ಚಿಕ್ಕಬಳ್ಳಾಪುರ: ಟಿಟಿ ವಾಹನ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗೇಟ್ ಬಳಿ ತಡರಾತ್ರಿ ನಡೆದಿದೆ.
ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನೆಲ್ಲೂರು ಜಿಲ್ಲೆಯ ಶ್ರೀಕಾಂತ್, ಶ್ರೀನಿವಾಸಲು ಮತ್ತು ಪುಷ್ಪ ಎಂದು ಗುರುತಿಸಲಾಗಿದೆ.
ಇನ್ನು ಟಿಟಿ ವಾಹನದಲ್ಲಿದ್ದ 12 ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಟಿಟಿ ವಾಹನ ಒಂದಕ್ಕೊಂದು ಅಂಟಿಕೊಂಡಿವೆ. ಎರಡೂ ವಾಹನಗಳು ಜಾಮ್ ಆದ ಕಾರಣ ವಾಹನಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆಗೆಯಲಾಯಿತು.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಕ್ಷಣ ಎಸ್ ಪಿ ಕುಶಾಲ್ ಚೌಕ್ಸೆ, ಎಎಸ್‌ಪಿ ಖಾಸಿಂ ರಜ, ಡಿವೈಎಸ್ಪಿ ಮುರಳಿಧರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.