ಕೋಲಾರ: ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕು ಪಂಚಾಯತಿಗಳು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನಡೆದಿರುವ ದಲಿತರ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರವನ್ನು ತನಿಖೆಗೆ ಒತ್ತಾಯಿಸಿ ಡಿ.10 ರಂದು ಕರ್ನಾಟಕ ರಿಪಬ್ಲಿಕನ್ ಸಂಘಟನೆ ಹಾಗೂ ಪ್ರಜಾ ವಿಮೋಚನಾ ಚಳುವಳಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಹಣ ಬಿಡುಗಡೆ ಮಾಡಿದರೂ ನಮ್ಮಲ್ಲಿನ ಅಧಿಕಾರಿಗಳು ಅ ಹಣವನ್ನು ದೋಚಿ ದಲಿತ ಸಮುದಾಯಕ್ಕೆ ಮೋಸ ಮಾಡಿದ್ದು ಅಲ್ಲದೆ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಇದರ ವಿರುದ್ದವಾಗಿ ನಮ್ಮ ಹೋರಾಟವು ನಿರಂತರವಾಗಿ ಮುಂದುವರೆಯಲಿದೆ ಎಂದರು.
ಜಿಲ್ಲೆಯ ಬಂಗಾರಪೇಟೆ ತಾಲೂಕು ಪಂಚಾಯತಿ ಇಒ ರವಿಕುಮಾರ್ ಆದಾಯಕ್ಕಿಂತ ಹೆಚ್ಚಿನ ಹಣ ಗಳಿಸಿದ್ದಾರೆ ಇದರ ಬಗ್ಗೆ ದಾಖಲೆಗಳ ಸಮೇತವಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಬೇತಮಂಗಲ, ಘಟ್ಟಕಾಮದೇನಹಳ್ಳಿ, ಎನ್ ಜಿ ಹಲ್ಕೂರು ಗ್ರಾಮ ಪಂಚಾಯಿತಿಗಳಲ್ಲಿ ಇ ಸ್ವತ್ತು ಮಾಡಿಸಲು ಹಣ ನಿಗದಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕೋಲಾರ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಜಿಲ್ಲಾಧಿಕಾರಿಯು ಬೆಂಬಲವಾಗಿ ನಿಂತಿದ್ದಾರೆ ಎಂಬುದು ಅನುಮಾನ ಮೂಡುತ್ತದೆ ಕೆಲವು ಅಧಿಕಾರಿಗಳ ವಿರುದ್ದ ದಾಖಲೆಗಳ ಸಮೇತವಾಗಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ 15 ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳ ಹೆಸರಿನಲ್ಲೂ ಹಣ ದುರುಪಯೋಗವಾಗಿದೆ ಇದರ ವಿರುದ್ದ ಕ್ರಮ ವಹಿಸುವಂತೆ ರಾಜ್ಯಾದ್ಯಂತ ವಿವಿಧ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಲಿದ್ದು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಜಾ ವಿಮೋಚನಾ ಚಳುವಳಿಯ ಜಿಲ್ಲಾಧ್ಯಕ್ಷ ಪಿವಿಸಿ ಮಣಿ, ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಅಮರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಬಂಗಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪಯ್ಯ ಮುಂತಾದವರು ಇದ್ದರು.