ಉದ್ಯಮ ಲೋಕದ ದಿಗ್ಗಜ ರತನ್ ಟಾಟಾರ ಇಂಟ್ರೆಸ್ಟಿಂಗ್ ಲವ್ ಸ್ಟೋರಿ..!

ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿಯಾಗಿರುತ್ತೆ. ಆದರೆ ಕೆಲವರು ಹೇಳಿಕೊಂಡರೆ, ಹಲವರು ಬಚ್ಚಿಟ್ಟುಕೊಂಡಿರುತ್ತಾರೆ. ಅದರಂತೆಯೇ ರತನ್ ಟಾಟಾ ಜೀವನದಲ್ಲೂ ಪ್ರೀತಿಯಾಗಿತ್ತು. ಯವ್ವನದಲ್ಲಿ ಯುವತಿಯೊಬ್ಬಳ ಪ್ರೀತಿಗೆ ಬಿದ್ದಿದ್ದರು. ಆದರೆ ಆ ಪ್ರೀತಿ ಏನಾಯ್ತು? ರತನ್ ಟಾಟಾ ಆಕೆಯನ್ನು ಮದ್ವೆ ಯಾಕಾಗಿಲ್ಲ? ಈ ಬಗ್ಗೆ ಕೆಲ ವರ್ಷಗಳ ಹಿಂದಷ್ಟೇ ರತನ್ ಟಾಟಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು.

ರತನ್ ಟಾಟಾಗೆ ಲವ್ ಮಾಡಿದ ಹುಡುಗಿ ಸಿಗಲೇ ಇಲ್ಲ..!

ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರ್ಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದ್ದೆ.
ನಾನು ಮದುವೆಯಾಗ ಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ಭಾವಿಸಿದ್ದೆ. ಆದ್ರೆ, ಆಕೆ ಭಾರತಕ್ಕೆ ಬರ್ಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡ್ಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧ ದೂರವಾಯ್ತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಲಿಲ್ಲ ಎಂದು ರತನ್ ಟಾಟಾ ಹೇಳಿದ್ದರು.

ಬ್ರಹ್ಮಚಾರಿಯಾಗಿಯೇ ಉಳಿದ ರತನ್ ಟಾಟಾ:
ರತನ್ ಟಾಟಾ ಅವರೇ ಹೇಳಿಕೊಂಡಂತೆ ಅವರು 4 ಬಾರಿ ಮದುವೆಯಾಗುವ ನಿರ್ಧಾರದ ಸಮೀಪಕ್ಕೆ ಹೋಗಿದ್ರು… ಆದರೆ ಬ್ರಹ್ಮಚಾರಿಯಾಗಿಯೇ ಉಳಿದ್ರು… ಟಾಟಾ ಯಾಕೆ ಮದುವೆಯನ್ನೇ ಆಗಿರಲಿಲ್ಲ? ಶತಕೋಟಿ ಭಾರತೀಯ ಪ್ರಜೆಗಳಿಗೆ ಮಾತ್ರವಲ್ಲ, ಈ ಪ್ರಶ್ನೆ ಜಗತ್ತಿನ ಕೋಟಿ ಕೋಟಿ ಜನರಿಗೆ ಕಾಡಿತ್ತು. ಯಾಕೆ ಅಂದ್ರೆ ನೋಡಲು ಅಷ್ಟು ಸುಂದರವಾಗಿದ್ದ ಒಬ್ಬ ವ್ಯಕ್ತಿ, ಜೀವನದ ಕೊನೆಯವರೆಗೂ ಮದುವೆಯನ್ನೇ ಆಗದೇ ಒಂಟಿಯಾಗೇ ಇದ್ದರು. ಹಾಗಿದ್ರೆ ರತನ್ ಟಾಟಾ ಅವರು ಮದುವೆ ಯಾಕೆ ಆಗಿರಲಿಲ್ಲ? ರತನ್ ಟಾಟಾ ಅವರಿಗೆ ಲವ್ ಫೆಲ್ಯೂರ್ ಆಗಿತ್ತಾ? ಜೀವನದಲ್ಲಿ ರತನ್ ಟಾಟಾ ಅವರು, ಅನುಭವಿಸಿದ್ದ ನೋವುಗಳು ಎಂತಹದ್ದು?

ಮಾಧ್ಯಮಗಳಿಂದ ಸದಾ ದೂರವೇ ಇರುತ್ತಿದ್ದ ರತನ್ ಟಾಟಾ, ತಮ್ಮ ಆಪ್ತ ಸಂಗತಿಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ಬಹುಕಡಿಮೆ. ಅಪರೂಪಕ್ಕೆ ಒಂದೆರೆಡು ಬಾರಿ ತಮ್ಮ ವಿವಾಹದ ವಿಷಯದ ಕುರಿತು ಅವರು ಬಹಿರಂಗವಾಗಿ ಮಾತನಾಡಿದ್ದರು. ಕನಿಷ್ಠ 4 ಬಾರಿ ವಿವಾಹದ ಸಮೀಪಕ್ಕೆ ಹೋಗಿದ್ದೆ. ಆದರೆ ಪ್ರತಿ ಬಾರಿಯೂ ನಾನೇ ಹೆದರಿಕೊಂಡು ವಿವಾಹದಿಂದ ಹಿಂದೆ ಸರಿದೆ. ಹೀಗಾಗಿ ಮದುವೆ ಅವಕಾಶ ತಪ್ಪಿಹೋಯ್ತು ಎಂದು ನಗುನಗುತ್ತಲೇ ಉತ್ತರಿಸಿದ್ದರು ರತನ್ ಟಾಟಾ.

ಬಾಲಿವುಡ್ ನಟಿ, ಮಾಡೆಲ್ ಸಿಮಿ ಗರೇವಾಲ್ ಮತ್ತು ರತನ್ ಟಾಟಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ 70-80ರ ದಶಕದಲ್ಲಿ ದೊಡ್ಡದಾಗಿ ಹಬ್ಬಿತ್ತು. ಆದರೆ ಇಬ್ಬರೂ ಎಲ್ಲಿಯೂ ಈ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ ಮತ್ತು ಪ್ರತಿಕ್ರಿಯೆಯನ್ನೂ ನೀಡಲಿರಲಿಲ್ಲ. ಆದರೆ ಸಂದರ್ಶನವೊಂದರಲ್ಲಿ ಸ್ವತಃ ಸಿಮಿ ರತನ್ ಟಾಟಾ ಅವರನ್ನು ಬಹುವಾಗಿ ಹೊಗಳಿದ್ದರು. ‘ನಮ್ಮಿಬ್ಬರದ್ದು ಸುದೀರ್ಘ ಇತಿಹಾಸವಿದೆ. ಅವರೊಬ್ಬ ಪರಿಪೂರ್ಣ ವ್ಯಕ್ತಿ. ಅವರೆಂದೂ ದುಡ್ಡಿನ ಹಿಂದೆ ಬಿದ್ದಿರಲಿಲ್ಲ ಎಂದು ಹೇಳಿದ್ದರು.

ರತನ್ ಟಾಟಾ ಭಾರತದ ಉದ್ಯಮ ರಂಗದ ಓರ್ವ ಅದ್ಭುತ ಸಾಧಕ. 87 ವರ್ಷಗಳ ಸಾರ್ಥಕ ಜೀವನವನ್ನು ಬದುಕಿ, ನಿಜವಾಗಿಯೂ ಭಾರತದ ರತ್ನವಾಗಿ ಜನಮಾನಸದಲ್ಲಿ ಉಳಿದರು ರತನ್ ಟಾಟಾ…

Leave a Reply

Your email address will not be published. Required fields are marked *