ಚಿಕ್ಕಬಳ್ಳಾಪುರ: ಎಲ್ಲರಿಗೂ ಫ್ರೀ ಎಂದು ಹೇಳಿ, ರೇಷನ್ ಕಾರ್ಡ್ ರದ್ದುಪಡಿಸಲಾಗುತ್ತಿದೆ. 11-12 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ. ಗುಡಿಸಲಲ್ಲಿ ವಾಸಿಸುವ ಜನರ ಪಡಿತರ ಚೀಟಿ ಕೂಡ ರದ್ದಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿಯಿಂದಾಗಿ ಖಜಾನೆ ಖಾಲಿಯಾಗಿ ಶಾಸಕರು ದಂಗೆ ಏಳುತ್ತಿದ್ದಾರೆ. ಅದಕ್ಕಾಗಿ ಹಣ ಉಳಿಸಲು ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಕಾರ್ಡು ರದ್ದು ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಹೇಳುವುದೆಲ್ಲ ಸುಳ್ಳಾಗುತ್ತಿದೆ. ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೂಡಲೇ ಕಾರ್ಡು ರದ್ದು ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಕಾರ್ಡು ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ವಕ್ಫ್ ಮಂಡಳಿ ಮಾಡುತ್ತಿರುವ ಲ್ಯಾಂಡ್ ಜಿಹಾದ್ ವಿರುದ್ಧ ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಕರ್ನಾಟಕದ ವಕ್ಫ್ ಬೋರ್ಡ್ ತಿಮಿಂಗಿಲದಂತಿದೆ. ಇದು ದೇವಸ್ಥಾನ, ಶಾಲೆ, ಕೃಷಿ ಜಮೀನುಗಳನ್ನು ನುಂಗಿ ಹಾಕುತ್ತಿದೆ. ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂದು ಹೇಳಿದ್ದರೂ, ವಕ್ಫ್ ಮಂಡಳಿಗೆ ಮಾತ್ರ ಪ್ರತ್ಯೇಕ ಸಂವಿಧಾನವಿದೆ. ಬೌದ್ಧರು, ಕ್ರೈಸ್ತರಿಗೆ ಇಲ್ಲದ ನ್ಯಾಯಾಂಗದ ಅಧಿಕಾರ ವಕ್ಫ್ ಮಂಡಳಿಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದರು.
ಕಂದವಾರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್ ಕಬಳಿಸಿದೆ. ಅಲ್ಲಿನ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಿದರೆ, ಶಾಲಾ ಮಕ್ಕಳು ಯಾವ ಪ್ರಾರ್ಥನೆ ಮಾಡಬೇಕು? ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ಹಸಿರು ಬಾವುಟ ಹಾರಿಸಲಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಕ್ಫ್ ಮಂಡಳಿಗೆ ಇಂತಹ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ ಎಂದು ದೂರಿದರು.
ವಕ್ಫ್ ಮೂಲಕ ಸರ್ಕಾರ ಹಿಂದೂಗಳ ಜಮೀನುಗಳನ್ನು ಕಬಳಿಸುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ಈ ಹೋರಾಟಕ್ಕೆ ಹೆದರಿ ಸರ್ಕಾರ ಪಹಣಿಯಲ್ಲಿ ಬದಲಾವಣೆ ತರುತ್ತಿದೆ. ಲ್ಯಾಂಡ್ ಜಿಹಾದ್ ವಿರುದ್ಧ ಹೋರಾಟ ನಡೆಸುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.
ನಾನು ಕಂದಾಯ ಸಚಿವನಾಗಿದ್ದಾಗ ಹಾಡಿಗಳಿಗೆ ಹೋಗಿ ರೈತರ ಜಮೀನು ಕಾಪಾಡಿದ್ದೆ. ಅರಣ್ಯ ಸಚಿವರು ಎಚ್ಎಂಟಿ ಜಮೀನು ಬಗ್ಗೆ ಮಾತಾಡಿದ್ದಾರೆ. ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಆ ಜಾಗವನ್ನು ಎಚ್ಎಂಟಿಗೆ ನೀಡಿದ್ದರು. ಅರಣ್ಯ ಸಚಿವರು ಇದನ್ನು ಅರಣ್ಯ ಭೂಮಿ ಎನ್ನುತ್ತಿದ್ದಾರೆ. ಯಾವ ಭೂಮಿ ಯಾವುದು ಎಂದು ಅವರು ಮೊದಲು ತಿಳಿದುಕೊಳ್ಳಲಿ ಎಂದರು.
21,000 ಆಸ್ತಿಗಳನ್ನು ನಮ್ಮದು ಎಂದು ವಕ್ಫ್ ಘೋಷಿಸಿದೆ. 1994 ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಅಧಿಸೂಚನೆ ಮಾಡಲಾಗಿದೆ. ಅದನ್ನು ರದ್ದು ಮಾಡಬೇಕಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಳಿಗೆ ಪರಮಾಧಿಕಾರ ನೀಡಿದರು. ಇಂತಹ ಅಧಿಕಾರವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.