ನಾಡು, ನುಡಿ, ಸಂಸ್ಕೃತಿಯ ಸಂರಕ್ಷಣೆಮಾಡಿ – ಸಿಎಂಆರ್ ಶ್ರೀನಾಥ್

ಕೋಲಾರ: ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆಗೆ ಸಾಧು-ಸಂತರ, ಕವಿಗಳ, ವಚನಕಾರರ, ದಾಸರ ಕೊಡುಗೆ ಅಪಾರವಾಗಿದ್ದು, ನಾಡು, ನುಡಿ, ಸಂಸ್ಕೃತಿಯ ಸಂರಕ್ಷಣೆಯೇ ನಮ್ಮ ಗುರಿಯಾಗಬೇಕು ಎಂದು ಸಿಎಂಆರ್ ಶ್ರೀನಾಥ್ ತಿಳಿಸಿದರು.

ನಗರದ ರೋಟರಿ ಸೆಂಟ್ರಲ್ ಕೋಲಾರ ಕ್ಲಬ್ಬಿನಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಿ, ರೋಟರಿ ಸೆಂಟ್ರಲ್ ಕ್ಲಬ್ಬಿನ ಸ್ತಬ್ದ ಚಿತ್ರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಕನ್ನಡದ ನೆಲ, ಜಲ, ನುಡಿ, ಗಡಿಯನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಯುವಕರು ತಾಯ್ನುಡಿಯ ಬಗೆಗೆ ಅಭಿಮಾನ, ಔದಾರ್ಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದರು.

ರೋಟರಿ ಸೆಂಟ್ರಲ್ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷ ಕೆ.ಎನ್.ಎನ್ ಪ್ರಕಾಶ್ ಮಾತನಾಡಿ, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇಂಗ್ಲಿಷ್ ಅಬ್ಬರವೇ ಕೈಮೇಲಾಗಿರುವ ಪರಿಣಾಮ, ನೆಲದ ಭಾಷೆಯಾದ ಕನ್ನಡಕ್ಕೆ ಮನ್ನಣೆ ಸಿಗುತ್ತಿಲ್ಲ. ವಾಣಿಜ್ಯ ಮಳಿಗೆಗಳು, ಅಂಗಡಿಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲಡೆ ನಾಮಫಲಕಗಳಲ್ಲಿ ಕನ್ನಡವನ್ನು ದೊಡ್ಡದಾಗಿ ಅಂದರೆ ಶೇ.60ರಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ನಿಯಮ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಇಂಗ್ಲಿಷ್ ವಿಜೃಂಭಿಸುತ್ತಿದೆ. ಹೀಗೆಯೇ ಮುಂದುವರಿದರೆ, ಭಾಷೆಯ ಜೊತೆಗೆ ಈ ನೆಲದ ಸಂಸ್ಕೃತಿಯೂ ಹಾಳಾಗುತ್ತದೆ. ಇದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರೋಟರಿ ಸೆಂಟ್ರಲ್ ಕ್ಲಬ್ಬಿನ ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ನಾನು ಅಲವು ವಿದೇಶಗಳಿಗೆ ಭೇಟಿ ನೀಡಿದಾಗ ಆ ಸ್ಥಳಗಳಲ್ಲಿ ಜೀವನ ಕಟ್ಟಿಕೊಂಡಿರುವ ಕನ್ನಡಿಗರ ಕನ್ನಡದ ಪ್ರೀತಿ ಕಂಡು ನಿಬ್ಬೆರಗಾದೆ. ದುಬೈ ಎಂಬ ದೇಶದಲ್ಲಿ ಕನ್ನಡಿಗರು ತಮ್ಮ ಮನೆಗಳಿಗೆ ಸೀರಿಯಲ್ ಸೆಟ್ ಹಾಕಿಸಿ ರಾಜ್ಯೋತ್ಸವ ಆಚರಿಸುತ್ತಾರೆ. ದೊಡ್ಡ ದೊಡ್ಡ ಮಾಲಿನಲ್ಲಿ ನಮ್ಮ ಜೊತೆ ಕನ್ನಡ ಮಾತನಾಡುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನಮ್ಮ ಕರ್ನಾಟಕದಲ್ಲಿ ಅನ್ಯ ಭಾಷಿಗರ ಜೊತೆ ಕನ್ನಡ ಮಾತನಾಡದೆ ಅವರ ಭಾಷೆಯಲ್ಲಿ ಮಾತನಾಡುತ್ತಾರೆ ಇದು ತಪ್ಪು. ನಮ್ಮ ನಾಡು-ನುಡಿಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷಾ ವ್ಯಾಮೋಹ ಅತಿಯಾಗಬಾರದು, ಆದರೆ ಅಭಿಮಾನವನ್ನು ನಾವು ಬಿಟ್ಟುಕೊಡಬಾರದು. ಅಭಿಮಾನ ಇಲ್ಲದೇ ಹೋದರೆ ಭಾಷೆ ಹೇಗೆ ಬೆಳೆಯುತ್ತದೆ. ಭಾಷೆ ಬೆಳೆಯಬೇಕೆಂದರೆ ನಾವು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನೂ ಕಲಿತು ಭಾಷಾ ಸಂಪತ್ತು ಬೆಳೆಸಿಕೊಳ್ಳಬೇಕು, ಕನ್ನಡವನ್ನು ಮರೆಯಬಾರದು ಎಂದರು.

ರೋಟರಿ ಸೆಂಟ್ರಲ್ ಕೋಲಾರ ಕ್ಲಬ್ಬಿನ ಅಧ್ಯಕ್ಷ ಬಿ.ಎಂ.ರಮೇಶ್ ಬಾಬು, ಪದಾಧಿಕಾರಿಗಳಾದ ಅಪ್ಪಿ ನಾರಾಯಣಸ್ವಾಮಿ, ಕೇದಾರ್ ಬಾಲಾಜಿ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *