ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು – ಡಾ.ಹೆಚ್.ರವಿಕುಮಾರ್ 

ಕೋಲಾರ: ಸಮಾಜದಲ್ಲಿ ಶೋಷಿತ ಸಮುದಾಯಗಳಲ್ಲಿ ಮಡಿವಾಳ ಸಮುದಾಯವು ಒಂದಾಗಿದ್ದು ರಾಜಕೀಯ, ಶೈಕ್ಷಣಿಕ, ಆರ್ಥಿಕ ಸ್ಥಾನಮಾನಗಳಿಗಾಗಿ ಸರಕಾರವು ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕಾಗಿದೆ. ಇದಕ್ಕೆ ಒಗ್ಗಟ್ಟಿನಿಂದ ಸರಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಹೆಚ್ ರವಿಕುಮಾರ್ ಕರೆ ನೀಡಿದರು.

ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಮಡಿವಾಳ ಜನಾಂಗದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ 5 ಮತ್ತು 6ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮುದಾಯವಾಗಲಿ ರಾಜಕೀಯ ಶಕ್ತಿ ಇದ್ದರೆ ಅಷ್ಟೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಇವತ್ತಿನ ಮೂರು ರಾಜಕೀಯ ಪಕ್ಷಗಳಿಗೆ ಮಡಿವಾಳ ಸಮುದಾಯದ ಬಗ್ಗೆ ಕಾಳಜಿ ಮತ್ತು ಇಚ್ಛಾಶಕ್ತಿ ಕೊರತೆಯಾಗಿದೆ. ನಾವು ಎಲ್ಲರೂ ಒಗ್ಗಟ್ಟು ಆಗದೆ ಹೋದರೆ ಮುಂದಿನ ದಿನಗಳಲ್ಲಿ ನಮಗೆಲ್ಲ ಉಳಿಗಾಲವಿಲ್ಲ ಎಂದರು.

ಸಮಾಜದಲ್ಲಿನ ಕೇವಲ ಅರ್ಹತೆಯ ಆಧಾರದ ಮೇಲೆ ನೌಕರಿ ಸಿಗುತ್ತದೆ ಒಂದಿಷ್ಟು ಜನಕ್ಕೆ ಅವಕಾಶ ಸಿಕ್ಕರೂ ಅವಮಾನ ಅಸಮಾನತೆಯ ಜಾತಿಯ ಮುಂದಿಟ್ಟು ಪ್ರಮುಖ ಹುದ್ದೆಗಳನ್ನು ತಪ್ಪಿಸಲಾಗುತ್ತಿದೆ. ಜನಸಂಖ್ಯೆ ಮತ್ತು ಜಾತಿಯ ಆಧಾರದ ಮೂಲಕ ಚುನಾವಣಾ ಸ್ಥಾನಮಾನಗಳನ್ನು ಕೊಡಲಾಗುತ್ತಿದೆ ಹೊರತು ಸಣ್ಣ ಸಣ್ಣ ಸಮುದಾಯಗಳಿಗೆ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿದ್ದಾರೆ. ಮಡಿವಾಳ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗವೇ ದಾರಿದ್ವೀಪವಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಸಮಾಜದಲ್ಲಿ ವೃತ್ತಿ ಮತ್ತು ಜಾತಿಗಳು ಅಸಮಾನತೆ, ಶೋಷಣೆ, ದಬ್ಬಾಳಿಕೆಗಳಿಂದ ಕಾಯಕ ಸಮುದಾಯಗಳಿಗೆ ಶಾಪವಾಗಿದೆ. ಎಲ್ಲಾ ಸಮುದಾಯಗಳಲ್ಲಿ ಬಡವರು ಇದ್ದು ಅಂತವರಿಗೆ ಮೀಸಲಾತಿ ನೀಡಬೇಕು. ಪ್ರತಿ ಸಮುದಾಯಕ್ಕೂ ನಿಗಮ ಮಾಡಿ ಒಂದಿಷ್ಟು ಅನುದಾನ ಅಂತ ಕೊಡುವುದು ಬಿಟ್ಟು ಸರಕಾರದ ಸಂಪುಟದ ಉಪಸಮಿತಿ ರಚನೆ ಮಾಡಿ ಅದರ ನೇತೃತ್ವದಲ್ಲಿ ಸಣ್ಣ ಸಣ್ಣ ಸಮುದಾಯಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಡಿವಾಳ ಸಮುದಾಯದ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಸಮುದಾಯದ ಪರವಾಗಿ ರಾಜಕೀಯವಾಗಿ ಧ್ವನಿ ಎತ್ತುವವರು ಇಲ್ಲವಾಗಿದೆ. ಮಡಿವಾಳ ಸಮುದಾಯವು ಒಗ್ಗಟ್ಟನ್ನು ಪ್ರದರ್ಶಿಸಿ ರಾಜಕೀಯ ಶಕ್ತಿಯಾಗಿ ಗುರುತಿಸಿಕೊಳ್ಳಬೇಕು. ವಿಧ್ಯಾರ್ಥಿಗಳು ಸತತ ಪ್ರಯತ್ನದಿಂದ ಉನ್ನತ ಸ್ಥಾನಮಾನ ಪಡೆದು ಸಮುದಾಯದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಶ್ರಮಿಸಬೇಕು ಎಂದರು.

ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಸಿ.ವಿ ವೆಂಕಟೇಶ್, ನಿವೃತ್ತ ಇಂಜಿನಿಯರ್ ನಾರಾಯಣಸ್ವಾಮಿ, ಕೆಜಿಎಫ್ ಆರ್.ಟಿ.ಒ ಶ್ರೀನಿವಾಸಮೂರ್ತಿ, ಸಮುದಾಯ ಮುಖಂಡರಾದ ಗಿರೀಶ್ ಬಾಬು, ಕೆ.ಎಂ ಕೃಷ್ಣಪ್ಪ, ವಿ.ಅಮರನಾಥ್, ಕೆ.ಸಿ ಮುಖೇಶ್, ಸುಬ್ರಮಣಿ, ಅಮರಾವತಿ ರಾಜಣ್ಣ, ಸೋಮಶೇಖರ್, ಮುಂತಾದವರು ಇದ್ದರು

 

Leave a Reply

Your email address will not be published. Required fields are marked *