ಕೋಲಾರ: ಸರ್ಕಾರದ ಆದೇಶದಂತೆ ಅನುಮೋದನೆಯಾಗದೇ ಬಾಕಿ ಇರುವ ಎಲ್ಲಾ ಗ್ರಾಮ ಪಂಚಾಯಿತಿ ನೌಕರರನ್ನು ತಕ್ಷಣವೇ ಅನುಮೋದನೆ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸೋಮವಾರ ತಾಲ್ಲೂಕು ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ. ವಿಜಯಕೃಷ್ಣ ಮಾತನಾಡಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರದ ಆದೇಶದಂತೆ ಅನುಮೋದನೆ ಮಾಡದೇ ಕೆಲವು ನೆಪಗಳನ್ನು ಹೇಳಿ ಮುಂದೂಡುತ್ತಿರುವುದು ಖಂಡನೀಯ ಅನುಮೋದನೆಗಾಗಿ ಬಾಕಿ ಇರುವ ಕಡತಗಳನ್ನು ಕೂಡಲೇ ಜಿಲ್ಲಾ ಪಂಚಾಯತ್ ಕಛೇರಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು,
ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ವೇತನವನ್ನು ಬಡ್ಡಿ ಸಮೇತ ನೀಡಬೇಕು. ನಿವೃತ್ತರಾದ ನೌಕರರಿಗೆ ಗ್ರಾಚ್ಯೂಟಿ ಹಣವನ್ನು ನೀಡಿ ಗೌರವದಿಂದ ಸತ್ಕರಿಸಿ ಬೀಳ್ಕೊಡಬೇಕು ಮರಣ ಹೊಂದಿದ ಕುಟುಂಬದವರಿಗೆ ಅನುಕಂಪದ ಕೆಲಸವನ್ನು ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತಾಗಾರರನ್ನು ನೇಮಿಸಬೇಕು. ಸ್ವಚ್ಚ ಭಾರತ ನೆಪದಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಮಲದ ಕಾಲುವೆ ಚರಂಡಿಗಳನ್ನು ಸ್ವಚ್ಚಗೊಳಿಸಲು ಆದೇಶಿಸುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು,
ತಾಲೂಕ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ರಾಷ್ಟ್ರಧ್ವಜ ಹಾರಿಸಿ ಇಳಿಸುವ ಸಿಬ್ಬಂದಿಗೆ ನೀಡುವ ಭತ್ಯೆಯನ್ನು ಪ್ರತಿ ತಿಂಗಳು ವೇತನದ ಜೊತೆ ನೀಡಬೇಕು. ಈ ಭತ್ಯೆಯನ್ನು ರೂ. 60ಕ್ಕೆ ಹೆಚ್ಚಳ ಮಾಡಿದ್ದು, ಇದರಂತೆ ನೀಡಬೇಕು. ಎಲ್ಲಾ ನೌಕರರಿಗೆ ಸೇವಾ ಪುಸ್ತಕವನ್ನು ತೆರೆಯಬೇಕು. ಎಸ್.ಎಸ್.ಎಲ್.ಸಿ. ಪಾಸಾಗಿ ಸತತವಾಗಿ 5 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಖಾಲಿಯಾಗಿರುವ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಈ ಬಗ್ಗೆ ಜೇಷ್ಠತಾ ಪಟ್ಟಿ ತಯಾರಿಸಬೇಕು. ಗ್ರಾಮ ಪಂಚಾಯಿತಿ ನೌಕರರ ಮೇಲೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಿರುಕುಳ, ದೌರ್ಜನ್ಯವನ್ನು ನಿಲ್ಲಿಸಬೇಕು ಎಂದರು.
ಪ್ರತಿ ವರ್ಷ ಪಂಪ್ ಆಪರೇಟರ್ಗಳಿಗೆ ಬ್ಯಾಟರಿ, ಟೆಸ್ಟರ್ ರೈನ್ ಕೋಟ್ ಸೇರಿದಂತೆ ಪ್ಯಾಕೇಜ್ ನೀಡಬೇಕು. ಎಲ್ಲಾ ಸಿಬ್ಬಂದಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕು, ಕಾರ್ಮಿಕ ಕಾನೂನು ರೀತ್ಯ ವಾರಕ್ಕೊಮ್ಮೆ ರಜೆ ನೀಡುವುದು ಕಡ್ಡಾಯವಾಗಿದೆ. ನೀರುಗಟ್ಟಿಗಳಿಗೆ ವಾರಕ್ಕೊಮ್ಮೆ ರಜೆ ನೀಡಬೇಕು, ಇಲ್ಲವೇ ಓಟಿ ನೀಡಬೇಕು. ಗ್ರಾಮ ಪಂಚಾಯಿತಿಯಿಂದ ಯಾವುದೇ ಸೇವೆಯನ್ನು ನೀಡುವ ಮೊದಲು ಕಡ್ಡಾಯವಾಗಿ ಕಂದಾಯ ಪಾವತಿ ಮಾಡಬೇಕೆಂದು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಇಒಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಶಿವರಾಜ್, ಖಜಾಂಚಿ ಮುನಿವೆಂಕಟಪ್ಪ, ಮುಖಂಡರಾದ ವೆಂಕಟರಾಮೇಗೌಡ, ಶ್ರೀನಿವಾಸಗೌಡ, ರಾಮಚಂದ್ರ, ಆಂಜಿನಪ್ಪ, ಸಪಾಯತ್ ಖಾನ್, ನಾರಾಯಣಸ್ವಾಮಿ, ರಾಜಪ್ಪ, ಸಂತೋಷ್ ಮತ್ತಿತರರು ಭಾಗವಹಿಸಿದ್ದರು.