ಗಣೇಶ ಹಬ್ಬಕ್ಕೆ ಕೋಲಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ 

ಕೋಲಾರ: ಗಣೇಶ ಹಬ್ಬಕ್ಕೆ ಕೋಲಾರ ಸಜ್ಜುಗೊಳ್ಳುತ್ತಿದ್ದು, ಅದ್ದೂರಿ ಆಚರಣೆಗೆ ಜನತೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೋಲಾರ ನಗರ ಹಾಗೂ ಗ್ರಾಮೀಣ ಭಾಗದ ಹಲವೆಡೆ ಅದ್ದೂರಿಯಾಗಿ ಆಚರಣೆ ಮಾಡಲು ಮುಂದಾಗಿದ್ದು, ಒಂದು ವಾರ ಬಾಕಿ ಇರುವಾಗಲೇ ಬೃಹದಾಕಾರದ ಗಣೇಶ ಮೂರ್ತಿಯನ್ನು ಕೂರಿಸಲು ಟೆಂಟ್‌ಗಳನ್ನು ಅಳವಡಿಸಿ ಸಿದ್ದತೆ ಕೈಗೊಂಡಿದ್ದಾರೆ.

ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ದತೆಗಳನ್ನು ಕೈಗೊಳ್ಳುತ್ತಿರುವಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಹಲವಾರು ಮಾರ್ಗಸೂಚಿಗಳನ್ನು ವಿಧಿಸಿದ್ದಾರೆ. ಕೋಲಾರ ಸೂಕ್ಷ ಪ್ರದೇಶವಾಗಿರುವುದರಿಂದ ಜಿಲ್ಲಾ ವರಿಷ್ಟಾಧಿಕಾರಿ ನಿಖಿಲ್ ಬಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈದ್ ಮಿಲಾದ್ ಹಬ್ಬ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಕುರಿತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಆಯೋಜಕರು, ಮುಖಂಡರ ಸಭೆ ನಡೆಸಿ ಹಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ.

ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸುವವರು ಕಡ್ಡಾಯವಾಗಿ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಸೂಕ್ಷ್ಮ ಪ್ರದೇಶದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಹಬ್ಬ ಆಚರಣೆ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪಾಲನೆ ಮಾಡಬೇಕು. ರಾಸಾಯನಿಕ ಮುಕ್ತ ವಿಗ್ರಹಗಳನ್ನು ಬಳಸಬೇಕು. ಆಸ್ಪತ್ರೆ, ಶಾಲೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ.

ಈ ಬಾರಿ ಗಣೇಶ ಹಬ್ಬಕ್ಕೆ ಹಲವಾರು ರೀತಿಯಲ್ಲಿ ನಿಬಂಧನೆಗಳನ್ನು ಜಿಲ್ಲಾಢಳಿತ ವತಿಯಿಂದ ವಿಧಿಸಿದ್ದು ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಮುಂತಾದ ಪರವಾನಿಗೆಗಳನ್ನು ಎಲ್ಲಾ ತಹಸೀಲ್ದಾರ್ ಕಚೇರಿಯಲ್ಲಿ ಏಕಗವಾಕ್ಷಿ ಪದ್ಧತಿಯಡಿ ಪಡೆದುಕೊಳ್ಳಬೇಕು. ಶುಭಾಶಯ ಕೋರುವ ಬ್ಯಾನರ್, ಬಂಟಿಂಗ್ಸ್ ಗಳನ್ನು ಅಳವಡಿಸಲು ಆಯಾ ಸ್ಥಳೀಯ ಪ್ರಾಧಿಕಾರದಿಂದ ತಪ್ಪದೇ ಅನುಮತಿ ಪಡೆದುಕೊಳ್ಳಬೇಕು. ಪೆಂಡಾಲುಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಪರವಾನಿಗೆ ಪಡೆಯಬೇಕಾದ ಅನಿವಾರ್ಯ ಎದುರಾಗಿದೆ.

ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರಸಭೆ ವತಿಯಿಂದ ಕೋಲಾರ ನಗರದ ಕುರುಬರಪೇಟೆಗೆ ಹೊಂದಿಕೊಂಡಿರುವ ಕೋಲಾರಮ್ಮ ಕೆರೆ ಅಂಗಳದಲ್ಲಿ ನಿರ್ಮಿಸಲಾಗಿರುವ ಹೊಂಡದಲ್ಲಿ ಅವಕಾಶ ಕಲ್ಪಿಸಲಾಗಿದ್ದು ಹೊಂಡವನ್ನು ಸ್ವಚ್ಚತೆ ಮಾಡುವ ಕಾರ್ಯವನ್ನು ನಗರಸಭೆ ವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ. ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರೇನ್ ವ್ಯವಸ್ಥೆಯನ್ನು ಮಾಡಲಾಗಿದೆ.

ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಹಾಗೂ ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳ ಓಡಾಟಕ್ಕೆ ತೊಂದರೆ ಮಾಡಲು ಅವಕಾಶವಿರುವುದಿಲ್ಲ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಸ್ಪಷ್ಟ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ವಿಧಿಸಿದೆ.
ಕೋಲಾರ ಜಿಲ್ಲೆಯ ಸಾರ್ವಜನಿಕರು ಇದುವರೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ. ಮುಂದೆಯು ಸಹ ಸಹಕಾರ ನೀಡಿ ಎರಡೂ ಹಬ್ಬಗಳು ಶಾಂತಿಯಿಂದ ನೆರವೇರಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಮನವಿ ಮಾಡಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗಣೇಶ ಹಬ್ಬ ಆಚರಣೆಗೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮುಖಂಡರು ಹಾಗೂ ಸಾರ್ವಜನಿಕರ ಶಾಂತಿ ಸಭೆಗಳನ್ನು ನಡೆಸಿದ್ದು ಹಬ್ಬದ ಆಚರಣೆಯಲ್ಲಿ ಪಾಲಿಸಬೇಕಾದ ಕಾನೂನಿಗ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಪೊಲೀಸ್ ಇಲಾಖೆಯಿಂದ ನಡೆಸುತ್ತಿದ್ದಾರೆ. ಗಣೇಶ ಹಬ್ಬದಲ್ಲಿ ಕಿಂಚಿತ್ತು ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದಾರೆ.

Leave a Reply

Your email address will not be published. Required fields are marked *