ಕೋಲಾರ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿಭಾಗಗಳಿಂದ ತಲಾ ಒಬ್ಬೊಬ್ಬರಂತೆ ಪ್ರತಿ ತಾಲ್ಲೂಕಿಗೆ ಮೂವರಂತೆ ಒಟ್ಟು 18 ಮಂದಿಯನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಡಿಡಿಪಿಐ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳ ಮುಖಂಡರೂ ಇದ್ದು ಪ್ರತಿ ತಾಲ್ಲೂಕಿನಿಂದ ಪ್ರೌಢ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ವಿಭಾಗಗಳಿಂದ ಒಬ್ಬೊಬ್ಬರಂತೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೆ.5ರ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ 5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ ಪ್ರಶಸ್ತಿ ಪತ್ರ ನೀಡಿ ಅವರನ್ನು ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.
ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 18 ಮಂದಿ ಶಿಕ್ಷಕರು ಈ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಎಲ್ಲಾ ಶಿಕ್ಷಕರಿಗೆ ಡಿಡಿಪಿಐ ಅವರು ಅಭಿನಂದನೆ ತಿಳಿಸಿದ್ದು, ಶಿಕ್ಷಕರ ಕಾರ್ಯಚಟುವಟಿಕೆಗಳು ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆ, ಶಾಲಾ ಪರಿಸರ ನಿರ್ಮಾಣ, ಶಾಲೆಯಲ್ಲಿ ಶಿಸ್ತು, ದಾನಿಗಳ ನೆರವಿನಿಂದ ಶಾಲೆ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಅವರ ಪ್ರಗತಿದಾಯಕ ಅಂಶಗಳನ್ನು ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತಮ ಶಿಕ್ಷಕರನ್ನು ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಶಿಕ್ಷಕರಿಗೆ ಶಾಲೆ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಪ್ರೇರಣೆ ನೀಡುವ ಪ್ರಯತ್ನ ಇದಾಗಿದ್ದು, ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿಯವರು ಕಾರ್ಯಕ್ರಮದಲ್ಲು ಉಪಸ್ಥಿತರಿರುವರು ಎಂದು ತಿಳಿಸಿದರು.
ಆಯ್ಕೆ ಸಮಿತಿಯಿಂದ ಶಿಕ್ಷಕರ ಹೆಸರು ಪ್ರಕಟ:
ಡಿಡಿಪಿಐ ಕೃಷ್ಣಮೂರ್ತಿ ಅಧ್ಯಕ್ಷರ ಆಯ್ಕೆ ಸಮಿತಿಯಲ್ಲಿ ಡಯಟ್ ಪ್ರಾಂಶುಪಾಲ ರಾಮಕೃಷ್ಣಯ್ಯ, ಬಿಇಡಿ ಕಾಲೇಜು ಉಪಪ್ರಾಂಶುಪಾಲ ಜಗದೀಶ್, ಶಿಕ್ಷಣ ತಜ್ಞರಾದ ಕೆ.ವಿ.ಜಗನ್ನಾಥ್, ಸವಿತಾ ಶರ್ಲೀನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರುಗಳು, ನೊಡಲ್ ಅಧಿಕಾರಿಯಾಗಿ ಶಂಕರೇಗೌಡ, ಶಿಕ್ಷಣಾಧಿಕಾರಿಗಳಾದ ವೀಣಾ, ವಿಷಯ ಪರಿವೀಕ್ಷಕ ಸೈಯದ್ ಸನಾವುಲ್ಲ ಇದ್ದರು.
ಆಯ್ಕೆಯಾದ ಪ್ರೌಢಶಾಲಾ ಶಿಕ್ಷಕರು:
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರೆಂದರೆ ಕೋಲಾರ ತಾಲ್ಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲ್ಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲ್ಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲ್ಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲ್ಲೂಕು ತಾಯಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಮುಜೀಬ್‌ಖಾನ್, ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಕ್ಷೇತ್ರ, ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ದಿ – ಸಿಎಂ ಸಿದ್ದರಾಮಯ್ಯ
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು:
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ದೋಣಿಮಡಗು ಶಾಲೆಯ ಬಡ್ತಿ ಮುಖ್ಯಶಿಕ್ಷಕ ಜಿ.ಮುನಿಸ್ವಾಮಿ, ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಗ್ರಾಮದಸರ್ಕಾರಿ ವರಲಕ್ಷ್ಮಮ್ಮ, ಕೋಲಾರ ತಾಲ್ಲೂಕಿನ ಅಂಕತಟ್ಟಿ ಶಾಲೆಯ ಶಿಕ್ಷಕ ಎಸ್.ರಮೇಶಬಾಬು, ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಶಾಲೆ ಬಡ್ತಿ ಮುಖ್ಯಶಿಕ್ಷಕಿ ಹೆಚ್.ಆರ್.ಜ್ಯೋತಿಪ್ರಭಾ, ಮುಳಬಾಗಿಲು ತಾಲ್ಲೂಕು ಕೊಲದೇವಿ ಶಾಲೆಯ ಶಿಕ್ಷಕ ಸಿ.ಎನ್.ರಮೇಶ್, ಶ್ರೀನಿವಾಸಪುರ ತಾಲ್ಲೂಕು ಯದರೂರು ಶಾಲೆ ಸಹಶಿಕ್ಷಕ ವಿ.ಮುನಿಸ್ವಾಮಿ ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರು:
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ರಾಮಸಂದ್ರ ಶಾಲೆಯ ಆನಂದ್, ಕೆಜಿಎಫ್ ತಾಲ್ಲೂಕಿನ ಮರವೂರು ಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬಿ.ನಾರಾಯಣಪ್ಪ, ಕೋಲಾರ ತಾಲ್ಲೂಕಿನ ಕೊಳಗಂಜನಹಳ್ಳಿ ಶಾಲೆಯ ಶಿಕ್ಷಕಿ ಸಿ.ಮುನಿಯಪ್ಪ, ಮಾಲೂರು ತಾಲ್ಲೂಕು ಚಿಕ್ಕಶಿವಾರ ಶಾಲೆಯ ಕೆ.ವಿ.ಪ್ರಮೀಳಾ, ಮುಳಬಾಗಿಲು ತಾಲ್ಲೂಕಿನ ಗೊಟ್ಟುಕುಂಟೆ ಶಾಲೆಯ ವಿ.ಉಮಾ, ಶ್ರೀನಿವಾಪುರ ತಾಲ್ಲೂಕು ಕೆಂಪರೆಡ್ಡಿವಾರಿಪಲ್ಲಿ ಶಾಲೆಯ ಶಿಕ್ಷಕ ವೈ.ಆರ್. ಲಕ್ಷ್ಮೀ ನಾರಾಯಣ ಭಾಜನರಾಗಿದ್ದಾರೆ.