ಕೋಲಾರ: ಜಿಲ್ಲೆಗೆ ಶಾಶ್ವತವಾದ ಶುದ್ದ ಕುಡಿಯುವ ನೀರಿಗಾಗಿ ಅಗ್ರಹಿಸಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ 11ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸೆ.7 ರಿಂದ ಸೆ.15 ರವರಗೆ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಓಂ ಶಕ್ತಿ ಚಲಪತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸುಮಾರು 20 ಅಡಿ ಎತ್ತರ 15 ಅಡಿ ಅಗಲದ ವಿಶೇಷವಾದ ಗಣೇಶೋತ್ಸವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಶನಿವಾರದಂದು ಪ್ರಾರಂಭವಾಗಿ ಸೆ.15 ರಂದು ವಿಸರ್ಜನೆ ಮೂಲಕ ಕೊನೆಗೊಳ್ಳುತ್ತದೆ. 9 ದಿನಗಳು ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಗಳು ಗಣೇಶೋತ್ಸವ ಭಾಗವಾಗಿ ಸಮಿತಿಯ ಸದಸ್ಯರು ನಡೆಸಿಕೊಡಲಿದ್ದಾರೆ ಎಂದರು.
ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾಮಿಡಿಯನ್ ಮಿಮಿಕ್ರಿ ಗೋಪಿ ಸೇರಿದಂತೆ ಮಜಾಭಾರತ ತಂಡ, ಗಾಯಕ ರಾಜೇಶ್ ಕೃಷ್ಣನ್ ಅಥವಾ ಹೇಮಂತ್ ಕುಮಾರ್ ಅವರು ಭಾಗವಹಿಸಲಿದ್ದಾರೆ. ಬಂಗಾರಪೇಟೆ ವೃತ್ತದಿಂದ ಡೂಂಲೈಟ್ ವೃತ್ತದವರೆಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಕೊನೆಯ ದಿನ ನಗರದ ಎಂಜಿ ರಸ್ತೆ, ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಹೊಸ ಬಸ್ ನಿಲ್ದಾಣ, ಅಮ್ಮವಾರಿ ಪೇಟೆ, ಕಾಲೇಜು ವೃತ್ತದ ಮಾರ್ಗವಾಗಿ ಕೋಲಾರಮ್ಮ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ. ದಕ್ಷಿಣ ರಾಜ್ಯಗಳ ಕಲಾ ತಂಡಗಳು ಸೇರಿದಂತೆ ಸ್ಥಳೀಯ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಇದರಿಂದಾಗಿ ಬೇರೆಯವರು ಸಾಧನೆ ಮಾಡಲು ಪೇರಣೆಯಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು
ಈ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಪಲ್ಲವಿ ಮಣಿ, ನಾಮಲ್ ಮಂಜು, ಸಾ.ಮಾ.ಅನಿಲ್ ಬಾಬು, ಗಂಗಮ್ಮನಪಾಳ್ಯ ಚಂದ್ರನ್, ಹರೀಷ್, ಬಾಲು , ಚಂದ್ರಶೇಖರ್, ಶಶಿಧರ್, ಸಂತೋಷ್, ಮುರಳಿ, ವಿನಾಯಕ ಮುಂತಾದವರು ಇದ್ದರು