ಕೋಲಾರ: ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಸೆ.19ರಂದು ನಗರಕ್ಕೆ ಭೇಟಿ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 12 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನ ನರಸಾಪುರದಲ್ಲಿ ಜೋಡಿ ರಸ್ತೆ ನಿರ್ಮಿಸಲಾಗುತ್ತಿದೆ. ಡಿವೈಡರ್, ಬೀದಿ ದೀಪ, ಕ್ಯಾಮೆರಾ ಅಳವಡಿಕೆಯೂ ಸೇರಿದೆ. ಸ್ವಾತಿ ಹೋಟೆಲ್ ಬಳಿಯ ಬ್ರಿಡ್ಜ್‌ನಿಂದ ಬೆಳ್ಳೂರು ಕಡೆ ಸಾಗುವ ವೃತ್ತದವರೆಗೆ 7 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಜೊತೆಗೆ ಖಾಜಿಕಲ್ಲಹಳ್ಳಿ ರಸ್ತೆಯನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಟೆಂಡರ್ ಆಗಿದ್ದು, ಕೆಲಸ ಶುರುವಾಗಿ ಆರು ತಿಂಗಳಲ್ಲಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ಸಹ ನೀಡಲಾಗಿದೆ ಎಂದರು.
ಚೌಡದೇನಹಳ್ಳಿ, ವಲ್ಲಭಿ ರಸ್ತೆ, ಮದ್ದೇರಿ, ಸೀತಿ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗಳಿಗೆ ಸ್ಥಳೀಯವಾಗಿ ನಾವೇ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ ಲೋಕೋಪಯೋಗಿ ಇಲಾಖೆಯಿಂದ 45 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಇದರಲ್ಲಿ 20 ಕೋಟಿ ಮೊತ್ತದ ಕಾಮಗಾರಿ ಆರ್‌ಡಿಪಿಆರ್‌ನಿಂದ ನಡೆಯಲಿದೆ. ಇನ್ನೂ 12 ಕೋಟಿ ಹಾಗೂ 25 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಪ್ರಕಿಯೆಯಲ್ಲಿದೆ. ಮಾದಮಂಗಲದಿಂದ ಮಣಿನಹಳ್ಳಿವರೆಗೆ 20 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಬೇಕಿದೆ ಅಮ್ಮನಲ್ಲೂರಿನಿಂದ ಕ್ಯಾಲನೂರು ರಸ್ತೆ ಕಾಮಗಾರಿ 2 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಚಂಜಿಮಲೆಯಿಂದ ಬೈರಂಡಹಳ್ಳಿ, ಕಡಗಟ್ಟೂರು, ಕಾಮಂಡಹಳ್ಳಿವರೆಗೆ 5 ಕೋಟಿ ವೆಚ್ಚದಲ್ಲಿ ಕೆಲಸ ನಡೆಯಲಿದೆ ಎಂದು ತಿಳಿಸಿದರು
ಸುಮಾರು 60 ಕೋಟಿಯ ಅನುದಾನದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ನವೀಕರಣ, ಪಾದಚಾರಿ ಮಾರ್ಗ ಹಾಗೂ ಉದ್ಯಾನವನ ಅಭಿವೃದ್ಧಿ ಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಬೇಕಿದೆ ಎಂದರು.
ವೇಮಗಲ್, ನರಸಾಪುರ ಹೋಬಳಿಯಲ್ಲಿ ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ಬಾಕಿ ಇಲ್ಲ. ಶೇ 90ರಷ್ಟು ಕಾಮಗಾರ ಕೈಗೆತ್ತಿಕೊಳ್ಳಲಾಗಿದೆ. ಕೆಲವೆಡೆ ಸಂಪೂರ್ಣ ಹಾಳಾಗಿದ್ದು, ಹೊಸದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಸೆ.20ಕ್ಕೆ ವೇಮಗಲ್‌ನಲ್ಲಿ ಉದ್ಯಾನವನ, ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಸೇರಿದಂತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಪರಿಶಿಷ್ಟ ಜಾತಿ, ಪಂಗಡದ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್ ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಮೈಲಾಂಡಹಳ್ಳಿ ಮುರಳಿ, ಉರಟಾಗ್ರಹಾರ ಚೌಡರೆಡ್ಡಿ, ಮುಂತಾದವರು ಇದ್ದರು