುದ್ಧೀಕರಣ ಮಾಡಿ ಕೆ.ಸಿ.ವ್ಯಾಲಿ ನೀರು ಹರಿಸಬೇಕು ಎಂದು ಹೇಳಿದರು.
ಹೈನುಗಾರಿಕೆ, ರೇಷ್ಮೆ, ಕೃಷಿ ಹಾಗೂ ತೋಟಗಾರಿಕೆ ವಿಚಾರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಹೀಗಾಗಿ, ಕೃಷಿಯಾಧಾರಿತ ಕೈಗಾರಿಕೆಗಳು ಬರಬೇಕು ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗದಿಪಡಿಸಬೇಕು ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಸಾಮಾಜಿಕ ಭದ್ರತೆ ಇಲ್ಲವಾಗಿದೆ ಜೊತೆಗೆ ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡಲು ಗಮನ ಹರಿಸಬೇಕು. ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಮುಂದಿನ ಮೂರು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಸಮಸ್ಯೆಗಳಿಗೆ ಅನುಸಾರ ಹೋರಾಟ ರೂಪಿಸುತ್ತೇವೆ. ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುತ್ತಿದೆ. ಈ ಕೆಲಸವನ್ನು ಕೂಡಲೇ ಕೈಬಿಡಬೇಕು. ಹಾಗೆಯೇ ಜಿಲ್ಲೆಯಲ್ಲಿ ಕೈಗಾರಿಕೆಗಳಲ್ಲಿ ಶೋಷಣೆ ನಡೆಯುತ್ತಿದ್ದು ಸರ್ಕಾರ ಮಧ್ಯ ಪ್ರವೇಶಿಸಬೇಕು ಕೇಂದ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟಕ್ಕೆ ಸಿಪಿಎಂ ರಾಜಕೀಯವಾಗಿ ಬೆಂಬಲ ನೀಡುತ್ತಿದೆ. ಕೋಮುವಾದಿ ಬಿಜೆಪಿ ದೂರ ಇಡಲು ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಲಾಗುತ್ತಿದೆ. ಇದು ಚುನಾವಣೆಗೆ ಸೀಮಿತವಾಗಿದ್ದು, ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ತೊಂದರೆಯಾದರೆ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ವಿ.ಗೀತಾ ಮಾತನಾಡಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಸ್ಥಳೀಯರಿಗೆ ಉದ್ಯೋಗ ನೀಡಲು ಆದ್ಯತೆ ನೀಡಬೇಕು. ಮಹಿಳೆಯರಿಗೆ ಮೀಸಲಾತಿ ಕೊಡಬೇಕು. ಡಿಸಿಸಿ ಬ್ಯಾಂಕ್ ಗೆ ಚುನಾವಣೆ ನಡೆಸಿ ಬ್ಯಾಂಕ್ ಉಳಿಸಬೇಕು. ಬ್ಯಾಂಕ್ ಸಾಲ ನೀಡುವಂತಾಗಬೇಕು. ಆದರೆ, ಡಿಸಿಸಿ ಬ್ಯಾಂಕ್ ನಿಷ್ಕ್ರಿಯಗೊಂಡಿದ್ದು, ಈ ಬಗ್ಗೆಯೂ ನಾವು ಹೋರಾಟ ನಡೆಸುತ್ತೇವೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮೂರೂ ಪಕ್ಷಗಳು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಕಾಂಗ್ರೆಸ್ನ ನಾಲ್ವರು ಶಾಸಕರಿದ್ದು, ಚುನಾವಣೆ ಪ್ರಚಾರದ ವೇಳೆಯಲ್ಲಿ ನೀಡಿದ ಭರವಸೆಯಂತೆ ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಈವರೆಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ ಎ.ಆರ್ ಬಾಬು ಮಾತನಾಡಿ ಜಿಲ್ಲೆಗೆ ಯಾವುದೇ ರೈಲ್ವೆ ಯೋಜನೆಗಳು ಬರುತ್ತಿಲ್ಲ. ಕೋಲಾರದಿಂದ ವೈಟ್ ಫೀಲ್ಡ್, ಕೋಲಾರ– ಮುಳಬಾಗಿಲು–ಕಡಪ ಸಂಪರ್ಕ, ಬಂಗಾರಪೇಟೆ-ಯಲಹಂಕ ಸಂಪರ್ಕ, ಮಾರಿಕುಪ್ಪಂ –ಕೋಲಾರ ರೈಲು ಹಾಕಬೇಕು. ಡಬಲ್ ಲೈನ್ ಮಾಡಬೇಕು. ಸಬ್ ಅರ್ಬನ್ ಯೋಜನೆಯನ್ನು ಕೋಲಾರಕ್ಕೂ ವಿಸ್ತರಿಸಬೇಕು. ಅಗತ್ಯವಿರುವ ಕಡೆ ರೈಲ್ವೆ ಬ್ರಿಡ್ಜ್ ಮಾಡಬೇಕು ಎಂದು ಒತ್ತಾಯಿಸಿದರು.
ನೂತನ ಸಮಿತಿ ಆಯ್ಕೆ:
ಶ್ರೀನಿವಾಸಪುರದಲ್ಲಿ ನಡೆದ ಸಮ್ಮೇಳನದಲ್ಲಿ ಸಿಪಿಎಂನ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಪಿ.ಆರ್ ಸೂರ್ಯನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್, ವಿ.ಗೀತಾ, ಎ.ಆರ್.ಬಾಬು, ಪಿ.ತಂಗರಾಜ್, ಪಾತಕೋಟೆ ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಎಂ.ವಿಜಯಕೃಷ್ಣ, ಪಿ.ಆರ್.ಶಂಕರ್, ಎನ್.ಅಶೋಕ, ಆನಂದ್, ಜಯಲಕ್ಷ್ಮಿ, ಗಂಗಮ್ಮ, ಅಪ್ಪಯಣ್ಣ, ವೀರಪ್ಪರೆಡ್ಡಿ, ವೀರಭದ್ರ, ಪಿ.ಶ್ರೀನಿವಾಸ್, ಹನುಮಂತರಾಯ, ಜಯರಾಮ್ ಅವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ಎಂ ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ಎಂ.ವಿಜಯಕುಮಾರ್ ಇದ್ದರು.