ಜಾನಪದ ಕಲೆಗೆ ಪೋತ್ಸಾಹ ಅಗತ್ಯವಿದೆ – ಸಂಗೀತ ನಿರ್ದೇಶಕ ವಿ.ಮನೋಹರ್

ಕೋಲಾರ: ಪ್ರಸ್ತುತ ಸನ್ನಿವೇಶದಲ್ಲಿ ಜಾನಪದ ಕಲೆಯು ಅಳಿವಿನಂಚಿನಲ್ಲಿದೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಯುವ ಸಮೂಹದ ಮೇಲೆ ಇದ್ದು ಕಲೆಗೆ ಹೆಚ್ಚಿನ ಪೋತ್ಸಾಹವು ಅಗತ್ಯವಿದೆ ಎಂದು ಸಂಗೀತಾ ನಿರ್ದೇಶಕ ಹಾಗೂ ಸಾಹಿತಿ ವಿ.ಮಹೋಹರ್ ತಿಳಿಸಿದರು.

ನಗರದ ಸಿ.ಬೈರೇಗೌಡ ನಗರದ ಮೈದಾನದಲ್ಲಿ ಭಾನುವಾರ ರಾತ್ರಿ ಜಗ್ಗಣ್ಣಕ್ಕ ಸಂಗೀತಾ ಸುಗ್ಗಿಯ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ನಮ್ಮ ಪೂರ್ವಜರು ನಡೆಸಿಕೊಂಡು ಬರತ್ತಿದ್ದ ಕಲೆಗಳು ಜಾಗತೀಕರಣ ಪ್ರಭಾವದಿಂದ ದೂರ ಸರಿಯುತ್ತಿವೆ. ಇಂದಿನ ಮಕ್ಕಳಿಗೆ ಜಾನಪದ ಕಲೆಗಳ ಬಗ್ಗೆ ತಿಳಿಸಿಕೊಟ್ಟು ಜಾನಪದ ಸಾಹಿತ್ಯವನ್ನು ಮತ್ತು ಕಲೆಯನ್ನು ಉಳಿಸುವ ಪ್ರಯತ್ನಗಳು ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡ ಹಾಗೂ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ ದೇಶೀಯ ಕಲೆಯನ್ನು ಪರಿಚಯಿಸುವ ಪ್ರಯತ್ನವಾಗಿದ್ದು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಕೃತಿಕ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸಲು ಉತ್ತೇಜಿಸಬೇಕು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯ ಜೊತೆಗೆ ನಮ್ಮ ಸಂಸ್ಕೃತಿಯೊಂದಿಗೆ ಭಾಷೆಯನ್ನು ಉಳಿಸುವುದು ಮುಖ್ಯವಾಗಿದೆ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ, ಅದನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಮಾತ್ರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿನ ಪ್ರತಿಭೆ ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಹಾಗೂ ಜಾನಪದ ಗಾಯಕ ಗೋ.ನಾ ಸ್ವಾಮಿ ಮಾತನಾಡಿ ಸಿನಿಮಾದ ಮಾಯಾಲೋಕದಲ್ಲಿ ದೇಶೀಯ ಜಾನಪದ ಕಲೆಗಳು ದೂರವಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಮೈಕ್ ಮುಟ್ಟದ ಕಲಾವಿದರನ್ನು ಗುರುತಿಸಿ ಬೆಳೆಸುವ ಉದ್ದೇಶವಾಗಿದೆ ಸ್ಥಳೀಯವಾದ ಕಲೆ ಸಂಸ್ಕೃತಿಗೆ ಚಪ್ಪಾಳೆ ಹೊಡೆದು ಅವರಿಗೂ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮುಂದಿನ ವರ್ಷ ಜನವರಿಯಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ 20 ಲಕ್ಷ ಮೊತ್ತದ ವಿಶ್ವ ಕನ್ನಡ ಜಾನಪದ ಗಾಯನ ಸ್ಪರ್ಧೆಯ ಲಾಂಛನ ಬಿಡುಗಡೆಗೊಳಿಸಿದರು. ಜಗ್ಗಣ್ಣಕ್ಕ ಕಾರ್ಯಕ್ರಮದಲ್ಲಿ ವಿಜೇತರಾದ ಸ್ಪರ್ಧೆಗಳಿಗೆ ಬಹುಮಾನಗಳನ್ನು ವಿತರಿಸಿದರು ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು, ಜಾನಪದ ಒಕ್ಕೂಟದ ಅಧ್ಯಕ್ಷ ನಾಗರಾಜ್, ನಿರ್ಮಿತಿ ಕೇಂದ್ರದ ನಾರಾಯಣಗೌಡ, ಶಿಕ್ಷಣ ಇಲಾಖೆಯ ಅಶೋಕ್, ರೇಷ್ಮೆ ಇಲಾಖೆಯ ಬೈರೇಗೌಡ, ನಿರೂಪಕಿ ಅಕ್ಷಿತಾ ಮುಂತಾದವರು ಇದ್ದರು.

Leave a Reply

Your email address will not be published. Required fields are marked *